ಬಳ್ಳಾರಿ :ಮಾಜಿ ಸಚಿವ, ಬಿಜೆಪಿಯ ಪ್ರಮುಖ ನಾಯಕ ಹಾಗೂ ವಾಲ್ಮೀಕಿ ಸಮುದಾಯದ ಪ್ರಮುಖ ನಾಯಕ ಬಿ. ಶ್ರೀರಾಮುಲು ಅವರನ್ನು ಬಳ್ಳಾರಿ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ಘೋಷಿಸಲಾಗಿದೆ. ಅವರು ಬಳ್ಳಾರಿ ಲೋಕಸಭಾ ಅಖಾಡದಲ್ಲಿ ಗೆಲುವು ಸಾಧಿಸುವ ನಿಟ್ಟಿನಲ್ಲಿ ಕಾರ್ಯ ಪ್ರವೃತ್ತರಾಗಿದ್ದಾರೆ.
ರಾಜ್ಯ ಬಿಜೆಪಿಯ ಪ್ರಬಲ ನಾಯಕರಲ್ಲಿ ಒಬ್ಬರಾಗಿರುವ ಬಿ. ಶ್ರೀರಾಮುಲು ತಮ್ಮ ರಾಜಕೀಯ ಜೀವನದಲ್ಲಿ ಹಲವು ಮಹತ್ತರ ಸವಾಲುಗಳನ್ನು ಎದುರಿಸಿದ್ದಾರೆ. 2018ರ ವಿಧಾನಸಭಾ ಚುನಾವಣೆಯಲ್ಲಿ ಸಿಎಂ ಸಿದ್ದರಾಮಯ್ಯ ವಿರುದ್ಧ ಬಾದಾಮಿಯಲ್ಲಿ ಹಾಗೂ ಮೊಳಕಾಲ್ಮೂರು ಕ್ಷೇತ್ರದಲ್ಲಿ ಏಕಕಾಲಕ್ಕೆ ಸ್ಪರ್ಧಿಸುವ ಮೂಲಕ ಗಮನ ಸೆಳೆದಿದ್ದರು. 2023ರ ವಿಧಾನಸಭಾ ಚುನಾವಣೆಯಲ್ಲಿ ಮೊಳಕಾಲ್ಮೂರು ಕ್ಷೇತ್ರದಿಂದ ಮರಳಿ ತಮ್ಮ ತವರು ಕ್ಷೇತ್ರ ಬಳ್ಳಾರಿ ಗ್ರಾಮೀಣಕ್ಕೆ ಬಂದು ಸ್ಪರ್ಧಿಸಿದ್ದರು. ಸಚಿವ ನಾಗೇಂದ್ರ ಅವರ ವಿರುದ್ಧ ಪರಾಭವಗೊಂಡಿದ್ದ ಶ್ರೀರಾಮುಲು ಈಗ ಲೋಕಸಭಾ ಕಣಕ್ಕೆ ಇಳಿಯುತ್ತಿದ್ದಾರೆ.
ವಿಧಾನಸಭೆ ಚುನಾವಣೆ ಸೋಲಿನ ನಂತರ ಶ್ರೀರಾಮುಲು ಅವರು ಕೆಲ ತಿಂಗಳು ಸಕ್ರಿಯ ರಾಜಕಾರಣದಿಂದ ದೂರ ಉಳಿದಿದ್ದರು. ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸುವ ಇಂಗಿತ ವ್ಯಕ್ತಪಡಿಸಿದ್ದ ಅವರು, ಟಿಕೆಟ್ ಆಕಾಂಕ್ಷಿಯಾಗಿ ಗುರುತಿಸಿಕೊಂಡಿದ್ದರು. ಕೊನೆಗೂ ಬಿಜೆಪಿಯಿಂದ ಬಳ್ಳಾರಿ ಲೋಕಸಭಾ ಕ್ಷೇತ್ರಕ್ಕೆ ಸ್ಪರ್ಧಿಸಲು ಬಿ. ಶ್ರೀರಾಮುಲು ಅವರಿಗೆ ಗ್ರೀನ್ ಸಿಗ್ನಲ್ ನೀಡಿದ್ದು, ಅವರ ಎಂಟ್ರಿಯಿಂದ ಬಳ್ಳಾರಿ ಲೋಕಸಭಾ ಕ್ಷೇತ್ರದ ಕಣ ರಂಗೇರಿದೆ.
ಬಿ. ಶ್ರೀರಾಮುಲು ಹಿನ್ನೆಲೆ: 1971ರ ಆ. 8 ರಂದು ಜನಿಸಿದ ಬಿ. ಶ್ರೀರಾಮುಲು ಬಿ. ತಿಮ್ಮಪ್ಪ ಹಾಗೂ ಬಿ. ಹೊನ್ನೂರಮ್ಮ ದಂಪತಿಯ ಏಳನೇ ಸುಪುತ್ರ. ಇವರು ಪದವಿ ಶಿಕ್ಷಣ ಪೂರೈಸಿದ್ದಾರೆ. ಆಂಧ್ರ ಮೂಲದ ಲಕ್ಷ್ಮಿ ಎಂಬುವವರೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಇವರಿಗೆ ಮೂವರು ಪುತ್ರಿಯರು, ಓರ್ವ ಪುತ್ರರಿದ್ದಾರೆ. ಬಿ. ಶ್ರೀರಾಮುಲು ಹಾಗೂ ಸ್ನೇಹಿತ, ಮಾಜಿ ಸಚಿವ ಜನಾರ್ದನ ರೆಡ್ಡಿ ಅವರ ಜೋಡಿ ರಾಜ್ಯದಲ್ಲಿ ಗಮನಸೆಳೆದಿತ್ತು. ಬಳಿಕ ರಾಜಕೀಯ ವಲಯದಲ್ಲಿ ರೆಡ್ಡಿ ಬ್ರದರ್ಸ್ ತಂಡದಲ್ಲಿ ರಾಮುಲು ಅವರು ಸಹ ಒಬ್ಬರಾಗಿ ಗುರುತಿಸಿಕೊಂಡಿದ್ದರು. ನಂತರ ನಡೆದ ನಾನಾ ಬೆಳವಣಿಗೆಯಿಂದ ಜನಾರ್ದನರೆಡ್ಡಿ ಅವರು ಬಿಜೆಪಿ ಬಿಟ್ಟು ಕೆಆರ್‌ಪಿಪಿ ಹೊಸ ಪಕ್ಷ ಸ್ಥಾಪಿಸಿದ ಬಳಿಕ ಇಬ್ಬರ ನಡುವಿನ ನಂಟು ಈಗ ಅಷ್ಟಕಷ್ಟೇ ಎಂಬಂತಾಗಿದೆ.
