ಮೈಸೂರು: ಜಿದ್ದಿ ಜಿದ್ದಿ ಹೆ ತೂಫಾನ್ ಎಂದು ವೇದಿಕೆಗೆ ಆಗಮಿಸಿದ ಖ್ಯಾತ ಕನ್ನಡ ಸಂಗೀತ ಸಂಯೋಜಕರಾದ ರವಿ ಬಸ್ರೂರು ಅವರು ಕರುನಾಡ ಜನತೆಯ ಮನಮುಟ್ಟುವಂತೆ ಹಾಡಿ ಸಂಭ್ರಮಿಸಿದರು. ಉಗ್ರಂ ಚಿತ್ರದ ಉಗ್ರಂ ವಿರಾಮ್ ಗೀತೆಯನ್ನು ಹಾಡುತ್ತಾ ನೋಡುಗರ ಮೈ ಜುಮ್ ಎನಿಸುವಂತೆ ಮಾಡಿದರು. ಯುವ ದಸರಾ ಭಾಗವಾಗಿ ನಡೆದ ಈ ಕಾರ್ಯಕ್ರಮ ವ್ಯಾಪಕ ಮೆಚ್ಚುಗೆಗೆ ಪಾತ್ರವಾಗಿದೆ.
ಉಗ್ರಂ ಚಿತ್ರದ ಮೂಲಕ ಗುರುತಿಸಿ, ಹೆಚ್ಚಿನ ಅವಕಾಶವನ್ನು ಕಲ್ಪಿಸಿ, ದೊಡ್ಡ ಮಟ್ಟದ ಸಾಧನೆ ಮಾಡಲು ಅವಕಾಶ ಕಲ್ಪಿಸಿಕೊಟ್ಟಿರಿ ಎಂದು ಸರ್ವರಿಗೂ ಧನ್ಯವಾದ ಅರ್ಪಿಸುತ್ತಾ ಮೈಸೂರು ಜನತೆಗೆ ದಸರಾ ಶುಭಾಶಯ ಕೋರಿದರು. ನನ್ನ ಜೀವನದ ಮ್ಯೂಸಿಕ್ ಜರ್ನಿ ಆರಂಭವಾಗಿದ್ದು ಮೈಸೂರಿನಿಂದಲೇ. ಭಕ್ತಿಗೀತೆ ಮೂಲಕ ಆರಂಭಿಸಿದ ಪಯಣ ಇಂದು ಉನ್ನತ ಸ್ಥಾನಕ್ಕೆ ತಂದು ನಿಲ್ಲಿಸಿದೆ ಎಂದರು.
ನಂತರ, ರವಿ ಬಸ್ರೂರು ತಾವು ಸಂಯೋಜಿಸಿರುವ ವಿವಿಧ ಚಿತ್ರದ ಗೀತೆಗಳನ್ನು ಹಾಡಿ ಮೈಸೂರಿನ ಯುವ ಜನತೆಯ ಮನ ಸೆಳೆಯುವುದರ ಜೊತೆಗೆ ಕುಣಿದು ಕುಪ್ಪಳಿಸುವಂತೆ ಮಾಡಿದರು.
ರೋಜ್ ಚಿತ್ರದ ನಾಯಕಿ ಸಾಧ್ವೀಕ ಅವರು ಡಿಸ್ಕೋ ಆಡಲಕ ಗಲ್ಲು ಗಲ್ಲು ಗೆಜ್ಜೆ ಕಟ್ಟಿನಿ, ಶೇಕ್ ಹಿಟ್ ಪುಷ್ಪವತಿ, ಬೇಬಿ ಡ್ಯಾನ್ಸ್ ಫ್ಲೋರ್ ರೆಡ್ಡಿ ಎಂಬ ಗೀತೆಗಳಿಗೆ ಹೆಜ್ಜೆ ಹಾಕಿದರು. ಕನ್ನಡ ನಾಡಿನ ಮೆಚ್ಚಿನ ನಟ ಪುನೀತ್ ರಾಜ್ಕುಮಾರ್ ಅವರ ಅಂಜನಿಪುತ್ರ ಚಿತ್ರದ ಗೀತೆಯನ್ನು ಹಾಡುವ ಮೂಲಕ ಅಪ್ಪು ಸ್ಮರಣೆ ನಡೆಯಿತು.
