ಕರ್ನಾಟಕ

karnataka

ETV Bharat / state

ಶಿವಮೊಗ್ಗ: ಮನೇಕಾ ಗಾಂಧಿ ಎಂಟ್ರಿ, ಬೀದಿ ನಾಯಿಯನ್ನು ಕ್ರೂರವಾಗಿ ಕೊಂದ ಆಟೋ ಚಾಲಕನ ಬಂಧನ - MAN ARRESTED FOR KILLING STRAY DOG

ಹೊಸನಗರ ತಾಲೂಕಿನ ರಿಪ್ಪನ್‌ಪೇಟೆ ಸಮೀಪದ ಕೆಂಚನಾಲ ಗ್ರಾಮದಲ್ಲಿ ಕ್ರೂರವಾಗಿ ಬೀದಿ ನಾಯಿ ಕೊಂದು ಆಟೋದಲ್ಲಿ ಎಳೆದೊಯ್ದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ.

ಬೀದಿ ನಾಯಿಯನ್ನು ಕ್ರೂರವಾಗಿ ಕೊಂದ ಆಟೋ ಚಾಲಕನ
ಬೀದಿ ನಾಯಿಯನ್ನು ಕ್ರೂರವಾಗಿ ಕೊಂದ ಆಟೋ ಚಾಲಕನ (ETV Bharat)

By ETV Bharat Karnataka Team

Published : Jan 19, 2025, 4:20 PM IST

ಶಿವಮೊಗ್ಗ: ಹೊಸನಗರ ತಾಲೂಕಿನ ರಿಪ್ಪನ್‌ಪೇಟೆ ಸಮೀಪದ ಕೆಂಚನಾಲ ಗ್ರಾಮದ ರೈಲ್ವೆ ನಿಲ್ದಾಣದ ಬಳಿಯಲ್ಲಿ ತನ್ನ ಪಾಡಿಗೆ ತಾನು ಮಲಗಿದ್ದ ನಾಯಿಯ ಮೇಲೆ ಆಟೋ ಚಾಲಕನೊಬ್ಬ ಕಲ್ಲು ಎತ್ತು ಹಾಕಿ ಕೊಂದು, ನಂತರ ಆಟೋಕ್ಕೆ ಕಟ್ಟಿಕೊಂಡು ಎಳೆದೊಯ್ದ ಅಮಾನವೀಯ ಘಟನೆ ನಡೆದಿದೆ. ಘಟನೆ ಸಂಬಂಧ ಆರೋಪಿ ಆಟೋ ಚಾಲಕ ವಾಜೀದ್​ ಎಂಬಾತನನ್ನು ಬಂಧಿಸಲಾಗಿದೆ. ಆರೋಪಿಯ ಕೃತ್ಯ ಸ್ಥಳೀಯರೊಬ್ಬರ ಮೊಬೈಲ್​ನಲ್ಲಿ ಸೆರೆಯಾಗಿದೆ.

ವಿಡಿಯೋದಲ್ಲಿ ಏನಿದೆ?:ಕೆಂಚನಾಲ ಗ್ರಾಮದ ರೈಲ್ವೆ ನಿಲ್ದಾಣದ ಬಳಿಯಲ್ಲಿ ತನ್ನ ಪಾಡಿಗೆ ತಾನು ಮಲಗಿದ್ದ ನಾಯಿಯ ಮೇಲೆ ಆರೋಪಿ ವಾಜೀದ್ ದೊಡ್ಡ ಗಾತ್ರದ ಕಲ್ಲನ್ನು ಎತ್ತಿ ಹಾಕುತ್ತಾನೆ. ಆಗ ನಾಯಿ ಕಿರುಚುತ್ತಾ ಅಲ್ಲೇ ಕುಸಿದು ಬೀಳುತ್ತದೆ. ಇಷ್ಟಕ್ಕೇ ಸುಮ್ಮನಾಗದ ಆರೋಪಿ ಮತ್ತೊಮ್ಮೆ ಅದೇ ಕಲ್ಲನ್ನು ಎತ್ತಿ ತಲೆ ಮೇಲೆ ಹಾಕಿದ್ದಾನೆ. ಇದರಿಂದ ಅರ್ಧ ಜೀವವಾದ ನಾಯಿ ಅಲ್ಲೇ ನರಳಾಡುತ್ತಿರುತ್ತದೆ. ಅಲ್ಲಿಂದ ಸ್ವಲ್ಪ ದೂರಕ್ಕೆ ಹೋದ ಆರೋಪಿ ಮತ್ತೊಮ್ಮೆ ಹಿಂದಿರುಗಿ ಬಂದು ಅದೇ ಕಲ್ಲನ್ನು ಮತ್ತೆ ನಾಯಿಯ ತಲೆ ಮೇಲೆ ಹಾಕಿದ್ದಾನೆ. ಇದರಿಂದ ನಾಯಿ ಸ್ಥಳದಲ್ಲಿಯೇ ಪ್ರಾಣಬಿಟ್ಟಿದೆ. ಕೊನೆಗೆ ಆ ನಾಯಿಯನ್ನು ತನ್ನ ಆಟೋ ಹಿಂಬದಿಗೆ ಕಟ್ಟಿ ರಸ್ತೆಯಲ್ಲಿ ಅತೀ ಅಮಾನುಷವಾಗಿ ಎಳೆದೊಯ್ದಿದ್ದಾನೆ.

