ಬೆಳಗಾವಿ:ಹೆಲ್ಮೆಟ್ ಧರಿಸುವಂತೆ ಪೊಲೀಸರು ಗದರಿಸಿ ದಂಡ ವಿಧಿಸಿದರು. ಗುಲಾಬಿ ಹೂವು ಕೊಟ್ಟು ಪ್ರೀತಿಯಿಂದ ತಿಳಿ ಹೇಳಿದರು. ಕೊನೆಗೆ ಬೈಕ್ ಸೀಜ್ ಮಾಡಿಯೂ ನೋಡಿದರು. ಆದರೂ ವಾಹನ ಸವಾರರು ಮಾತ್ರ ಎಚ್ಚೆತ್ತುಕೊಳ್ಳಲಿಲ್ಲ. ಹಾಗಾಗಿ, ಬೆಳಗಾವಿ ಪೊಲೀಸರು ವಿನೂತನ ಪ್ರಯೋಗಕ್ಕೆ ಮುಂದಾಗಿದ್ದಾರೆ. ಹೆಲ್ಮೆಟ್ ಧರಿಸದ ಬೈಕ್ ಸವಾರರನ್ನು ರಸ್ತೆಯಲ್ಲೆ ನಿಲ್ಲಿಸಿ ಅವರಿಂದಲೇ ಜಾಗೃತಿ ಮೂಡಿಸುತ್ತಿದ್ದಾರೆ.
'ಏ ಅವ ಹೆಲ್ಮೆಟ್ ಹಾಕಿಲ್ಲ, ನಿಲ್ಲಿಸಿ ಅವನ ಗಾಡಿ, ಕೈಯಲ್ಲಿ ಹಿಡಿ ಜಾಗೃತಿ ಫಲಕ' ಎನ್ನುತ್ತಿರುವ ಸಂಚಾರಿ ಪೊಲೀಸರು. ಪೊಲೀಸರನ್ನು ನೋಡಿ ಗಾಬರಿ ಆಗುತ್ತಿರುವ ಬೈಕ್ ಸವಾರರು. ಪೊಲೀಸರ ಆವಾಜ್ಗೆ ಹೆದರಿ ಕೈಯಲ್ಲಿ ಫಲಕ ಹಿಡಿದು ನಿಲ್ಲುತ್ತಿದ್ದಾರೆ. ಈ ಎಲ್ಲಾ ದೃಶ್ಯಗಳು ಕಂಡು ಬಂದಿದ್ದು ಬೆಳಗಾವಿಯಲ್ಲಿ.
ಹೆಲ್ಮೆಟ್ ಧರಿಸದವರಿಂದಲೇ ಜಾಗೃತಿ ಅಭಿಯಾನ (ETV Bharat) ಹೆಲ್ಮಟ್ ಧರಿಸಿ ಬೈಕ್ ಓಡಿಸಿ:ಹೌದು, ಪೊಲೀಸ್ ಆಯುಕ್ತ ಯಡಾ ಮಾರ್ಟಿನ್ ಮಾರ್ಬನ್ಯಾಂಗ್ ಅವರು ಬೆಳಗಾವಿಯಲ್ಲಿ ಬೈಕ್ ಸವಾರರು ಹೆಲ್ಮೆಟ್ ಕಡ್ಡಾಯವಾಗಿ ಧರಿಸುವ ನಿಟ್ಟಿನಲ್ಲಿ ಈ ರೀತಿ ವಿನೂತನ ಜಾಗೃತಿಗೆ ಆದೇಶಿಸಿದ್ದಾರೆ. "ಪ್ರೊಜೆಕ್ಟ್ ಹೆಲ್ಮೆಟ್" ರಸ್ತೆ ಸುರಕ್ಷಾ, ಜಾಗೃತಿ ಮತ್ತು ಜಾರಿ ಅಭಿಯಾನ ಅಂಗವಾಗಿ ನಗರದ ಪ್ರಮುಖ ರಸ್ತೆಗಳಲ್ಲಿ "ಹೆಲ್ಮಟ್ ಧರಿಸಿ ಬೈಕ್ ಓಡಿಸಿ, ಇಲ್ಲವಾದಲ್ಲಿ ನಮ್ಮ ಹಾಗೆ ಜಾಗೃತಿ ಮೂಡಿಸಬೇಕಾಗುತ್ತದೆ" ಎಂದು ಸಂದೇಶ ಸಾರುವ ಫಲಕ ಹಿಡಿದ ಸವಾರರು ಕಾಣಸಿಗುತ್ತಾರೆ. ಅಲ್ಲದೇ "ಹೆಲ್ಮೆಟ್ ಧರಿಸಿ ಜೀವ ಉಳಿಸಿ" ಎಂದು ಸವಾರರು ಕೂಗಿ ಕೂಗಿ ಸಂಚಾರಿ ನಿಯಮಗಳನ್ನು ಪಾಲಿಸುವಂತೆ ಹೇಳುತ್ತಿರುವುದು ವಿಶೇಷವಾಗಿದೆ. ಇನ್ನು ಪೊಲೀಸರ ಕಾರ್ಯಕ್ಕೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.
