ಸುಬ್ರಹ್ಮಣ್ಯ(ದ.ಕನ್ನಡ):ಕುಕ್ಕೆ ಸುಬ್ರಹ್ಮಣ್ಯ ದೇವಳದಲ್ಲಿ ಚಂಪಾಷಷ್ಠಿ ಮಹೋತ್ಸವ ನಡೆದ ನಂತರದಲ್ಲಿ ಕುಮಾರಧಾರ ನದಿಯಲ್ಲಿ ಶ್ರೀ ಕುಕ್ಕೆ ಸುಬ್ರಹ್ಮಣ್ಯ ದೇವರ ನೌಕಾವಿಹಾರ ಮತ್ತು ಅವಭೃತೋತ್ಸವ ಜರುಗಿತು.
ಕುಮಾರ ಪರ್ವತದ ತಪ್ಪಲಿನಲ್ಲಿ ಹುಟ್ಟಿ ಕುಕ್ಕೆ ಸುಬ್ರಹ್ಮಣ್ಯ ಮೂಲಕ ಹರಿಯುವ ಪುಣ್ಯ ಕುಮಾರಧಾರಾ ನದಿಯ ಪವಿತ್ರ ತೀರ್ಥದಲ್ಲಿ ವೈದಿಕ ವಿಧಿವಿಧಾನಗಳೊಂದಿಗೆ ಶ್ರೀ ಸುಬ್ರಹ್ಮಣ್ಯ ದೇವರ ಅವಭೃತೋತ್ಸವ ನಡೆಯಿತು. ದೇವಳದ ಪ್ರಧಾನ ಅರ್ಚಕರು ದೇವರ ಅವಭೃತೋತ್ಸವದ ಧಾರ್ಮಿಕ ವಿಧಿವಿಧಾನಗಳನ್ನು ನೆರವೇರಿಸಿದರು.
ಶ್ರೀ ಕುಕ್ಕೆ ಸುಬ್ರಹ್ಮಣ್ಯ ಸ್ವಾಮಿ ಉತ್ಸವ ಮೂರ್ತಿ (ETV Bharat) ಭಾನುವಾರ ಬೆಳಗ್ಗೆ ದೇವಳದ ದ್ವಾದಶಿ ಮಂಟಪದಲ್ಲಿ ಓಕುಳಿ ಪೂಜೆ ನಡೆಯಿತು. ಬಳಿಕ ಕುಕ್ಕೆ ಸುಬ್ರಹ್ಮಣ್ಯ ದೇವರನ್ನು ಪಲ್ಲಕ್ಕಿಯಲ್ಲಿ ರಥಬೀದಿಗೆ ತಂದು, ನಂತರ ಬಂಡಿ ರಥದಲ್ಲಿ ಕುಮಾರಧಾರಾವರೆಗೆ ಅವಭೃತೋತ್ಸವದ ಸವಾರಿ ಮೆರವಣಿಗೆ ಮೂಲಕ ತರಲಾಯಿತು. ಈ ನಡುವೆ ಇಲ್ಲಿನ ಬಿಲದ್ವಾರದ ಕಟ್ಟೆಯಲ್ಲಿ ಕಟ್ಟೆಪೂಜೆ ನೆರವೇರಿತು.
ಕುಮಾರಧಾರ ನದಿಯಲ್ಲಿ ಕುಕ್ಕೆ ದೇವರಿಗೆ ನೌಕಾವಿಹಾರ, ಅವಭೃತೋತ್ಸವ (ETV Bharat) ಬಳಿಕ ಕುಮಾರಧಾರ ನದಿಯ ಮತ್ಸ್ಯತೀರ್ಥದಲ್ಲಿ ಪುಷ್ಪಾಲಂಕೃತವಾಗಿ ಸಿಂಗರಿಸಲ್ಪಟ್ಟ ಎರಡು ದೋಣಿಗಳನ್ನು ಜೋಡಿಸಿ ಮಾಡಿದ ಸುಂದರ ತೆಪ್ಪದಲ್ಲಿ ಶ್ರೀ ಸುಬ್ರಹ್ಮಣ್ಯ ದೇವರ ನೌಕಾವಿಹಾರ ನಡೆಯಿತು. ಕುಮಾರಧಾರೆಯ ಜಳಕದಗುಂಡಿಯಲ್ಲಿ ನೂರಾರು ಭಕ್ತರ ಸಾನಿಧ್ಯದಲ್ಲಿ ದೇಗುಲದ ಪುರೋಹಿತರ ಮಂತ್ರ ಘೋಷದೊಂದಿಗೆ ಅವಭೃತೋತ್ಸವ ಜರುಗಿತು.
