ಶಿವಮೊಗ್ಗ:"2024ರಲ್ಲಿ ಜಿಲ್ಲೆಯ ಪೊಲೀಸ್ ಠಾಣೆಗಳಲ್ಲಿ ಒಟ್ಟು 612 ಸ್ವತ್ತು ಕಳವು ಪ್ರಕರಣಗಳು ದಾಖಲಾಗಿವೆ. ಈ ಪೈಕಿ 244 ಪ್ರಕರಣಗಳನ್ನು ಬೇಧಿಸಿ 3.22.37.654 ಕೋಟಿ ರೂ ಮೌಲ್ಯದ ಚಿನ್ನಾಭರಣ, ಬೈಕ್ ಹಾಗೂ ಕಾರುಗಳನ್ನು ವಶಪಡಿಸಿಕೊಳ್ಳಲಾಗಿದೆ" ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಿಥುನ್ ಕುಮಾರ್ ತಿಳಿಸಿದರು.
ಇಂದು ಸ್ವತ್ತುಗಳನ್ನು ವಾರಸುದಾರರಿಗೆ ಮರಳಿಸುವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, "ಜಿಲ್ಲೆಯಲ್ಲಿ ಒಟ್ಟು 612 ಸ್ವತ್ತು ಕಳವು ಪ್ರಕರಣಗಳು ದಾಖಲಾಗಿವೆ. ಅದರಲ್ಲಿ 2 ಕೊಲೆ, 3 ದರೋಡೆ, 19 ಸುಲಿಗೆ, 4 ಸರಗಳ್ಳತನ, 51 ಕಳವು, 14 ಮನೆಗಳ್ಳತನ, 62 ಸಾಮಾನ್ಯ ಕಳವು, 6 ಜಾನುವಾರು ಕಳವು, 70 ವಾಹನ ಕಳವು, 13 ವಂಚನೆ ಪ್ರಕರಣ ಸೇರಿದಂತೆ 244 ಪ್ರಕರಣಗಳಲ್ಲಿ ಆರೋಪಿಗಳ ಪತ್ತೆ ಮಾಡಿ 3.22 ಕೋಟಿ ರೂ ಮೌಲ್ಯದ ಸ್ವತ್ತು ವಶಪಡಿಸಿಕೊಂಡು ವಾರಸುದಾರರಿಗೆ ಮರಳಿಸಲಾಗಿದೆ" ಎಂದು ಹೇಳಿದರು.
"2023ರಲ್ಲಿ ನಡೆದ ಪ್ರಕರಣಗಳ ಪೈಕಿ 26 ಮನೆಗಳ್ಳತನ, 11 ಸಾಮಾನ್ಯ ಕಳವು, 17 ವಾಹನ ಕಳವು ಸೇರಿದಂತೆ 54 ಪ್ರಕರಣಗಳನ್ನು ಪತ್ತೆ ಹಚ್ಚಿ 54,61,645 ಲಕ್ಷ ಮೌಲ್ಯದ ಸ್ವತ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಈ ವರ್ಷ ಕಳವು ಮಾಡಿದ್ದ 477 ಮೊಬೈಲ್ಗಳನ್ನು ಪತ್ತೆ ಮಾಡಿ ವಾರಸುದಾರರಿಗೆ ಹಿಂತಿರುಗಿಸಲಾಗಿದೆ" ಎಂದು ಮಾಹಿತಿ ನೀಡಿದರು.