ಬೆಂಗಳೂರು: ಸಚಿವ ಸ್ಥಾನಕ್ಕೆ ಬಿ. ನಾಗೇಂದ್ರ ಇಂದು ರಾಜೀನಾಮೆ ಘೋಷಿಸಿದ್ದಾರೆ. ವಾಲ್ಮಿಕಿ ಅಭಿವೃದ್ಧಿ ನಿಗಮದಲ್ಲಿ ನಡೆದಿರುವ ಬಹುಕೋಟಿ ಹಗರಣ ಖಂಡಿಸಿ ಪ್ರತಿಪಕ್ಷ ಬಿಜೆಪಿ ಸಚಿವರ ರಾಜೀನಾಮೆಗೆ ಆಗ್ರಹಿಸಿ ಇಂದು ರಾಜ್ಯಪಾಲರಿಗೆ ದೂರು ನೀಡಿತ್ತು. ಇದರ ಬೆನ್ನಲ್ಲೇ ಬಿ ನಾಗೇಂದ್ರ ಅವರು ರಾಜೀನಾಮೆ ಘೋಷಿಸಿದರು. ಇದೇ ವೇಳೆ ತಾನು ಸ್ವಇಚ್ಛೆಯಿಂದ ರಾಜೀನಾಮೆ ನೀಡುತ್ತಿರುವುದಾಗಿ ತಿಳಿಸಿದರು.
ವಿಧಾನಸಭೆಯಲ್ಲಿ ಇಂದು ಸಂಜೆ ಮಾಧ್ಯಮಗೋಷ್ಟಿಯಲ್ಲಿ ಮಾತನಾಡಿದ ಅವರು, ವಿರೋಧ ಪಕ್ಷದವರು ಕಾಂಗ್ರೆಸ್ ಮೇಲೆ ಕೆಸೆರೆರಚಾಟ ಮಾಡುತ್ತಿದ್ದಾರೆ. ಆದ್ರೆ ನಾನು ಸ್ವಇಚ್ಛೆಯಿಂದ ರಾಜೀನಾಮೆ ಕೊಡುತ್ತಿದ್ದೇನೆ. ಆತ್ಮಸಾಕ್ಷಿಯಿಂದ ಯಾವುದೇ ಒತ್ತಡ ಇಲ್ಲದೆ ರಾಜೀನಾಮೆ ನೀಡುತ್ತಿದ್ದೇನೆ. ಸಿಎಂ ಜೊತೆ ಚರ್ಚಿಸಿದಾಗ ನನ್ನ ಮೇಲೆ ಯಾವುದೇ ಒತ್ತಡ ಹಾಕಿಲ್ಲ. ಸಂಜೆ ಏಳು ಗಂಟೆಗೆ ಸಿಎಂ ಸಿದ್ದರಾಮಯ್ಯ ಅವರು ಭೇಟಿಯಾಗಿ ರಾಜೀನಾಮೆ ಸಲ್ಲಿಸುತ್ತಿದ್ದೇನೆ ಎಂದರು.
ಯಾರಿಗೂ ಕೂಡ ಮುಜುಗರ ಆಗಬಾರದು ಎಂಬ ಕಾರಣಕ್ಕೆ ರಾಜೀನಾಮೆ ಕೊಡುತ್ತಿದ್ದೇನೆ, ಸಿಎಂ ಆಡಳಿತವನ್ನು ಅದ್ಭುತವಾಗಿ ನಡೆಸುತ್ತಿದ್ದಾರೆ. ಈ ಪ್ರಕರಣವನ್ನು ಎಸ್ ಐಟಿ ತನಿಖೆ ನಡೆಸುತ್ತಿದೆ. ತನಿಖೆ ನಡೆಯುವಾಗ ನಾನು ಮಂತ್ರಿ ಸ್ಥಾನದಲ್ಲಿದ್ದರೆ ಸಮಸ್ಯೆ ಆಗುತ್ತೆ ಎಂಬ ಕಾರಣಕ್ಕೆ ರಾಜೀನಾಮೆ ಕೊಡುತ್ತಿದ್ದೇನೆ ಎಂದು ಬಿ ನಾಗೇಂದ್ರ ಸ್ಪಷ್ಟಪಡಿಸಿದರು.