ಈಟಿವಿ ಭಾರತ ಜೊತೆಗೆ ಮಾತನಾಡಿದ ಯುವತಿ ರಾಜನಂದಿನಿ ಎಂಬುವವರು, "ನಾನು ಹೆಲ್ಮೆಟ್ ಹಾಕಿರಲಿಲ್ಲ. ಹಾಗಾಗಿ, ಪೊಲೀಸರು ನನಗೆ ತಡೆದರು. ಕೈಯಲ್ಲಿ ಫಲಕ ಹಿಡಿದು ಜಾಗೃತಿ ಮೂಡಿಸುವಂತೆ ಸೂಚಿಸಿದರು. ಪೊಲೀಸರ ಕಾರ್ಯ ನಿಜಕ್ಕೂ ಒಳ್ಳೆಯದು. ಹೆಲ್ಮೆಟ್ ಧರಿಸುವುದರಿಂದ ಅಪಘಾತದ ಸಂದರ್ಭದಲ್ಲಿ ಜೀವ ಉಳಿಯುತ್ತದೆ. ಆದ್ದರಿಂದ ಪ್ರತಿಯೊಬ್ಬರೂ ಹೆಲ್ಮೆಟ್ ಹಾಕುವಂತೆ" ಕೇಳಿಕೊಂಡರು.
ಬೆಳಗಾವಿಯಲ್ಲಿ ಪ್ರೊಜೆಕ್ಟ್ ಹೆಲ್ಮೆಟ್ (ETV Bharat) ಇನ್ಮುಂದೆ ನಾನು ತಪ್ಪ ಮಾಡಲ್ಲ, ಹೆಲ್ಮೆಟ್ ಹಾಕುತ್ತೇನೆ:"ಅವಸರದಲ್ಲಿ ಹೆಲ್ಮೆಟ್ ಹಾಕಿಕೊಳ್ಳಲಿಲ್ಲ. ಹಾಗೇ ಬಂದು ಬಿಟ್ಟೆ. ಇತ್ತಿಚೆಗೆ ಅಪಘಾತಗಳು ಹೆಚ್ಚಾಗಿ ಬಹಳಷ್ಟು ಜನರು ಮೃತರಾಗುತ್ತಿದ್ದಾರೆ. ಹಾಗಾಗಿ, ಯಾರೂ ಹೆಲ್ಮೆಟ್ ಧರಿಸದೇ ಬೈಕ್ನ್ನೇ ಹತ್ತಬಾರದು. ಮನೆಯಲ್ಲಿ ನಮಗೋಸ್ಕರ ಕಾಯುತ್ತಿರುತ್ತಾರೆ. ಅಪಘಾತ ಸಂಭವಿಸಿ ಏನಾದರೂ ಅನಾಹುತ ಆದರೆ ಯಾರು ಹೊಣೆ..? ಹೆಲ್ಮೆಟ್ ಹಾಕಿಕೊಂಡರೆ ಜೀವಕ್ಕೆ ಹಾನಿ ಆಗುವುದಿಲ್ಲ. ಇನ್ಮುಂದೆ ನಾನು ತಪ್ಪ ಮಾಡಲ್ಲ. ಹೆಲ್ಮೆಟ್ ಹಾಕುತ್ತೇನೆ" ಎನ್ನುತ್ತಾರೆ ನಿರಂಜನ ನಿಡೋಣಿ.
ಹೆಲ್ಮೆಟ್ ಹಾಕದ ಸವಾರರಿಂದಲೇ ಜಾಗೃತಿ:ಡಿಸಿಪಿ ನಿರಂಜನರಾಜ್ ಅರಸ್ ಎನ್ ಅವರು, "ಮೊದಲ ಹಂತದಲ್ಲಿ ಹೆಲ್ಮೆಟ್ ಧರಿಸದ ನಮ್ಮ 24 ಪೊಲೀಸರಿಗೆ ದಂಡ ವಿಧಿಸಿದ್ದೇವೆ. ಇನ್ನು ಎಸ್ಪಿ ಕಚೇರಿ, ಲೋಕಾಯುಕ್ತ, ಡಿಸಿಆರ್ ಸಿಬ್ಬಂದಿಗಳ ಮೇಲೆ ಕಾರ್ಯಾಚರಣೆ ಮಾಡುತ್ತೇವೆ. ಇದಾದ ಬಳಿಕ ಜಿಲ್ಲಾಧಿಕಾರಿ ಕಚೇರಿ, ಮಹಾನಗರ ಪಾಲಿಕೆ, ಕೆಇಬಿ ಸೇರಿ ವಿವಿಧ ಸರ್ಕಾರಿ ಇಲಾಖೆಗಳ ಕಚೇರಿ ಮುಂಭಾಗದಲ್ಲಿ ಹೆಲ್ಮೆಟ್ ಹಾಕದ ನೌಕರರಿಗೂ ಜಾಗೃತಿ ಮೂಡಿಸುತ್ತೇವೆ. ಅದೇ ರೀತಿ ಕಾಲೇಜುಗಳಲ್ಲೂ ಹೆಲ್ಮೆಟ್ ಮಹತ್ವದ ಕುರಿತು ಅರಿವು ಮೂಡಿಸಲಾಗುವುದು. ಈ ನಡುವೆ ಹೆಲ್ಮೆಟ್ ಹಾಕದ ಸವಾರರಿಂದಲೇ ಜಾಗೃತಿ ಮೂಡಿಸಲಾಗುತ್ತಿದೆ".
