ಕರ್ನಾಟಕ

karnataka

ETV Bharat / state

ಖಾಸಗಿ ಕಂಪನಿಗಳಲ್ಲಿ ಕನ್ನಡಿಗರಿಗೆ ಉದ್ಯೋಗ ಮೀಸಲಾತಿ ವಿಚಾರ ಸ್ವಾಗತಾರ್ಹ: ಬಿ.ವೈ.ವಿಜಯೇಂದ್ರ - B Y Vijayendra

ಖಾಸಗಿ ಕಂಪನಿಗಳಲ್ಲಿ ಕನ್ನಡಿಗರಿಗೆ ಉದ್ಯೋಗ ಮೀಸಲಾತಿ ನೀಡುವ ರಾಜ್ಯ ಸರ್ಕಾರದ ಕ್ರಮವನ್ನು ಸ್ವಾಗತಿಸುತ್ತೇನೆ ಎಂದು ಬಿ.ವೈ ವಿಜಯೇಂದ್ರ ತಿಳಿಸಿದ್ದಾರೆ.

By ETV Bharat Karnataka Team

Published : Jul 17, 2024, 9:41 PM IST

Updated : Jul 17, 2024, 11:02 PM IST

ಬಿ.ವೈ.ವಿಜಯೇಂದ್ರ
ಬಿ.ವೈ.ವಿಜಯೇಂದ್ರ (ETV Bharat)

ಬಿ.ವೈ.ವಿಜಯೇಂದ್ರ (ETV Bharat)

ಶಿವಮೊಗ್ಗ:ಖಾಸಗಿ ಕಂಪನಿಗಳಲ್ಲಿ ಕನ್ನಡಿಗರಿಗೆ ಉದ್ಯೋಗ ಮೀಸಲಾತಿ ನೀಡುವ ವಿಧೇಯಕವನ್ನು ಸಚಿವ ಸಂಪುಟದಲ್ಲಿ ಅಂಗೀಕರಿಸಿದ ರಾಜ್ಯ ಸರ್ಕಾರದ ಕ್ರಮವನ್ನು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಸ್ವಾಗತಿಸಿದ್ದಾರೆ.

ಈ ಬಗ್ಗೆ ನಗರದಲ್ಲಿ ಮಾತನಾಡಿದ ಅವರು, ಖಾಸಗಿ ಕಂಪನಿಗಳಲ್ಲಿ ಕನ್ನಡಿಗರಿಗೆ ಅವಕಾಶ ಕೊಡಲು ಉದ್ಯೋಗ ಮೀಸಲಾತಿ ಜಾರಿಗೆ ತರಲಾಗುತ್ತಿದೆ. ಸರ್ಕಾರದ ತೀರ್ಮಾನಕ್ಕೆ ಸ್ವಾಗತಿಸುತ್ತೇನೆ. ಸರ್ಕಾರದಲ್ಲೂ ಲಕ್ಷಾಂತರ ಹುದ್ದೆಗಳು ಖಾಲಿ ಉಳಿದಿವೆ. ಕಲ್ಯಾಣ ಕರ್ನಾಟಕದಲ್ಲೂ ಸರ್ಕಾರಿ ಉದ್ಯೋಗಗಳು ಖಾಲಿ ಇದ್ದು, ಈ ಬಗ್ಗೆ ಮಾನ್ಯ ಮುಖ್ಯಮಂತ್ರಿಗಳು ಗಮನಿಸಬೇಕಿದೆ ಎಂದರು.

