ಬೆಂಗಳೂರು:ರಾಜ್ಯ ಬಿಜೆಪಿಯಲ್ಲಿ ಬಣ ಬಡಿದಾಟದ ಬೆನ್ನಲ್ಲೇ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ದೆಹಲಿಗೆ ತೆರಳಿರುವುದು ಕುತೂಹಲ ಮೂಡಿಸಿದೆ. ನಿನ್ನೆ ರಾತ್ರಿಯೇ ದೆಹಲಿಗೆ ತೆರಳಿರುವ ವಿಜಯೇಂದ್ರ, ಇಂದು ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರನ್ನು ಭೇಟಿಯಾಗಿ ರಾಜ್ಯ ಬಿಜೆಪಿಯೊಳಗಿನ ಇತ್ತೀಚಿನ ಬೆಳವಣಿಗೆಗಳ ಬಗ್ಗೆ ಮಾಹಿತಿ ನೀಡಲಿದ್ದಾರೆ ಎಂದು ತಿಳಿದು ಬಂದಿದೆ.
ವಕ್ಫ್ ನೋಟಿಸ್ ವಿರುದ್ಧ ಪಕ್ಷದ ಅನುಮತಿ ಪಡೆಯದೇ ಜನಜಾಗೃತಿ ಅಭಿಯಾನ ನಡೆಸುತ್ತಿರುವ ಯತ್ನಾಳ್ ಹಾಗೂ ಅವರ ತಂಡ ಪಕ್ಷಕ್ಕೆ ವಂಚಿಸುತ್ತಿದೆ. ಕೂಡಲೇ ಅವರಿಗೆ ಕಡಿವಾಣ ಹಾಕಬೇಕು ಮನವಿ ಮಾಡುವ ಸಾಧ್ಯತೆ ಇದೆ. ಜನಜಾಗೃತಿ ಅಭಿಯಾನದ ವೇಳೆ ರಾಜ್ಯ ಸರ್ಕಾರದ ವೈಫಲ್ಯಗಳ ವಿರುದ್ಧ ಮಾತನಾಡುವ ಬದಲು ನಮ್ಮ ಕುಟುಂಬದ ವಿರುದ್ಧ ಟೀಕೆ ಮಾಡುತ್ತಾ ಪಕ್ಷಕ್ಕೆ ಮುಜುಗರ ಸೃಷ್ಟಿಸುತ್ತಿದ್ದಾರೆ. ಇದು ಆಡಳಿತಾರೂಢ ಕಾಂಗ್ರೆಸ್‌ಗೆ ಆಹಾರವಾಗಿ ಸಿಕ್ಕಿದೆ. ಹೀಗಾಗಿ, ಯತ್ನಾಳ್ ಮೇಲೆ ಶಿಸ್ತು ಕ್ರಮ ಕೈಗೊಳ್ಳಬೇಕು ಎಂದು ವರಿಷ್ಠರಿಗೆ ದೂರು ನೀಡಲಿದ್ದಾರೆ ಎನ್ನಲಾಗುತ್ತಿದೆ.
ಈ ಬೆಳವಣಿಗೆಗಳ ನಡುವೆ ರಾಷ್ಟ್ರೀಯ ನಾಯಕರು ರಾಜ್ಯಕ್ಕೆ ಆಗಮಿಸುತ್ತಿದ್ದು, ಎರಡು ಬಣಗಳ ನಡುವೆ ಮಾತುಕತೆ ನಡೆಸುವ ಸಾಧ್ಯತೆ ಇದೆ. ಡಿಸೆಂಬರ್ 3ರಂದು ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ತರುಣ್ ಚುಗ್ ರಾಜ್ಯಕ್ಕೆ ಬರಲಿದ್ದಾರೆ. ಪಕ್ಷದ ಸಂಘಟನಾ ಕಾರ್ಯಕ್ರಮದ ನಿಮಿತ್ತ ಅವರು ರಾಜ್ಯಕ್ಕೆ ಆಗಮಿಸಿಸುತ್ತಿದ್ದರಾದರೂ, ಈ ಭೇಟಿಯ ಸಂದರ್ಭದಲ್ಲಿ ಭಿನ್ನಾಭಿಪ್ರಾಯಗಳ ಬಗ್ಗೆಯೂ ಮಾತುಕತೆ ನಡೆಸುವ ಸಾಧ್ಯತೆಗಳಿದೆ.
ರಾಜ್ಯಕ್ಕೆ ಆಗಮಿಸುತ್ತಿರುವ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ತರುಣ್ ಚುಗ್ ಅವರನ್ನು ನಾನು ವೈಯಕ್ತಿಕವಾಗಿ ಭೇಟಿ ಮಾಡುವುದಿಲ್ಲ. ಬದಲಾಗಿ, ನಮ್ಮ ಗುಂಪನ್ನು ಮಾತುಕತೆಗೆ ಕರೆದರೆ ಹೋಗುತ್ತೇನೆ ಎಂದು ಈಗಾಗಲೇ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದ್ದಾರೆ. ನನ್ನ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳುತ್ತೇನೆ ಎಂದಾದರೆ ಕೈಗೊಳ್ಳಲಿ ಎಂದು ಸವಾಲು ಹಾಕಿದ್ದಾರೆ.