ಈ ಘಟನೆ ನಡೆಯುವಾಗ ಅಲ್ಲಿದ್ದ ಸ್ಥಳೀಯ ಯುವಕನೊಬ್ಬ ಮೊಬೈಲ್​ನಲ್ಲಿ ವಿಡಿಯೋ ಮಾಡಿಕೊಂಡಿದ್ದಾನೆ. ಘಟನೆ ಕುರಿತು ರಿಪ್ಪನಪೇಟೆಯ ವ್ಯಕ್ತಿಯೊಬ್ಬರ ಗಮನಕ್ಕೆ ತಂದಿದ್ದಾನೆ. ನಂತರ ಅವರು ಈ ವಿಡಿಯೋ ಹಾಗೂ ಮಾಹಿತಿಯನ್ನು ಪ್ರಾಣಿ ದಯಾ ಸಂಘದ ರಾಷ್ಟ್ರೀಯ ಕಾರ್ಯಕರ್ತೆ ಮನೇಕಾ ಗಾಂಧಿ ಹಾಗೂ ಪ್ರಾಣಿ ದಯಾ ಸಂಘದವರ ಮೇಲ್ ಐಡಿಗೆ ಯುವಕನ ಮೊಬೈಲ್​ನಿಂದಲೇ ಸಂದೇಶ ಕಳುಹಿಸಿದ್ದಾರೆ. ಸಂದೇಶ ಕಳುಹಿಸಿ ಕೇವಲ 45 ನಿಮಿಷಗಳಲ್ಲೇ ಸ್ಪಂದಿಸಿದ ಮಾಜಿ ಕೇಂದ್ರ ಸಚಿವೆ ಮನೇಕಾ ಗಾಂಧಿ ಅವರು ಯುವಕನಿಗೆ ಕೂಡಲೇ ಸ್ಥಳೀಯ ಠಾಣೆಗೆ ತೆರಳಿ ದೂರು ಸಲ್ಲಿಸುವಂತೆ ಸೂಚಿಸಿ. ಈ ಬಗ್ಗೆ ಶಿವಮೊಗ್ಗ ಎಸ್​ಪಿ ಮಿಥುನ್ ಕುಮಾರ್ ಹಾಗೂ ರಿಪ್ಪನ್‌ಪೇಟೆ ಪಿಎಸ್‌ಐ ಪ್ರವೀಣ್ ಅವರಿಗೆ ಮಾಹಿತಿ ನೀಡಿದ್ದಾರೆ.

ಮನೇಕಾ ಗಾಂಧಿ ಅವರ ಕರೆ ಬರುತಿದ್ದಂತೆ ಎಚ್ಚೆತ್ತುಕೊಂಡ ರಾಜ್ಯ ಪ್ರಾಣಿ ದಯಾ ಸಂಘದವರು ಈ ಬಗ್ಗೆ ಪಶು ವೈದ್ಯಾಧಿಕಾರಿ ಕಡೆಯಿಂದ ಪಟ್ಟಣದ ಠಾಣೆಗೆ ದೂರು ದಾಖಲಿಸಿದ್ದಾರೆ. ದೂರು ಸಲ್ಲಿಕೆಯಾದ ಕೇವಲ 15 ನಿಮಿಷಗಳಲ್ಲಿ ಆರೋಪಿ ಆಟೋ ಚಾಲಕ ವಾಜೀದ್​ನನ್ನು ಪಿಎಸ್‌ಐ ಪ್ರವೀಣ್ ನೇತೃತ್ವದ ಸಿಬ್ಬಂದಿಗಳು ಬಂಧಿಸಿದ್ದಾರೆ.

ಕೋಳಿ ತಿಂದ ಕೋಪಕ್ಕೆ ನಾಯಿ ಹತ್ಯೆ?:ಮನೆಯಲ್ಲಿ ಸಾಕಿದ್ದ ಕೋಳಿಗಳನ್ನು ನಾಯಿ ತಿನ್ನುತ್ತಿದ್ದರಿಂದ ಕುಪಿತಗೊಂಡು ವಾಜೀದ್ ಹೀಗೆ ಮಾಡಿದ್ದೇನೆ ಎಂದು ಕುಟುಂಬಸ್ಥರು ಹೇಳಿದ್ದಾರೆ.

ಇದನ್ನೂ ಓದಿ:ಬೀದಿ ನಾಯಿ ಮೇಲೆ ಕಾರು ಹರಿಸಿದ ಚಾಲಕ: ಹೆಬ್ಬಾಳ ಸಂಚಾರ ಠಾಣೆಯಲ್ಲಿ ಪ್ರಕರಣ

ಇದನ್ನೂ ಓದಿ:ಕೋಳಿ ತಿಂದಿದ್ದಕ್ಕೆ ಶ್ವಾನ ಹತ್ಯೆ: ಬೆಂಗಳೂರಲ್ಲಿ ಎರಡು ಪ್ರತ್ಯೇಕ ಪ್ರಕರಣ ದಾಖಲು

ABOUT THE AUTHOR

...view details