ಬೆಂಗಳೂರು : ಖರ್ಗೆ ಕುಟುಂಬದ ಒಡೆತನದ ಸಿದ್ಧಾರ್ಥ ವಿಹಾರ ಟ್ರಸ್ಟ್ಗೆ ಕೆಐಎಡಿಬಿಯಿಂದ ಭೂಮಿ ಹಂಚಿಕೆ ಆರೋಪ ಕೇಳಿಬಂದಿದ್ದು, ಸಿಎ ಸೈಟ್ಗಳನ್ನು ಪಡೆಯಲು ಅಧಿಕಾರ ದುರುಪಯೋಗ ಪಡಿಸಿಕೊಂಡಿದ್ದಾರೆ ಎಂಬ ಆರೋಪ ಇದೆ. ಹಾಗಾಗಿ ಕೆಐಎಡಿಬಿ ಹಂಚಿಕೆ ಪ್ರಕ್ರಿಯೆಯ ಎಲ್ಲಾ ದಾಖಲೆಗಳನ್ನು ಒದಗಿಸಿ ಸಾರ್ವಜನಿಕವಾಗಿ ಮುಂದಿಡಬೇಕು ಎಂದು ಮಾಜಿ ಡಿಸಿಎಂ ಡಾ. ಅಶ್ವತ್ಥ್ನಾರಾಯಣ್ ಆಗ್ರಹಿಸಿದ್ದಾರೆ.
ಮಲ್ಲೇಶ್ವರದಲ್ಲಿರುವ ಶಾಸಕರ ಕಚೇರಿಯಲ್ಲಿ ಮಾಧ್ಯಮಗೋಷ್ಟಿ ನಡೆಸಿ ಮಾತನಾಡಿದ ಅವರು, ಈಗ ಆರೋಪ ಬರುತ್ತಿದ್ದಂತೆ ಚಾಣಕ್ಯ ವಿವಿಗೆ ಕೊಟ್ಟಿರಲಿಲ್ವಾ ಎಂದು ಕೇಳಿದ್ದಾರೆ. ಸಿಎ ಸೈಟ್ಗೂ, ಭೂಮಿ ಹಂಚಿಕೆಗೂ ಬಹಳ ವ್ಯತ್ಯಾಸ ಇದೆ. ಸಂಸ್ಥೆ, ಕೈಗಾರಿಕೆಗೆ ಭೂಮಿ ಮಂಜೂರು ಬೇಡಿಕೆ ಬಂದಾಗ ಅದನ್ನು ಒದಗಿಸಬೇಕಾದದ್ದು ಕೆಐಎಡಿಬಿ ಕರ್ತವ್ಯ. ಚಾಣಕ್ಯ ವಿವಿಗೆ ಕೆಲವು ರಿಯಾಯಿತಿ ಕೊಟ್ಟಿದ್ದೇವೆ. ಇಲ್ಲ ಅಂತಾ ಅಲ್ಲ. ಸಿಎ ಸೈಟ್ ಹಂಚಿಕೆಗೆ ಕೆಲವು ಮಾರ್ಗಸೂಚಿ ಇದೆ. ಸಿದ್ಧಾರ್ಥ ವಿಹಾರ ಟ್ರಸ್ಟ್ಗೆ ಬೇಕಾಬಿಟ್ಟಿಯಾಗಿ ಕೊಟ್ಟಿದ್ದಾರೆ ಎಂಬ ಆಪಾದನೆ ಸರ್ಕಾರದ ಮೇಲಿದೆ ಎಂದರು.