ರವಿ ಬಸ್ರೂರು ತಂಡದ ಗಾಯಕ ಗಾಯಕಿಯರಿಂದ ಸ್ಯಾಂಡಲ್ವುಡ್ ನೈಟ್ಸ್ ಕಾರ್ಯಕ್ರಮಕ್ಕೆ ಕಿಚ್ಚು ಹಚ್ಚಲಾಯಿತು. ಗಾಯಕಿ ವಿಜಯಲಕ್ಷ್ಮಿ ಅವರು ನಮಾಮಿ ನಮಾಮಿ ಈಶ್ವರ ಪದ ಪೂಜೀತಂ ಎಂಬ ಗೀತೆಯ ಮೂಲಕ ನೆರೆದಿದ್ದ ಯುವ ಸಮೂಹದ ಮೈ ರೋಮಾಂಚನಗೊಳಿಸಿದರು. ಗಾಯಕ ಸಂತೋಷ್ ವೆಂಕಿ ಅವರ ದ್ವಾಪರದಲ್ಲಿ ಶ್ರೀ ಕೃಷ್ಣ ಗೀತೆಯೂ ಯುವ ಮನಸುಗಳನ್ನು ಮುಟ್ಟಿತು. ಕನ್ನಡ ಕೋಗಿಲೆ ಖ್ಯಾತಿಯ ದಿವ್ಯ ರಾಮಚಂದ್ರ ಅವರ ಕನ್ನಡ ನಾನು ಕೋಳಿಗೆ ರಂಗ ಎಂಬ ಗೀತೆಗೆ ಮೈದಾನದಲ್ಲಿ ನೆರೆದಿದ್ದ ಯುವ ಸಮೂಹ ಹುಚ್ಛೆದ್ದು ಕುಣಿದು ಕುಪ್ಪಳಿಸಿತು. ಸಂತೋಷ್ ವೆಂಕಿ ಹಾಗೂ ಸಂಗಡಿಗರು ಮೈಸೂರು ದಸರಾ ಗೀತೆಯನ್ನು ವಿಭಿನ್ನ ಶೈಲಿಯಲ್ಲಿ ಹಾಡಿ ಮನ ಸೆಳೆದರು.
ತೇರಿ ಮೇರಿ ಕಹಾನಿ ಎಂದು ಕಾರ್ಯಕ್ರಮ ಆರಂಭಿಸಿದ ಖ್ಯಾತ ಬಾಲಿವುಡ್ ಹಿನ್ನೆಲೆ ಗಾಯಕಿ ಧ್ವನಿ ಭಾನುಶಾಲಿ ಅವರ ಸುಮಧುರ ದನಿ ಯುವ ಮನಸ್ಸುಗಳನ್ನು ಸೆಳೆಯುವಲ್ಲಿ ಯಶಸ್ವಿಯಾಯಿತು. ಕಾರ್ಯಕ್ರಮದ ಆರಂಭದ ಸಂದರ್ಭ, ತುಂತುರು ಮಳೆ ಕಾಣಿಸಿಕೊಂಡರೂ ಗೀತೆಗಳು ಯುವ ಮನಸುಗಳನ್ನು ಮೈದಾನದಲ್ಲೇ ಇರಿಸಿ ಕುಣಿದು ಕುಪ್ಪಳಿಸುವಂತೆ ಮಾಡಿತು.
ದಿಲ್ಬರ್ ದಿಲ್ಬರ್, ಪುಷ್ಪ ಚಿತ್ರದ ಹಿಂದಿ ವರ್ಷನ್ ಉ ಅಂಟಾವಾ ಗೀತೆಗೆ ತಮ್ಮ ತಂಡದ ಜೊತೆಗೆ ಹೆಜ್ಜೆ ಹಾಕಿ ನೋಡುಗರ ಕಣ್ಮನ ಸೆಳೆಯುತ ಶಿಲ್ಲೆ, ಚಪ್ಪಾಳೆಯ ಜಾತ್ರೆಯನ್ನೇ ಸೃಷ್ಟಿಸಿದರು. ಕೋಕಾ ಎಂಬ ಹಿಂದಿ ಗೀತೆಯನ್ನು ಹಾಡುತ್ತಾ ಯುವ ಮನಸ್ಸುಗಳನ್ನು ಸೆಳೆಯುವುದರ ಜೊತೆಗೆ ಕುಣಿದು ಕುಪ್ಪಳಿಸಿ ಎಲ್ಲರನ್ನೂ ರಂಜಿಸಿ ಎಲ್ಲರಿಗೂ ದಸರಾ ಹಬ್ಬದ ಶುಭ ಕೋರಿದರು. ಒಟ್ಟಾರೆಯಾಗಿ ಬಾಲಿವುಡ್ ಗಾಯಕಿಯ ಕಂಠ ಸೀರಿಗೆ ಮೈಸೂರು ಯುವ ಮನಸುಗಳು ಮನಸೊತು ಕುಣಿದು ಕುಪ್ಪಳಿಸಿ ಯುವ ದಸರಾವನ್ನು ಯಶಸ್ವಿಗೊಳಿಸಿದರು.