ಹುಬ್ಬಳ್ಳಿ :ಈಗಾಗಲೇಬೆಲೆ ಏರಿಕೆಯಿಂದ ಜನಸಾಮಾನ್ಯರು ಸಮಸ್ಯೆ ಅನುಭವಿಸುತ್ತಿದ್ದಾರೆ. ಅದರ ನಡುವೆಯೂ ಕೆಲವರು ಈ ರೀತಿ ಬಂದ್ ಮಾಡುವ ಮೂಲಕ ಜನರಿಗೆ ಸಂಕಷ್ಟ ಎದುರಾಗುವಂತೆ ಮಾಡುತ್ತಿದ್ದಾರೆ. ಈ ಕೂಡಲೇ ಈ ಬಂದ್ ವಾಪಸ್ ಪಡೆಯಬೇಕು. ಅವಳಿನಗರ ಬಂದ್ ವಾಪಸ್ ಪಡೆಯದೇ ಹೋದಲ್ಲಿ ಅದಕ್ಕೆ ಪ್ರತಿಯಾಗಿ ಬಿಜೆಪಿಯಿಂದ ಬಂದ್ ಕರೆ ನೀಡಬೇಕಾಗುತ್ತದೆ. ಇದರಿಂದಾಗುವ ಸಾರ್ವಜನಿಕ ಸಮಸ್ಯೆಗೆ ಕಾಂಗ್ರೆಸ್ನವರೇ ನೇರ ಹೊಣೆಯನ್ನ ಹೊರಬೇಕಾಗುತ್ತೆ ಎಂದು ವಿರೋಧ ಪಕ್ಷದ ಉಪನಾಯಕ ಅರವಿಂದ ಬೆಲ್ಲದ್ ಹೇಳಿದರು.
ನಗರದಲ್ಲಿಂದು ಈ ಕುರಿತು ಮಾಧ್ಯಮಗೋಷ್ಟಿಯಲ್ಲಿ ಮಾತನಾಡಿದ ಅವರು, ಡಾ. ಬಿ. ಆರ್ ಅಂಬೇಡ್ಕರ್ ಹೆಸರಿನ ಮೂಲಕ ದಲಿತರ ಮತ ಪಡೆಯುವ ತಂತ್ರವನ್ನು ಕಾಂಗ್ರೆಸ್ ಮಾಡುತ್ತಿದೆ. ಮತ ಬ್ಯಾಂಕ್ ರಾಜಕೀಯದ ಕೆಲಸವನ್ನ ಕಾಂಗ್ರೆಸ್ನವರು ಮಾಡುತ್ತಿದ್ದಾರೆ. ಜ. 9 ರಂದು ಅವಳಿ ನಗರ ಬಂದ್ ಮಾಡುವ ಮೂಲಕ ಜನಸಾಮಾನ್ಯರಿಗೆ ಕಾಂಗ್ರೆಸ್ ಸಮಸ್ಯೆ ತಂದೊಡ್ಡುತ್ತಿದೆ ಎಂದು ಆರೋಪಿಸಿದರು.
ಕಳೆದ ಡಿಸೆಂಬರ್ನಲ್ಲಿ ನಡೆದ ಸಂಸತ್ ಅಧಿವೇಶನದ ಸಂದರ್ಭದಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಸಂವಿಧಾನ ಶಿಲ್ಪಿ ಡಾ. ಬಿ ಆರ್ ಅಂಬೇಡ್ಕರ್ ಅವರನ್ನು ಅವಮಾನಿಸಿದ್ದಾರೆ ಎಂದು ಆರೋಪಿಸಿರುವ ದಲಿತ ಸಂಘಟನೆಗಳು ಜ. 9 ರಂದು ಹುಬ್ಬಳ್ಳಿ-ಧಾರವಾಡ ಬಂದ್ಗೆ ಕರೆ ನೀಡಿವೆ. ಅಲ್ಲದೆ, ಅಮಿತ್ ಶಾ ರಾಜೀನಾಮೆ ನೀಡಬೇಕೆಂದು ಕಾಂಗ್ರೆಸ್ ಸೇರಿದಂತೆ ದಲಿತ ಸಂಘಟನೆಗಳ ಮುಖಂಡರು ಒತ್ತಾಯಿಸುತ್ತಿದ್ದಾರೆ.