ಕರ್ನಾಟಕ

karnataka

ETV Bharat / state

ಲೋಕಸಭೆ ಚುನಾವಣೆ: ಪಕ್ಷೇತರನಾಗಿ ಕಣಕ್ಕಳಿಯಲು ನಿರ್ಧರಿಸಿದ ಅರುಣ್ ಕುಮಾರ್ ಪುತ್ತಿಲ - ಬಿಜೆಪಿ ಟಿಕೆಟ್ ಆಕಾಂಕ್ಷಿ

ಮುಂಬರುವ ಲೋಕಸಭೆ ಚುನಾವಣೆಗೆ ಅರುಣ್ ಕುಮಾರ್ ಪುತ್ತಿಲ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಲಿದ್ದಾರೆ.

ಅರುಣ್ ಕುಮಾರ್ ಪುತ್ತಿಲ ಪಕ್ಷೇತರ ಅಭ್ಯರ್ಥಿಯಾಗಿ ಲೋಕಸಭೆ ಸ್ಪರ್ಧೆಗೆ ನಿರ್ಧಾರ
ಅರುಣ್ ಕುಮಾರ್ ಪುತ್ತಿಲ ಪಕ್ಷೇತರ ಅಭ್ಯರ್ಥಿಯಾಗಿ ಲೋಕಸಭೆ ಸ್ಪರ್ಧೆಗೆ ನಿರ್ಧಾರ

By ETV Bharat Karnataka Team

Published : Feb 29, 2024, 5:48 PM IST

Updated : Feb 29, 2024, 11:03 PM IST

ಮಂಗಳೂರು:ಪುತ್ತೂರು ವಿಧಾನಸಭಾ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಚುನಾವಣೆಗೆ ಸ್ಪರ್ಧಿಸಿ ಬಿಜೆಪಿಯನ್ನು 3ನೇ ಸ್ಥಾನಕ್ಕೆ ತಳ್ಳಿದ ಪುತ್ತಿಲ ಪರಿವಾರದ ಅರುಣ್ ಕುಮಾರ್ ಪುತ್ತಿಲ ಲೋಕಸಭೆ ಚುನಾವಣೆಗೆ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯಲು ನಿರ್ಧರಿಸಿದ್ದಾರೆ.

ಕಳೆದ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಯಿಂದ ಟಿಕೆಟ್ ಸಿಗದ ಹಿನ್ನೆಲೆಯಲ್ಲಿ ಪುತ್ತೂರಿನಿಂದ ಪಕ್ಷೇತರ ಅಭ್ಯರ್ಥಿಯಾಗಿ ಇವರು ಕಣಕ್ಕಿಳಿದಿದ್ದರು. ಲೋಕಸಭಾ ಚುನಾವಣೆಗೂ ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದರು. ಈ ಹಿನ್ನೆಲೆಯಲ್ಲಿ ಅವರು ಹಲವು ಬೇಡಿಕೆಗಳನ್ನು ಮುಂದಿಟ್ಟುಕೊಂಡು ಮತ್ತೆ ಬಿಜೆಪಿ ಸೇರ್ಪಡೆಗೆ ಹಲವು ಸುತ್ತಿನ ಮಾತುಕತೆ ನಡೆದಿತ್ತು. ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರರನ್ನು ಭೇಟಿಯಾಗಿ ಮಾತುಕತೆಯನ್ನೂ ನಡೆಸಿದ್ದರು. ಆದರೆ ಸಾಮಾನ್ಯ ಕಾರ್ಯಕರ್ತರಾಗಿ ಬಿಜೆಪಿ ಸೇರ್ಪಡೆಗೆ ಸೂಚಿಸಲಾಗಿತ್ತು. ಆದ್ದರಿಂದ ಮಾತುಕತೆ ವಿಫಲವಾಗಿ ಪಕ್ಷೇತರನಾಗಿ ಸ್ಪರ್ಧಿಸಲು ಪುತ್ತಿಲ ತೀರ್ಮಾನಿಸಿದ್ದಾರೆ.

ಪುತ್ತಿಲ ಪರಿವಾರ ಅಧ್ಯಕ್ಷ ಪ್ರಸನ್ನ ಮಾರ್ತ ಸುದ್ಧಿಗೋಷ್ಠಿ ನಡೆಸಿ, "ಲೋಕಸಭಾ ಚುನಾವಣೆಯಲ್ಲಿ ಅರುಣ್ ಕುಮಾರ್ ಪುತ್ತಿಲ ಬಂಡಾಯ ಸ್ಪರ್ಧಿಯಾಗಿ ಕಣಕ್ಕಿಳಿಯಲಿದ್ದಾರೆ" ಎಂದು ತಿಳಿಸಿದ್ದಾರೆ.

