ಬೆಳ್ತಂಗಡಿ(ದಕ್ಷಿಣ ಕನ್ನಡ): ಬೆಳಾಲು ನಿವಾಸಿ ನಿವೃತ್ತ ಶಿಕ್ಷಕ ಎಸ್ ಪಿ ಬಾಲಕೃಷ್ಣ ಭಟ್ (83) ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಕಾಸರಗೋಡು ಜಿಲ್ಲೆಯ ಮುಳ್ಳೇರಿಯಾ ನಿವಾಸಿ, ವೃತ್ರಿಯಲ್ಲಿ ಜ್ಯೋತಿಷಿಯಾಗಿರುವ ರಾಘವೇಂದ್ರ ಕೆದಿಲಾಯ (53) ಹಾಗೂ ಆತನ ಪುತ್ರ ಮುರಳೀಕೃಷ್ಣ (20) ಬಂಧಿತ ಆರೋಪಿಗಳು.
ಆಸ್ತಿ ವಿಚಾರಕ್ಕೆ ಸಂಬಂಧಿಸಿದಂತೆ ಈ ಕೊಲೆ ನಡೆದಿದ್ದು, ಮೃತ ಬಾಲಕೃಷ್ಣ ಭಟ್ ಅವರ ಮಗಳ ಗಂಡ ಹಾಗೂ ಮೊಮ್ಮಗ (ಮಗಳ ಮಗ) ಸೇರಿ ಹತ್ಯೆ ಮಾಡಿರುವುದು ಪೊಲೀಸ್ ತನಿಖೆಯಿಂದ ತಿಳಿದುಬಂದಿದೆ. ಧರ್ಮಸ್ಥಳ ಪೊಲೀಸರು ಸಿ.ಸಿ ಕ್ಯಾಮರಾಗಳು, ಮೊಬೈಲ್ ಲೊಕೇಶನ್ ಸೇರಿದಂತೆ ವಿವಿಧ ಆಯಾಮಗಳಲ್ಲಿ ತನಿಖೆ ನಡೆಸಿ ಆರೋಪಿಗಳನ್ನು ಮೂರು ದಿನಗಳಲ್ಲಿ ಪತ್ತೆಹಚ್ಚಿದ್ದಾರೆ. ಇದೀಗ ಇಬ್ಬರು ಆರೋಪಿಗಳನ್ನು ನ್ಯಾಯಾಧೀಶರ ಮುಂದೆ ಹಾಜರುಪಡಿಸಲಾಗಿದೆ.
ಘಟನೆಯ ಹಿನ್ನೆಲೆ:ಬೆಳಾಲುನಲ್ಲಿ ಆ.20ರಂದು ಮಧ್ಯಾಹ್ನ ಸುಮಾರಿಗೆ ನಿವೃತ್ತ ಶಿಕ್ಷಕ ಎಸ್.ಪಿ ಬಾಲಕೃಷ್ಣ ಬಡೆಕ್ಕಿಲ್ಲಾಯ ಅವರನ್ನು ಅವರ ಮನೆಯ ಅಂಗಳದಲ್ಲಿ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಲಾಗಿತ್ತು. ಹಿರಿಯ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು. ಕೊಲೆ ನಡೆದ ರೀತಿ ಹಾಗೂ ಮನೆಯಲ್ಲಿ ಯಾವುದೇ ಕಳ್ಳತನ ನಡೆಯದಿರುವುದನ್ನು ಗಮನಿಸಿದ ಪೊಲೀಸರು ಇದು ಪರಿಚಿತರಿಂದಲೇ ನಡೆದ ಕೃತ್ಯ ಎಂದು ಖಚಿತಪಡಿಸಿಕೊಂಡರು. ಅದಕ್ಕೆ ಪೂರಕವಾಗಿ ಊಟ ಮಾಡಿ ಎಸೆದಿದ್ದ ಎರಡು ಎಲೆಗಳು ಅಲ್ಲಿ ಕಂಡು ಬಂದಿದ್ದವು. ಈ ಹಿನ್ನೆಲೆಯಲ್ಲಿ ಬಾಲಕೃಷ್ಣ ಬಡೆಕ್ಕಿಲ್ಲಾಯ ಅವರ ಸಂಬಂಧಿಕರ ವಿಚಾರಣೆ ನಡೆಸಿದಾಗ ಕೊಲೆ ಪ್ರಕರಣದ ಹಿನ್ನೆಲೆ ಬಹಿರಂಗಗೊಂಡಿದೆ.