"ಈ ಅಭಿಯಾನದಿಂದ ಮನಪರಿವರ್ತನೆ ಆಗಿ ಎಲ್ಲರೂ ತಮ್ಮ ಜೀವ ಉಳಿಸಲು ಹೆಲ್ಮೆಟ್ ಹಾಕಿಕೊಳ್ಳಲಿ. ಯಾಕೆಂದರೆ ಅವರಿಂದ ಇಡೀ ಕುಟುಂಬ ಅವಲಂಬನೆ ಆಗಿರುತ್ತದೆ. ಹೆಲ್ಮೆಟ್ ಧರಿಸದ ಅಚಾತುರ್ಯದಿಂದ ಅದೇಷ್ಟೋ ಜನರು ಸಂಕಷ್ಟ ಎದುರಿಸಬೇಕಾಗುತ್ತದೆ. ಹಾಗಾಗಿ, ಎಲ್ಲರೂ ಕಡ್ಡಾಯವಾಗಿ ಹೆಲ್ಮೆಟ್ ಧರಿಸಿ. ಪ್ರತಿಯೊಬ್ಬರು ಅಭಿಯಾನಕ್ಕೆ ಕೈ ಜೋಡಿಸಿ ಯಶಸ್ವಿಗೊಳಿಸುವಂತೆ" ನಿರಂಜನರಾಜ್ ಅರಸ್ ಎನ್. ಅವರು ಕೋರಿದರು.
ಬೆಳಗಾವಿಯಲ್ಲಿ 'ಹೆಲ್ಮೆಟ್ ಧರಿಸಿ ಜೀವ ಉಳಿಸಿ': ಹೆಲ್ಮೆಟ್ ಧರಿಸದವರಿಂದಲೇ ಜಾಗೃತಿ ಅಭಿಯಾನ (ETV Bharat) " "ಪ್ರೊಜೆಕ್ಟ್ ಹೆಲ್ಮೆಟ್" ಕಾರ್ಯಕ್ರಮ ಶುರು ಮಾಡಿದ್ದೇವೆ. ಮಾರ್ಚ್ ತಿಂಗಳ ಅಂತ್ಯದವರೆಗೆ ಶೇ.90ರಷ್ಟು ಬೈಕ್ ಸವಾರರು ಹೆಲ್ಮೆಟ್ ಧರಿಸುವ ಗುರಿ ಹೊಂದಿದ್ದೇವೆ. ಮೊದಲಿಗೆ ಹೆಲ್ಮೆಟ್ ಹಾಕದ ನಮ್ಮ ಪೊಲೀಸರಿಗೆ ದಂಡ ವಿಧಿಸಿದ್ದೇವೆ. ಇದಾದ ಬಳಿಕ ಕಾಲೇಜುಗಳಲ್ಲೂ ಅಭಿಯಾನ ನಡೆಯಲಿದೆ. ಪ್ರತಿಯೊಬ್ಬರೂ ತಮ್ಮ ಅತ್ಯಮೂಲ್ಯ ಜೀವ ಉಳಿಸಿಕೊಳ್ಳಲು ಕಡ್ಡಾಯವಾಗಿ ಹೆಲ್ಮೆಟ್ ಧರಿಸಿ. ನಮ್ಮ ಅಭಿಯಾನಕ್ಕೆ ಕೈ ಜೋಡಿಸಿ" ಎಂದು ಬೆಳಗಾವಿ ಪೊಲೀಸ್ ಆಯುಕ್ತ ಯಡಾ ಮಾರ್ಟಿನ್ ಮಾರ್ಬನ್ಯಾಂಗ್ ತಿಳಿಸಿದ್ದಾರೆ.
ಇದನ್ನೂ ಓದಿ:ಕರ್ನಾಟಕದಲ್ಲಿ ಕೇವಲ 15% ಮಹಿಳೆಯರಲ್ಲಿ ಮಾತ್ರ ಚಾಲನಾ ಪರವಾನಗಿ: ಉಮಾ ಮಹಾದೇವನ್