ಕುಮಾರಧಾರ ನದಿಯಲ್ಲಿ ಕುಕ್ಕೆ ದೇವರಿಗೆ ನೌಕಾವಿಹಾರ, ಅವಭೃತೋತ್ಸವ (ETV Bharat) ಶ್ರೀ ದೇವರ ಜಳಕದ ಬಳಿಕ ಕುಮಾರಧಾರ ನದಿತೀರದ ಅವಭೃತಕಟ್ಟೆಯಲ್ಲಿ ವಿಶೇಷ ಕಟ್ಟೆಪೂಜೆ ನೆರವೇರಿಸಲಾಯಿತು. ನೆರೆದ ಭಕ್ತರ ನಡುವೆ ಕುಮಾರಧಾರಾ ನದಿಯಲ್ಲಿ ದೇಗುಲದ ಆನೆ ಯಶಸ್ವಿನಿ ನೀರಾಟವಾಡಿ ಖುಷಿಪಟ್ಟಿತು.
ಯಶಸ್ವಿನಿಯ ನೀರಾಟಕ್ಕೆ ಮನಸೋತ ಭಕ್ತರು! (ETV Bharat) ಹಿನ್ನೆಲೆ:ಶ್ರೀ ಸ್ಕಂದ ಪುರಾಣದ ಸನತಕುಮಾರ ಸಂಹಿತೆಯಲ್ಲಿ ಸಹ್ಯಾದ್ರಿ ಖಂಡದ ತೀರ್ಥಕ್ಷೇತ್ರದ ಮಹಿಮಾ ರೂಪಣದೊಳಗೆ ಶ್ರೀ ಸುಬ್ರಹ್ಮಣ್ಯ ಕ್ಷೇತ್ರವು ಧಾರಾ ನದಿಯ ತೀರದಲ್ಲಿದೆ. ಶ್ರೀ ಷಣ್ಮುಖ ಸ್ವಾಮಿಯು ತಾರಕಾದಿ ಮಹಾ ಅಸುರರನ್ನು ನಿಗ್ರಹಿಸಿ ತಮ್ಮ ಶಕ್ತ್ಯಾಯುಧ ಧಾರೆಯನ್ನು ಈ ನದಿಯ ತೀರ್ಥದಲ್ಲಿ ತೊಳೆದುದರಿಂದ ಇದಕ್ಕೆ ಕುಮಾರಧಾರಾ ತೀರ್ಥವೆಂದು ಹೆಸರು ಬಂತೆಂದು ಪೌರಾಣಿಕ ಇತಿಹಾಸವಿದೆ.
ಸರ್ಪದೋಷ ಪೀಡಿತರಾಗಿ ವಿವಿಧ ಔಷಧಗಳಿಂದಲೂ ಶಮನವಾಗದಂತಹ ರೋಗಗಳಿಂದ ನರಳುವವರು ಹಾಗೂ ಸಂತಾನವಿಲ್ಲದೆ ಇರುವವರು ಶ್ರೀ ಸುಬ್ರಹ್ಮಣ್ಯನ ಸನ್ನಿಧಿಯಲ್ಲಿ ಸೇವಾ ಕೈಂಕರ್ಯಗಳನ್ನು ನೆರವೇರಿಸಿ ಸಕಲಾಭೀಷ್ಠ ಸಿದ್ಧಿಯನ್ನು ಹೊಂದುತ್ತಿರುವುದು ಪ್ರಸಿದ್ಧವಾಗಿದೆ. ಶ್ರೀ ಸುಬ್ರಹ್ಮಣ್ಯ ಷಷ್ಠಿ ಮಹೋತ್ಸವಗಳ ಕಾಲದಲ್ಲಿ ಭಕ್ತಾದಿಗಳು ತಮ್ಮ ಅನೇಕ ದೈಹಿಕ ಹಾಗೂ ಮಾನಸಿಕ ಸಂಕಷ್ಟಗಳ ನಿವಾರಣೆಗಾಗಿ ಹೇಳಿಕೊಂಡಿರುವ ಹರಕೆ ಕುಮಾರಧಾರಾದಿಂದ ಬೀದಿ ಮಡೆಸ್ನಾನ ಅಥವಾ ಉರುಳು ಸೇವೆ ಮಾಡುತ್ತಿರುವುದನ್ನು ಕಾಣಬಹುದು.