ಯಾವ ಉದ್ದೇಶ ಏನು ಅಂತಾನೂ ಇಲ್ಲದೇ ತಮಗೆ ಬೇಕಾದವರಿಗೆ ಕೊಟ್ಟು ಅಧಿಕಾರ ದುರುಪಯೋಗ ಪಡಿಸಿಕೊಂಡಿದ್ದಾರೆ ಎಂಬ ಸ್ಪಷ್ಟ ಆಪಾದನೆ ಇದೆ. ಸ್ವಾರ್ಥತೆ ಇರುವವರಿಗೆ ಕೊಟ್ಟು ಇನ್ನೂ ಲೂಟಿ ಮಾಡಿ ಅಂತಾ ಸರ್ಕಾರದ ಆಸ್ತಿ ಕೊಟ್ಟಿರುವುದು ದುರದೃಷ್ಟಕರ. ಕಾಂಗ್ರೆಸ್ ಸರ್ಕಾರ ಆತ್ಮಸಾಕ್ಷಿ, ಜವಾಬ್ದಾರಿ ಇಲ್ಲದೇ ಈ ರೀತಿ ನಿರ್ವಹಣೆ ಮಾಡುತ್ತಿದೆ. ಖರ್ಗೆಯವರು ಪಾಪ ಯೂ ಟರ್ನ್, ಬಿ ಟರ್ನ್, ಸಿ ಟರ್ನ್ ಅಂತಾ ದೊಡ್ಡ ದೊಡ್ಡ ಮಾತಾಡುತ್ತಾರೆ. ಭ್ರಷ್ಟಾಚಾರ ಆಗಿದೆ ಏನು ಅಂತಾ ಕೇಳಿದರೆ ಅವರದ್ದು ಉತ್ತರ ಇಲ್ಲ. ಕೊನೆಯ ಪಕ್ಷ ಉತ್ತರ ಕೊಡುವ ಶಕ್ತಿಯನ್ನಾದರೂ ನೀವು ಬೆಳೆಸಿಕೊಳ್ಳಿ ಎಂದು ಟೀಕಿಸಿದರು.
ನಮಗೆ ಯಾವ ಸರ್ಕಾರ ಬೀಳಿಸೋ ಇಚ್ಛೆ ಇಲ್ಲ: ಆಪರೇಷನ್ ಕಮಲಕ್ಕಾಗಿ 100 ಕೋಟಿ ಆಫರ್ ಮಾಡಲಾಗುತ್ತಿದೆ ಎನ್ನುವ ಮಂಡ್ಯ ಶಾಸಕ ಗಣಿಗ ರವಿಕುಮಾರ್ ಕುರಿತು ಪ್ರತಿಕ್ರಿಯೆ ನೀಡಿದ ಅಶ್ವತ್ಥ್ನಾರಾಯಣ್, ನಮಗೆ ಯಾವ ಸರ್ಕಾರ ಬೀಳಿಸೋ ಇಚ್ಛೆ ಇಲ್ಲ. ಅವರಿಗೆ 136 ಸ್ಥಾನ ಕೊಟ್ಟಿದ್ದಾರೆ. ನೀವು ಉತ್ತಮ ಅಧಿಕಾರ ನಡೆಸಿ. ಗಮನ ಬೇರೆಡೆ ಸೆಳೆಯಲು ಈ ರೀತಿ ಹೇಳಿಕೆ ಕೊಟ್ಟಿದ್ದಾರೆ. ಇದೇ ಮೊದಲಲ್ಲ, ಅನೇಕ ಬಾರಿ ಈ ರೀತಿ ಹೇಳಿಕೆ ಕೊಟ್ಟಿದ್ದಾರೆ. ನಿಮ್ಮ ತಿಳುವಳಿಕೆ, ಜ್ಞಾನ ಕೆಟ್ಟದ್ದಕ್ಕೆ ಬಳಕೆ ಮಾಡಿಕೊಳ್ಳಬೇಡಿ. ಮಂಡ್ಯ ಜನ ನಿಮ್ಮ ಮೇಲೆ ಬಹಳಷ್ಟು ವಿಶ್ವಾಸ ಇಟ್ಟಿದ್ದಾರೆ. ನಿಮ್ಮ ಕ್ಷೇತ್ರದಲ್ಲಿ ಸರಿಯಾದ ರಸ್ತೆ ಇಲ್ಲ. ಮೊದಲು ಜನರ ಕೆಲಸ ಮಾಡಿ. ನೀವು ಶಾಸಕರಾಗಿ ಗಾಳಿಯಲ್ಲಿ ಗುಂಡು ಹೊಡೆಯುವ ಕೆಲಸ ಮಾಡಬೇಡಿ. ನಿಮಗೆ ನೂರು ಕೋಟಿ ಆಫರ್ ಕೊಟ್ಟವರ ಮೇಲೆ ದೂರು ದಾಖಲಿಸಿ ಎಂದು ಹೇಳಿದರು.