ಕರ್ನಾಟಕ

karnataka

ETV Bharat / state

ATMಗಳಿಗೆ ಹಣ ತುಂಬಿಸುವ ಸಿಬ್ಬಂದಿಯಿಂದಲೇ ಕಳ್ಳತನ: ಪರಸ್ಪರ ಹೊಡೆದಾಡಿ ಸಿಕ್ಕಿಬಿದ್ದರು! - ATM THEFT CASE

ಎಟಿಎಂಗಳಲ್ಲಿ ಹಣ ತುಂಬಿಸುತ್ತಿದ್ದ ಸಿಬ್ಬಂದಿಯೇ ಕಳ್ಳತನ ಮಾಡಿದ್ದು, ಆರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ಎಟಿಎಂ ಕಳ್ಳತನ,ATM Theft case,Bengaluru
ಆರೋಪಿಗಳಿಂದ ವಶಪಡಿಸಿಕೊಂಡ ಹಣ (ETV Bharat)

By ETV Bharat Karnataka Team

Published : Feb 7, 2025, 6:18 PM IST

ಬೆಂಗಳೂರು: ಬೇಲಿಯೇ ಎದ್ದು ಹೊಲ ಮೇಯ್ದಂತೆ ಎಟಿಎಂಗಳಿಗೆ ಹಣ ಹಾಕುವ ಸಿಬ್ಬಂದಿಯೇ ಕಳ್ಳತನಕ್ಕಿಳಿದ ಘಟನೆ ಬೆಳಕಿಗೆ ಬಂದಿದೆ. ಎಟಿಎಂ ಹಣ ಕಳ್ಳತನ ಪ್ರಕರಣ ಸಂಬಂಧ ಆರು ಮಂದಿ ಆರೋಪಿಗಳನ್ನು ಮಹಾಲಕ್ಷ್ಮೀ ಲೇಔಟ್ ಠಾಣೆ ಪೊಲೀಸರು ಸೆರೆಹಿಡಿದಿದ್ದಾರೆ.

ಶಿವು, ಸಮೀರ್, ಮನೋಹರ್, ಗಿರೀಶ್, ಜಗ್ಗೇಶ್, ಜಸ್ವಂತ್ ಬಂಧಿತರು. ಇವರಿಂದ 51.76 ಲಕ್ಷ ನಗದು ಹಾಗೂ 90 ಲಕ್ಷ ಮೌಲ್ಯದ ಮೂರು ಕಾರುಗಳನ್ನು ವಶಕ್ಕೆ ಪಡೆಯಲಾಗಿದೆ.

ಜ.25ರಂದು ಕೆಂಪೇಗೌಡ ಬಡಾವಣೆ ಬಳಿ ಈ ಆರು ಆರೋಪಿಗಳು ಹಣಕಾಸಿನ ವಿಚಾರವಾಗಿ ಗಲಾಟೆ ಮಾಡಿಕೊಳ್ಳುತ್ತಿದ್ದರು. ಮಾಹಿತಿ ಆಧರಿಸಿ ಸ್ಥಳಕ್ಕೆ ದೌಡಾಯಿಸಿ ಆರೋಪಿಗಳನ್ನು ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸಿದಾಗ ಕಳ್ಳತನ ಪ್ರಕರಣ ಬೆಳಕಿಗೆ ಬಂದಿದೆ. ಸದ್ಯ ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ಧಾರೆ.