ಅಲ್ಲದೇ ಗೋವುಗಳ ಅನ್ನ ಸಂತರ್ಪಣೆಯ ಎಲೆಯಲ್ಲಿ ಹೊರಳಾಡಿಕೊಂಡು ದೇಗುಲದ ಅಂಗಣದಲ್ಲಿ ಪ್ರದಕ್ಷಿಣೆ ಬರುವ ಮಡೆಸ್ನಾನ ಸೇವೆಯು ಮುಖ್ಯ ಹರಕೆಗಳಲ್ಲಿ ಒಂದಾಗಿದೆ. "ಕುಮಾರಧಾರೆ ಮಿಂದೇವು, ಕುಕ್ಕೆಲಿಂಗನ ಕಂಡೇವು, ಕೊಪ್ಪರಿಗೆ ಅನ್ನ ಉಂಡೇವು" ಎಂಬ ಪೂರ್ವ ನಾಣ್ಣುಡಿಯಂತೆ ಇಲ್ಲಿ ಪ್ರತಿದಿನವೂ ತಪ್ಪದೆ ಇಲ್ಲಿ ಅನ್ನದಾನವೂ ನಡೆಯುತ್ತಿದೆ. ಕುಕ್ಕೆ ಸುಬ್ರಹ್ಮಣ್ಯ ಇತಿಹಾಸ ಪ್ರಸಿದ್ದ ಮೂಲಮೃತ್ತಿಕೆ (ಹುತ್ತದ ಮಣ್ಣು) ಇಲ್ಲಿಯ ಮುಖ್ಯ ಪ್ರಸಾದವಾಗಿರುತ್ತದೆ.
ಶ್ರೀ ಕ್ಷೇತ್ರವು ಪ್ರಸಿದ್ಧ ಕುಮಾರಧಾರ ನದಿ ತೀರದಲ್ಲಿದೆ. ದುಷ್ಟ ರಾಕ್ಷಸರ ದಮನಕ್ಕಾಗಿ ಜನ್ಮವೆತ್ತಿದ ಕುಮಾರಸ್ವಾಮಿಯು ತಾರಕಾದಿ ಅಸುರರನ್ನು ಯುದ್ಧದಲ್ಲಿ ಸಂಹರಿಸಿ, ಸೋದರ ಗಣಪತಿಯ ಜೊತೆ ಕುಮಾರಪರ್ವತಕ್ಕೆ ಬಂದಾಗ ದೇವೇಂದ್ರನು ತನ್ನ ಮಗಳಾದ ದೇವಸೇನೆಯನ್ನು ಕುಮಾರಸ್ವಾಮಿಗೆ ಕುಮಾರಧಾರ ತೀರ್ಥದ ತಟದಲ್ಲಿ ಮಾರ್ಗಶಿರ ಶುದ್ಧ ಷಷ್ಠಿಯ ದಿನ ವಿವಾಹ ಮಾಡಿಕೊಟ್ಟನು.
ಅದೇ ವೇಳೆ ಅಲ್ಲಿಯೇ ತಪಸ್ಸನ್ನಾಚರಿಸುತ್ತಿದ್ಧ ನಾಗರಾಜನಾದ ವಾಸುಕಿಯ ಪ್ರಾರ್ಥನೆಯನ್ನು ಮನ್ನಿಸಿ ಸುಬ್ರಹ್ಮಣ್ಯನು ತಾನು ದೇವಸೇನಾ ಸಮೇತನಾಗಿ ಒಂದಂಶದಿಂದ ಅವನಲ್ಲಿ ನಿತ್ಯ ಸನ್ನಿಹಿತನಾಗಿ ಈ ಕ್ಷೇತ್ರದಲ್ಲಿ ನೆಲೆಸುವುದಾಗಿ ವಾಸುಕಿಯನ್ನು ಹರಸುತ್ತಾನೆ. ಪರಶುರಾಮ ಸೃಷ್ಠಿಯ ಸಪ್ತ ಕ್ಷೇತ್ರಗಳಲ್ಲೊಂದಾದ ಕುಕ್ಕೆ ಶ್ರೀ ಸುಬ್ರಹ್ಮಣ್ಯ ಕ್ಷೇತ್ರವು ಪುರಾಣ, ಇತಿಹಾಸ ಕಾಲಗಳಿಂದಲೂ ನಾಗಾರಾಧನೆಗೆ ಪ್ರಸಿದ್ಧಿಯಾಗಿದೆ. ಸರ್ಪಸಂಸ್ಕಾರ, ನಾಗಪ್ರತಿಷ್ಠೆ, ಆಶ್ಲೇಷಬಲಿ ಇತ್ಯಾದಿ ಪ್ರಮುಖ ಹರಕೆ ಸೇವೆಗಳನ್ನು ಭಕ್ತರು ಇಲ್ಲಿ ನಡೆಸಿ ಕೃತಾರ್ಥರಾಗುತ್ತಾರೆ.
ಇದನ್ನೂ ಓದಿ:ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಬ್ರಹ್ಮರಥಾರೋಹಣ: ಚಂಪಾ ಷಷ್ಠಿ ಮಹೋತ್ಸವ ಸಂಪನ್ನ