ಮಂಗಳೂರು:ಬಿಜೆಪಿ ಮುಖಂಡ ಅರುಣ್ ಪುತ್ತಿಲ ಅವರಿಗೆ ಜಾಮೀನು ಮಂಜೂರಾಗಿದೆ. ಜಾಮೀನು ಸಿಕ್ಕ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿರುವ ಅವರು, ಸುಳ್ಳು ಆರೋಪದ ವಿರುದ್ಧ ಕಾನೂನು ಹೋರಾಟ ಮಾಡುವುದಾಗಿ ಹೇಳಿದ್ದಾರೆ.
ಪುತ್ತೂರು ಮಹಿಳಾ ಪೊಲೀಸ್ ಠಾಣೆಯಲ್ಲಿ ದಾಖಲಾದ ಪ್ರಕರಣದ ಹಿನ್ನೆಲೆಯಲ್ಲಿ ನ್ಯಾಯಾಲಯಕ್ಕೆ ತಮ್ಮ ವಕೀಲರಾದ ನರಸಿಂಹ ಪ್ರಸಾದ್ ಮೂಲಕ ಹಾಜರಾದ ಅರುಣ್ ಕುಮಾರ್ ಪುತ್ತಿಲರಿಗೆ ಪುತ್ತೂರಿನ ಪ್ರಧಾನ ಸಿವಿಲ್ ಕೋರ್ಟ್ ಹಾಗೂ ಜೆಎಂಎಫ್ ಸಿ ನ್ಯಾಯಾಲಯ ಜಾಮೀನು ಮಂಜೂರು ಮಾಡಿದೆ.
ನ್ಯಾಯಾಂಗ ವ್ಯವಸ್ಥೆಯಲ್ಲಿ ನಂಬಿಕೆ ಇದ್ದು, ಮುಂದಿನ ದಿನಗಳಲ್ಲಿ ನನ್ನ ವಿರುದ್ಧ ಬಂದಂತಹ ಆರೋಪಗಳಿಗೆ ಕಾನೂನು ರೀತಿಯ ಹೋರಾಟ ಮಾಡುತ್ತೇನೆ ಎಂದು ಅರುಣ್ ಕುಮಾರ್ ಪುತ್ತಿಲ ತಿಳಿಸಿದ್ದಾರೆ.
ಪ್ರಕರಣದ ಹಿನ್ನೆಲೆ: ಮಹಿಳೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿರುವ ಆರೋಪದಡಿ ಬಿಜೆಪಿ ಮುಖಂಡ ಅರುಣ್ ಕುಮಾರ್ ಪುತ್ತಿಲ ವಿರುದ್ಧ 47 ವರ್ಷದ ಮಹಿಳೆ ನೀಡಿದ ದೂರಿನ ಅನ್ವಯ ಪುತ್ತೂರು ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ಎಫ್‌ಐಆರ್ ದಾಖಲಾಗಿತ್ತು.
ಅರುಣ್ ಕುಮಾರ್ ಪುತ್ತಿಲ ಬೆಂಗಳೂರಿನ ಹೋಟೆಲ್ವೊಂದರಲ್ಲಿ 2023ರ ಜೂನ್ನಲ್ಲಿ ಲೈಂಗಿಕ ದೌರ್ಜನ್ಯ ಎಸಗಿದ್ದರು ಎಂದು ಭಾನುವಾರ ಮಹಿಳೆ ದೂರು ನೀಡಿದ್ದರು. ದೌರ್ಜನ್ಯ ಎಸಗಿದ್ದಾರೆ ಎನ್ನಲಾದ ಸಮಯದ ಫೋಟೋ, ಸೆಲ್ಫಿ ಹಾಗೂ ವಿಡಿಯೋಗಳನ್ನು ಇಟ್ಟುಕೊಂಡು ಬ್ಲಾಕ್ಮೇಲ್ ಮಾಡುತ್ತಿದ್ದಾರೆಂದು ಅವರು ಆರೋಪಿಸಿದ್ದರು. ಈ ಹಿನ್ನೆಲೆಯಲ್ಲಿ ಐಪಿಸಿ 417, 354A, 506 ಸೆಕ್ಷನ್‌ಗಳಡಿಯಲ್ಲಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು.
ಮಹಿಳೆಗೆ ವೈದ್ಯಕೀಯ ಪರೀಕ್ಷೆ;ಬಿಜೆಪಿ ಮುಖಂಡ ಅರುಣ್ ಕುಮಾರ್ ಪುತ್ತಿಲ ವಿರುದ್ಧ ದೌರ್ಜನ್ಯ ದೂರು ನೀಡಿದ ಮಹಿಳೆಗೆ ಪುತ್ತೂರಿನ ಸರ್ಕಾರಿ ಆಸ್ಪತ್ರೆಯಲ್ಲಿ ಇಂದು ವೈದ್ಯಕೀಯ ಪರೀಕ್ಷೆ ನಡೆಸಲಾಯಿತು.
ಬಿಜೆಪಿ ಮುಖಂಡ ಅರುಣ್ ಕುಮಾರ್ ಪುತ್ತಿಲ ವಿರುದ್ಧ ಲೈಂಗಿಕ ದೌರ್ಜನ್ಯ, ನಂಬಿಕೆ ದ್ರೋಹ, ಮಾನಹಾನಿ, ಬ್ಲಾಕ್ ಮೇಲಿಂಗ್, ಶಾರೀರಿಕ ಮತ್ತು ಮಾನಸಿಕ ಪೀಡನೆ, ಕೊಲೆ ಬೆದರಿಕೆಯನ್ನು ಹಾಕಿರುವ ಕುರಿತು ದೂರು ನೀಡಿದ ವಿಚಾರಕ್ಕೆ ಸಂಬಂಧಿಸಿ ದೂರುದಾರ ಮಹಿಳೆಯನ್ನು ಪುತ್ತೂರು ಸಾರ್ವಜನಿಕ ಆಸ್ಪತ್ರೆಗೆ ವೈದ್ಯಕಿಯ ಪರೀಕ್ಷೆಗೆ ಕರೆದೊಯ್ಯಲಾಯಿತು.
ಮಹಿಳೆಯ ವೈದ್ಯಕೀಯ ಪರೀಕ್ಷೆ ಬಳಿಕ ಆಕೆಯನ್ನು ಆಸ್ಪತ್ರೆಯ ಹಿಂಬದಿ ಬಾಗಿಲಿನಿಂದ ಕರೆದೊಯ್ಯಲಾಯಿತು.
ಇದನ್ನೂ ಓದಿ: ಲೈಂಗಿಕ ದೌರ್ಜನ್ಯ ಆರೋಪ: ಬಿಜೆಪಿ ಮುಖಂಡ ಅರುಣ್ ಕುಮಾರ್ ಪುತ್ತಿಲ ವಿರುದ್ಧ ಎಫ್‌ಐಆರ್ - Arun Kumar Puttila