ಆರೋಪಿಗಳೆಲ್ಲರೂ ನಂದಿನಿ ಲೇಔಟ್ ಹಾಗೂ ಲಗ್ಗೆರೆ ಸುತ್ತಮುತ್ತಲಿನ ನಿವಾಸಿಗಳಾಗಿದ್ದು, ಸೆಕ್ಯೂರ್ ವ್ಯಾಲಿ ಪ್ರೈವೇಟ್ ಏಜೆನ್ಸಿಯಲ್ಲಿ ಎರಡು ವರ್ಷಗಳಿಂದ ಕೆಲಸ ಮಾಡುತ್ತಿದ್ದರು. ಎಟಿಎಂಗಳಿಗೆ ಹಣ ತುಂಬಿಸುವ ಹಾಗೂ ಎಟಿಎಂ ದುರಸ್ತಿ ಕೆಲಸ ಮಾಡುತ್ತಿದ್ದರು. ಎಟಿಎಂ ರಿಪೇರಿ ಮಾಡುವಾಗ ಪಾಸ್​​ವರ್ಡ್ ಪಡೆದು, ಎಟಿಎಂನಲ್ಲಿದ್ದ ಹಣ ಕಳ್ಳತನ ಮಾಡಿ ಮೋಜು-ಮಸ್ತಿ ಮಾಡುತ್ತಿದ್ದರು. ಎಟಿಎಂಗಳ ಆಡಿಟ್ ಮಾಡುವಾಗ ಕಳವು ಮಾಡಿದ್ದ ಹಣ ಹೊಂದಿಸಲು ಮತ್ತೊಂದು ಎಟಿಎಂನಲ್ಲಿ ಹಣ ಕದಿಯುವ ಪ್ರವೃತ್ತಿ ರೂಢಿಸಿಕೊಂಡಿದ್ದರು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಕಾರಲ್ಲಿ 43.76 ಲಕ್ಷ ರೂ ಪತ್ತೆ: ನಗರದ ವಿವಿಧ ಎಟಿಎಂಗಳಿಂದ 43.76 ಲಕ್ಷ ಹಣ ಎಗರಿಸಿದ್ದ ಆರೋಪಿಗಳು, ಕೆಂಪೇಗೌಡ ಲೇಔಟ್ ಬಳಿ ಹಣ ಹಂಚಿಕೆ ವಿಷಯದಲ್ಲಿ ಭಿನ್ನಾಭಿಪ್ರಾಯ ಮೂಡಿ ಪರಸ್ಪರ ಗಲಾಟೆ ಮಾಡಿಕೊಂಡಿದ್ದರು. ಈ ಸಂಬಂಧ ಸ್ಥಳೀಯರು ನೀಡಿದ ಮಾಹಿತಿ ಆಧರಿಸಿ ಮಹಾಲಕ್ಷ್ಮೀ ಲೇಔಟ್ ಪೊಲೀಸರು ಪ್ರಶ್ನಿಸಿದಾಗ ಅನುಮಾನಾಸ್ಪದವಾಗಿ ಆರೋಪಿಗಳು ವರ್ತಿಸಿದ್ದರು. ಅನುಮಾನಗೊಂಡು ಪರಿಶೀಲಿಸಿದಾಗ ಕಾರಿನಲ್ಲಿ 43.76 ಲಕ್ಷ ಪತ್ತೆಯಾಗಿದೆ. ಕೂಡಲೇ ಆರೋಪಿಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಕಳ್ಳತನ ಕೃತ್ಯ ಬೆಳಕಿಗೆ ಬಂದಿದೆ ಎಂದು ಪೊಲೀಸರು ಹೇಳಿದ್ದಾರೆ.

ಕಳೆದ ಎರಡು ವರ್ಷಗಳಿಂದ ಕೆಲಸ ಮಾಡುತ್ತಿದ್ದ ಆರೋಪಿಗಳು ಆರಂಭದಲ್ಲಿ ಹಣ ಕದ್ದು ಮೋಜು-ಮಸ್ತಿ ಮಾಡುತ್ತಿದ್ದರು. ಬಳಿಕ ಕದ್ದ ಹಣ ಹೆಚ್ಚಾದಂತೆ ಮನೆಯವರ ಹೆಸರಿನಲ್ಲಿ ಕಾರು ಖರೀದಿಸಿದ್ದರು. ಆರೋಪಿಗಳ ಪೈಕಿ ಓರ್ವ ಆರೋಪಿ ಮನೆಯಲ್ಲಿ 8 ಲಕ್ಷ ಬಚ್ಚಿಟ್ಟಿದ್ದ. ಸದ್ಯ ಮೂರು ಕಾರು ಹಾಗೂ 51.76 ಲಕ್ಷ ರೂ. ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಇದನ್ನೂ ಓದಿ: ಲೂಟಿ ಹೊಡೆದ ದುಡ್ಡಿಂದ ಐಷಾರಾಮಿ ಜೀವನ: 5 ರಾಜ್ಯಗಳಲ್ಲಿ 80 ಪ್ರಕರಣ; ಕುಖ್ಯಾತ ದರೋಡೆಕೋರ ಸೆರೆ

ಇದನ್ನೂ ಓದಿ:48 ಬೈಕ್​​​​​ ಕಳ್ಳತನ ಮಾಡಿದ್ದ ಖದೀಮನ ಬಂಧಿಸಿದ ಪೊಲೀಸರು: ಚೋರನಿಂದ ಬೈಕ್​​ ವಶಕ್ಕೆ ಪಡೆದ ಖಾಕಿ

ABOUT THE AUTHOR

...view details