ಬೆಂಗಳೂರು : ಪುತ್ರನಿಗೆ ಟಿಕೆಟ್ ಸಿಗದಿರುವುದರಿಂದಾಗಿ ಮಾಜಿ ಸಚಿವ ಕೆ.ಎಸ್ ಈಶ್ವರಪ್ಪ ಆಕ್ರೋಶಗೊಂಡಿರುವುದು ಸಹಜ. ಮುಂದೆ ಎಲ್ಲವೂ ಸರಿಯಾಗಲಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಸ್ಪಷ್ಟಪಡಿಸಿದ್ದಾರೆ.
ಹನುಮಂತನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಾಜಿ ಸಿಎಂ ಬಿ.ಎಸ್ ಯಡಿಯೂರಪ್ಪ ಹಾಗು ನನ್ನ ವಿರುದ್ಧ ಈಶ್ವರಪ್ಪ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಎಲ್ಲದಕ್ಕೂ ಕ್ಷೇತ್ರದ ಮತ್ತು ರಾಜ್ಯದ ಜನ ಉತ್ತರ ಕೊಡುತ್ತಾರೆ. ನಾನು ಹೆಚ್ಚಿಗೆ ಮಾತಾಡಲು ಇಷ್ಟಪಡುವುದಿಲ್ಲ. ಈಶ್ವರಪ್ಪ ನಮ್ಮ ಪಕ್ಷದ ಹಿರಿಯರು ಅವರ ಜತೆ ಮಾತನಾಡುತ್ತೇವೆ. ಅವರು ನೋವಿನಲ್ಲಿ ಇದ್ದಾರೆ, ಎಲ್ಲವೂ ಸುಸೂತ್ರವಾಗಿ ಬಗೆಹರಿಯಲಿದೆ. ಯಾರೋ ಒಬ್ಬರ ಮಾತು ಕೇಳಿ ನಮ್ಮ ಪಕ್ಷದಲ್ಲಿ ಟಿಕೆಟ್ ಕೊಡಲ್ಲ. ಕೇಂದ್ರದ ವರಿಷ್ಠರು ಎಲ್ಲರೂ ಕುಳಿತು ಚರ್ಚೆ ಮಾಡಿ ಟಿಕೆಟ್ ಕೊಟ್ಟಿದ್ದಾರೆ. ಎಲ್ಲರ ಒಮ್ಮತದ ತೀರ್ಮಾನದಿಂದ ಅಭ್ಯರ್ಥಿ ಘೋಷಣೆ ಆಗಿದೆ. ಒಬ್ಬರ ತೀರ್ಮಾನದಿಂದ ಅಭ್ಯರ್ಥಿಗಳ ಆಯ್ಕೆ ಆಗಿಲ್ಲ ಎಂದು ತಿಳಿಸಿದರು.
ನಾಳೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಕಾರ್ಯಕ್ರಮಕ್ಕೆ ಈಶ್ವರಪ್ಪ ಬರುವ ವಿಚಾರದ ಕುರಿತು ಪ್ರತಿಕ್ರಿಯಿಸಿದ ವಿಜಯೇಂದ್ರ, ಇವತ್ತು ಶಿವಮೊಗ್ಗಕ್ಕೆ ಹೋಗುತ್ತಿದ್ದೇನೆ. ನೋಡೋಣ ಅವರ ಜೊತೆ ಮಾತನಾಡುತ್ತೇನೆ ಎಂದರು. ಇದೇ ವೇಳೆ ಬಿಜೆಪಿ ವರಿಷ್ಠರನ್ನು ಹೆಚ್ಡಿಕೆ ಭೇಟಿ ಮಾಡಿರುವ ಬಗ್ಗೆ ಕೇಳಿದಾಗ ಎರಡನೇ ಪಟ್ಟಿ ಆದಷ್ಟು ಬೇಗ ಪ್ರಕಟ ಆಗಲಿದೆ. ಹೆಚ್.ಡಿ ಕುಮಾರಸ್ವಾಮಿ ನಮ್ಮ ರಾಷ್ಟ್ರೀಯ ನಾಯಕರನ್ನು ನಿನ್ನೆ ಭೇಟಿ ಮಾಡಿದ್ದಾರೆ. ಅವರ ಮಧ್ಯೆ ಏನೇನು ಚರ್ಚೆ ಆಗಿದೆ ಎಂದು ಗೊತ್ತಿಲ್ಲ. ಇನ್ನೆರಡು ದಿನಗಳಲ್ಲಿ ಟಿಕೆಟ್ ಅಂತಿಮ ಆಗಲಿದೆ ಎಂದು ತಿಳಿಸಿದರು.