ಸದನದಲ್ಲಿ ಗಂಭೀರ ಚರ್ಚೆ:ಬಳಿಕವಾಲ್ಮೀಕಿ ಅಭಿವೃದ್ಧಿ ನಿಗಮದ ಭ್ರಷ್ಟಾಚಾರದ ಬಗ್ಗೆ ಮಾತನಾಡಿದ ಅವರು, ಅಧಿವೇಶನದಲ್ಲಿ ಈ ಬಗ್ಗೆ ಗಂಭೀರವಾಗಿ ಚರ್ಚೆ ಮಾಡಿದ್ದೇವೆ. ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಹಣ ಲೂಟಿ ಹೊಡೆಯಲಾಗಿದೆ. ಲೋಕಸಭಾ ಚುನಾವಣೆಯಲ್ಲಿ ಈ ಹಣ ಬಳಸಿಕೊಳ್ಳಲಾಗಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ ಇದು ರುಜುವಾತಾದರೆ ಅಕ್ಷಮ್ಯ ಅಪರಾಧವಾಗುತ್ತದೆ. ಒಂದುಕಡೆ ಲೂಟಿ ಹೊಡೆದಿರುವುದು. ಮತ್ತೊಂದು ಕಡೆ ಲೋಕಸಭಾ ಚುನಾವಣೆಯಲ್ಲಿ ಬಳಸಿಕೊಂಡಿರುವುದು ಅಕ್ಷಮ್ಯ ಅಪರಾಧವಾಗಿದೆ.

ಕಾಂಗ್ರೆಸ್​ ಸರ್ಕಾರ ಅಧಿಕಾರಕ್ಕೆ ಬಂದು 14 ತಿಂಗಳಲ್ಲಿ ಮೊದಲ ಬಾರಿಗೆ ಗಂಡಾಂತರಕ್ಕೆ ಸಿಲುಕಿಕೊಂಡಿದೆ. ಅನುಭವಿ ಮುಖ್ಯಮಂತ್ರಿ ಇದ್ದರೂ ಸಹ ಈ ರೀತಿ ತೊಂದರೆಗೆ ಸಿಲುಕಿದ್ದಾರೆ. ಇದರ ಜೊತೆಗೆ ಮುಡಾ ಹಗರಣ ಕೂಡ ಇವರಿಗೆ ಇಕ್ಕಟ್ಟಿಗೆ ಸಿಲುಕಿಸಿದೆ. ಸ್ವತಃ ಮುಖ್ಯಮಂತ್ರಿಗಳ ಕುಟುಂಬವೇ ಇದರಲ್ಲಿ ಸಿಲುಕಿದೆ. ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಸಾವಿರಾರು ಕೋಟಿ ರೂ. ನಿವೇಶನಗಳ ಹಗರಣ ನಡೆದಿದೆ.

ಮುಡಾಗೆ ಇದರಿಂದ ಸಾವಿರಾರು ಕೋಟಿ ರೂ. ನಷ್ಟವುಂಟಾಗಿದೆ. ಈ ಎರಡೂ ವಿಚಾರಗಳನ್ನು ಸದನದ ಒಳಗೆ, ಹೊರಗೆ ಪ್ರಸ್ತಾಪ ಮಾಡಿದ್ದೇವೆ. ಮುಡಾ ಹಗರಣವನ್ನು ತಕ್ಷಣವೇ ಮುಖ್ಯಮಂತ್ರಿಗಳು ಸಿಬಿಐಗೆ ವಹಿಸಬೇಕು. ತಕ್ಷಣವೇ ಸಿಎಂ ಸಿದ್ಧರಾಮಯ್ಯ ತಮ್ಮ ಸ್ಥಾನಕ್ಕೆ ರಾಜಿನಾಮೆ ನೀಡಬೇಕು‌. ಈ ಬಗ್ಗೆ ಒತ್ತಾಯವನ್ನು ನಾವು ಸದನದಲ್ಲಿ ಮಾಡುವವರಿದ್ದೇವೆ. ಮುಖ್ಯಮಂತ್ರಿ ಹಾಗೂ ಕುಟುಂಬವೇ ಈ ಹಗರಣದಲ್ಲಿರುವಾಗ ಯಾವ ಎಸ್​ಐಟಿ ಏನೂ ಮಾಡಲು ಸಾಧ್ಯವಿಲ್ಲ ಎಂದು ಆರೋಪಿಸಿದರು.