ನಳೀನ್​ ಕುಮಾರ್​ ಕಟೀಲ್ ಹೇಳಿಕೆ

ಈ ಕುರಿತು ದ.ಕ.ಜಿಲ್ಲಾ ಸಂಸದ ನಳಿನ್ ಕುಮಾರ್ ಅವರು ಮಂಗಳೂರಿನಲ್ಲಿ ಪ್ರತಿಕ್ರಿಯಿಸಿ, "ಪುತ್ತಿಲ ಪರಿವಾರ ಸ್ವತಂತ್ರ ಸಂಘಟನೆ. ತಮ್ಮ ಅಭಿಪ್ರಾಯ, ತೀರ್ಮಾನ ಕೈಗೊಳ್ಳಲು ಸ್ವತಂತ್ರರಿದ್ದಾರೆ. ಅವರನ್ನು ಮತ್ತೆ ಬಿಜೆಪಿಗೆ ಕರೆಸಿಕೊಳ್ಳಲು ಪಕ್ಷ ಎಲ್ಲಾ ರೀತಿಯ ಪ್ರಯತ್ನಪಟ್ಟಿದೆ. ಬಿಜೆಪಿ ದೇಶದ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. ರಾಷ್ಟ್ರೀಯ ಪಕ್ಷ ಕಾಂಗ್ರೆಸ್ ಅನ್ನು ಎದುರಿಸಿ ಬಿಜೆಪಿ ಅತೀ ಹೆಚ್ಚು ಶಾಸಕರು, ಸಂಸದರನ್ನು, ತಾಲೂಕು ಪಂಚಾಯತ್ ಸದಸ್ಯರನ್ನು ಪಡೆದಿದೆ. ಆದ್ದರಿಂದ ಸಹಜವಾಗಿ ಬಿಜೆಪಿಗೆ ಎದುರಾಳಿಗಳ ಸಮಸ್ಯೆಯಿಲ್ಲ‌. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಚುನಾವಣೆಗೆ ನಿಲ್ಲುವ ಹಕ್ಕು ಎಲ್ಲರಿಗೂ ಇದೆ. ಚುನಾವಣೆ ಬಂದಾಗ ಇಂತಹ ಸಮಸ್ಯೆಗಳು, ಸವಾಲುಗಳು ಉದ್ಭವವಾಗುತ್ತಿರುತ್ತದೆ‌. ಇವೆಲ್ಲದರ ಮಧ್ಯೆಯೂ ಬಿಜೆಪಿ ಗೆಲುವು ಸಾಧಿಸಲಿದೆ ಎಂದಿದ್ದಾರೆ. ಲೋಕಸಭೆ ಚುನಾವಣೆಗೂ ವಿಧಾನಸಭೆ ಚುನಾವಣೆಗೂ ಅಜಗಜಾಂತರ ವ್ಯತ್ಯಾಸಗಳಿವೆ. ಆಗ ಇದ್ದ ಸಮಸ್ಯೆಗಳೇ ಬೇರೆ, ಈಗ ಆಗುತ್ತಿರುವ ವಿಚಾರಗಳೇ ಬೇರೆ‌. ಈ ಬಾರಿಯ ಚುನಾವಣೆಯಲ್ಲಿ ಅಭೂತಪೂರ್ವ ಗೆಲುವನ್ನು ಬಿಜೆಪಿ ಸಾಧಿಸಲಿದೆ. ರಾಷ್ಟ್ರೀಯ ನಾಯಕರು ಯಾರಿಗೆ ಈ ಬಾರಿ ದ.ಕ.ಜಿಲ್ಲೆಯಲ್ಲಿ ಟಿಕೆಟ್ ನೀಡುತ್ತಾರೋ, ಅದಕ್ಕೆ ಎಲ್ಲದಕ್ಕೂ ಕಾರ್ಯಕರ್ತನಾಗಿ ನಮ್ಮ ಜವಾಬ್ದಾರಿ ನಿಭಾಯಿಸುತ್ತೇವೆ" ಎಂದು ಹೇಳಿದರು.

ಇದನ್ನೂ ಓದಿ:ಲೋಕಸಭಾ ಚುನಾವಣೆಯಲ್ಲಿ ದಕ್ಷಿಣ ಕನ್ನಡದಿಂದ ನಳಿನ್‌ ಕುಮಾರ್​ಗೆ ಬಿಜೆಪಿ ಟಿಕೆಟ್: ವಿಜಯೇಂದ್ರ ಸುಳಿವು

Last Updated : Feb 29, 2024, 11:03 PM IST

ABOUT THE AUTHOR

...view details