ಕೈಲಾದಷ್ಟು ಈಶ್ವರಪ್ಪ ಮನವೊಲಿಕೆ ಮಾಡುತ್ತೇವೆ- ಆರ್. ಅಶೋಕ್ :ಮತ್ತೊಂದೆಡೆ ಮಾತನಾಡಿರುವ ಪ್ರತಿಪಕ್ಷ ನಾಯಕ ಆರ್.ಅಶೋಕ್ ಈಶ್ವರಪ್ಪ ಅವರು ಪಕ್ಷದ ನಾಯಕರು. ಅವರ ಜೊತೆ ನಾನೂ ಕೂಡಾ ಮಾತನಾಡುತ್ತೇನೆ, ಅವರ ಮನವೊಲಿಸುತ್ತೇನೆ. ಹಿರಿಯ ನಾಯಕರಾದ ಯಡಿಯೂರಪ್ಪ ಮತ್ತು ಈಶ್ವರಪ್ಪ ನಡುವೆ ಆಗಿರುವ ಮಾತುಕತೆ ಬಗ್ಗೆ ಗೊತ್ತಿಲ್ಲ. ನಾಲ್ಕು ಗೋಡೆಗಳ ಮಧ್ಯೆ ಏನೇನು ಮಾತುಕತೆ ಆಗಿದೆಯೋ ಗೊತ್ತಿಲ್ಲ. ಆದರೆ ನಮ್ಮಿಂದ ಕೈಲಾದಷ್ಟು ಸಂಧಾನ ಮಾಡುತ್ತೇವೆ. ಟಿಕೆಟ್ ಕೊಟ್ಟಿದ್ದು ಪಕ್ಷ, ಅದರ ಬಗ್ಗೆ ನಾವು ಮಾತನಾಡಕ್ಕಾಗಲ್ಲ ಎಂದರು.
ಮೋದಿ ಕಾರ್ಯಕ್ರಮಕ್ಕೆ ಈಶ್ವರಪ್ಪ ಗೈರಾಗುವ ವಿಚಾರದ ಬಗ್ಗೆ ಈಶ್ವರಪ್ಪ ಜತೆ ಸಂಸದ ರಾಘವೇಂದ್ರ ಸಹ ಮಾತನಾಡುತ್ತಿದ್ದಾರೆ ಎಲ್ಲವೂ ಸರಿಯಾಗುವ ವಿಶ್ವಾಸ ಇದೆ ಎಂದು ಹೇಳಿದರು. ಜೆಡಿಎಸ್ ಮೂರು ಕ್ಷೇತ್ರ ಕೇಳಿರುವ ವಿಚಾರದ ಕುರಿತು ಪ್ರತಿಕ್ರಿಯೆ ನೀಡಿದ ಅಶೋಕ್ ಜೆಡಿಎಸ್ ಜತೆ ಸೌಹಾರ್ದಯುತ ಮಾತುಕತೆ ನಡೆಯುತ್ತಿದೆ. ಜೆಡಿಎಸ್ ನವರು ಮೂರು ನಾಲ್ಕು ಕ್ಷೇತ್ರ ಕೇಳುತ್ತಿದ್ದಾರೆ. ಆದರೆ ಗೆಲ್ಲುವುದು ಮಾನದಂಡ ಆಗಿದೆ. ಹೀಗಾಗಿ ಎರಡೂ ಕಡೆಯೂ ಮಾತಾಡಿ ತೀರ್ಮಾನ ಆಗಲಿದೆ. ಎಲ್ಲವೂ ಆದಷ್ಟು ಬೇಗ ಆಗಲಿದೆ ಎಂದು ತಿಳಿಸಿದರು.
ಕಾಂಗ್ರೆಸ್ ನಿಂದ ಟಿಕೆಟ್ ವಂಚಿತ ಹಿರಿಯ ನಾಯಕ ಡಿವಿ ಸದಾನಂದ ಗೌಡರಿಗೆ ಗಾಳ ಹಾಕಿರುವ ಅವರನ್ನು ಕಾಂಗ್ರೆಸ್ ನಾಯಕರು ಸಂಪರ್ಕ ಮಾಡಿರುವ ವಿಚಾರ ನನ್ನ ಗಮನಕ್ಕೆ ಬಂದಿಲ್ಲ. ಸದಾನಂದಗೌಡರು ನಮ್ಮ ಹಿರಿಯರು, ನಾವೆಲ್ಲರೂ ಅವರಿಗೆ ಟಿಕೆಟ್ ಕೊಡಿ ಅಂತ ಕೇಳಿದ್ದೆವು. ಆದರೆ ಪಾರ್ಟಿ ತೀರ್ಮಾನಿಸಿ ಶೋಭಾ ಕರಂದ್ಲಾಜೆಗೆ ಟಿಕೆಟ್ ನೀಡಿದೆ. ಪಕ್ಷದ ತೀರ್ಮಾನವನ್ನು ನಾವು ಒಪ್ಪಿಕೊಳ್ಳಲೇಬೇಕು. ಸದಾನಂದ ಗೌಡರ ಜೊತೆಗೂ ಮಾತನಾಡುತ್ತೇನೆ ಎಂದರು.
ಇದನ್ನೂ ಓದಿ :ಬಿಎಸ್ವೈ ಮತ್ತು ಈಶ್ವರಪ್ಪ ಸ್ನೇಹ ಅಗಾಧವಾದದ್ದು, ಎಲ್ಲವೂ ಸೌಹಾರ್ದಯುತವಾಗಿ ಬಗೆಹರಿಯುತ್ತದೆ: ಬೊಮ್ಮಾಯಿ