ಬಿ. ಶ್ರೀರಾಮುಲು ಅವರು ಬಿಜೆಪಿ ಸರ್ಕಾರದ ಅವಧಿಯಲ್ಲಿ ಸಚಿವ ಸ್ಥಾನ ನಿಭಾಯಿಸುವ ಮೂಲಕ ಗಮನ ಸೆಳೆದಿದ್ದರು. 2006ರಲ್ಲಿ ಬಿಜೆಪಿ - ಜೆಡಿಎಸ್ ಮೈತ್ರಿ ಸರ್ಕಾರದಲ್ಲಿ ಪ್ರವಾಸೋದ್ಯಮ ಸಚಿವ, 2008ರಲ್ಲಿ ಬಿಜೆಪಿ ಸರ್ಕಾರದಲ್ಲಿ ಆರೋಗ್ಯ ಸಚಿವ, 2019ರಲ್ಲಿ ಆರೋಗ್ಯ ಸಚಿವ, ಬಳಿಕ ಸಮಾಜ ಕಲ್ಯಾಣ ಸಚಿವರಾಗಿ ಕಾರ್ಯನಿರ್ವಹಿಸಿದ್ದರು.
ಎರಡನೇ ಬಾರಿಗೆ ಲೋಕಸಭೆಗೆ ಸ್ಪರ್ಧೆ:ಮಾಜಿ ಸಚಿವ ಬಿ. ಶ್ರೀರಾಮುಲು ಅವರು ದಶಕಗಳ ಬಳಿಕ ಎರಡನೇ ಬಾರಿಗೆ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ಸಜ್ಜಾಗಿದ್ದಾರೆ. ಕಳೆದ 2014ರಲ್ಲಿ ಲೋಕಸಭಾ ಚುನಾವಣೆಯಲ್ಲಿ ಬಳ್ಳಾರಿ ಕ್ಷೇತ್ರಕ್ಕೆ ಬಿಜೆಪಿಯಿಂದ ಸ್ಪರ್ಧಿಸಿ ಕಾಂಗ್ರೆಸ್ ಅಭ್ಯರ್ಥಿ ಎನ್. ವೈ ಹನುಮಂತಪ್ಪ ಅವರ ವಿರುದ್ಧ 85,144 ಮತಗಳ ಅಂತರದಲ್ಲಿ ಗೆಲುವು ಸಾಧಿಸುವ ಮೂಲಕ ಮೊದಲ ಬಾರಿಗೆ ಲೋಕಸಭೆ ಪ್ರವೇಶಿಸಿದ್ದರು. ಇದಾದ ಬಳಿಕ ರಾಜ್ಯ ರಾಜಕಾರಣದಲ್ಲಿ ಸಕ್ರಿಯವಾಗಿದ್ದ ಅವರು, ದಶಕಗಳ ಬಳಿಕ ಪುನಃ ಕೇಂದ್ರ ರಾಜಕೀಯದಲ್ಲಿ ದುಮುಕ್ಕಿದ್ದಾರೆ. ಎರಡನೇ ಬಾರಿಗೆ ಲೋಕಸಭಾ ಕ್ಷೇತ್ರಕ್ಕೆ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಲಿದ್ದಾರೆ.
ಬಿ. ಶ್ರೀರಾಮುಲು ನಡೆದು ಬಂದ ರಾಜಕೀಯ ಪಥ : ಬಳ್ಳಾರಿ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ, ಮಾಜಿ ಸಚಿವ ಬಿ. ಶ್ರೀರಾಮುಲು ಅವರು ಮೊದಲ ಬಾರಿಗೆ 1996ರಲ್ಲಿ ಬಳ್ಳಾರಿ ನಗರಸಭೆಯ ಸದಸ್ಯರಾಗುವ ಮೂಲಕ ರಾಜಕೀಯಕ್ಕೆ ಪ್ರವೇಶಿಸಿದರು. ಇದಾದ ಬಳಿಕ 1999ರಲ್ಲಿ ಮೊದಲ ಬಾರಿಗೆ ರಾಜ್ಯ ರಾಜಕೀಯಕ್ಕೆ ಕಾಲಿಟ್ಟ ರಾಮುಲು ಅವರು, ಮೊದಲ ಬಳ್ಳಾರಿ ವಿಧಾನಸಭೆ ಕ್ಷೇತ್ರದಿಂದ ಬಿಜೆಪಿಯಿಂದ ಸ್ಪರ್ಧಿಸಿ ಸೋತಿದ್ದರು.