ವಾಲ್ಮೀಕಿ ನಿಗಮದ ಹಗರಣದಲ್ಲಿ ಚಂದ್ರಶೇಖರನ್ ಆತ್ಮಹತ್ಯೆ ಮಾಡಿಕೊಂಡ ದಿನದಿಂದ ತನಿಖೆ ನಡೆಯುತ್ತಲೇ ಇದೆ. ಎರಡು ತಿಂಗಳಾದರೂ ಇನ್ನೂ ತನಿಖೆ ನಡೆಯುತ್ತಲೇ ಇದೆ. ಕನಿಷ್ಠ ಪಕ್ಷ ನಾಗೇಂದ್ರ ಅವರಿಗೆ ನೋಟಿಸ್ ಜಾರಿ ಮಾಡಿ ಕರೆಸಲು ಕೂಡ ಹಿಂದೆ ಮುಂದೆ ನೋಡುತ್ತಿದ್ರು, ಸರ್ಕಾರ, ಸರ್ಕಾರದ ವ್ಯವಸ್ಥೆ ಹೀಗಾಗಿದೆ. ಎಸ್​ಐಟಿ ಎಂದರೆ ಸಿದ್ಧರಾಮಯ್ಯ ಇನ್ವೆಸ್ಟಿಗೇಷನ್ ಟೀಂ ಎಂದು ಸುರೇಶ್ ಕುಮಾರ್ ಹೇಳಿದ್ದಾರೆ.

ಅವರಿಗೆ ಮನ ಬಂದಂತೆ ತನಿಖೆ ಮಾಡಿದರೆ ಒಪ್ಪಲು ಆಗಲ್ಲ. ಎಸ್​ಐಟಿ ರೀತಿ ತನಿಖೆ ನಡೆದರೆ ನ್ಯಾಯ ಸಿಗಲು ಸಾಧ್ಯವಿಲ್ಲ. ಈ ವಿಚಾರದಲ್ಲಿ ಮುಖ್ಯಮಂತ್ರಿ ಹೇಳಿಕೆ ನೀಡಿದ್ದರು ಗಮನಿಸಿದ್ದಿರಾ, ಉಪಮುಖ್ಯಮಂತ್ರಿಗಳು ಈ ಹಗರಣದ ಬಗ್ಗೆ ಈಗಾಗಲೇ ಕ್ಲೀನ್ ಚಿಟ್ ಕೊಟ್ಟಿ ಆಗಿದೆ. ಹಣಕಾಸಿನ ಸಚಿವರಾಗಿ ಸಿದ್ಧರಾಮಯ್ಯನವರು ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣ ನನ್ನ ಗಮನಕ್ಕೆ ಬಂದಿಲ್ಲ ಎಂದಿದ್ದಾರೆ. ಹಣಕಾಸಿನ ಸಚಿವಾಲಯದ ಮುಖ್ಯಸ್ಥರಾಗಿ ಅವರ ಅನುಮತಿ ಇಲ್ಲದೇ ಹೊರ ಹೋಗಲು ಸಾಧ್ಯವಿಲ್ಲ. ಇವರೇ ಆರೋಪಿಗಳನ್ನು ಪ್ರೊಟೆಕ್ಟ್ ಮಾಡುವ ಕೆಲಸ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

ಇದನ್ನೂ ಓದಿ:ಖಾಸಗಿ ಉದ್ಯಮಗಳಲ್ಲೂ ಕನ್ನಡಿಗರಿಗೆ ಉದ್ಯೋಗ ಖಾತ್ರಿ, ಸಿಎಂ ಜತೆ ಚರ್ಚಿಸಿ ಗೊಂದಲಗಳಿಗೆ ತೆರೆ: ಸಚಿವ ಎಂ.ಬಿ.ಪಾಟೀಲ್ - MB Patil

Last Updated : Jul 17, 2024, 11:02 PM IST

ABOUT THE AUTHOR

...view details