ಗಂಗಾವತಿ (ಕೊಪ್ಪಳ) :ಸಾರ್ವಜನಿಕ ಸ್ಥಳದಲ್ಲಿ ಹಾಗೂ ರೈತರ ಖಾಸಗಿ ಹೊಲ ಗದ್ದೆಗಳಲ್ಲಿರುವ ಐತಿಹಾಸಿಕ ಪುಷ್ಕರಣಿಗಳನ್ನು, ರಾಜ್ಯ ಪುರಾತತ್ವ, ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆಯ ಅಧಿಕಾರಿಗಳು ಬುಧವಾರ ಕನಕಗಿರಿ ತಾಲೂಕಿನಲ್ಲಿ ಸಂಚರಿಸಿ ವೀಕ್ಷಣೆ ಮಾಡಿದರು.
ಹಂಪಿ ವಲಯದ ಉಪನಿರ್ದೇಶಕ ಡಾ. ಆರ್ ಶೇಜೇಶ್ವರ ನೇತೃತ್ವದಲ್ಲಿನ ಅಧಿಕಾರಿಗಳ ತಂಡ, ಕನಕಗಿರಿ ತಾಲೂಕಿನ ವಿವಿಧ ಗ್ರಾಮಗಳಲ್ಲಿ ಇರುವ ಐತಿಹಾಸಿಕ ಸ್ಮಾರಕಗಳ ಸ್ಥಳಕ್ಕೆ ಭೇಟಿ ನೀಡಿ ವೀಕ್ಷಣೆ ಮಾಡಿದರು. ಬಳಿಕ ಚಿತ್ರೀಕರಣದ ಮೂಲಕ ದಾಖಲೆ ಸಂಗ್ರಹಿಸಿಕೊಂಡರು.
ಮೊದಲಿಗೆ ಕನಕಗಿರಿ ತಾಲೂಕಿನ ಸೋಮಸಾಗರ ಗ್ರಾಮದ ರೈತರ ಜಮೀನಿನಲ್ಲಿ ಇರುವ ಪುಷ್ಕರಣಿಗೆ ಭೇಟಿ ನೀಡಿ ಅಧ್ಯಯನ ನಡೆಸಿದರು. ಈ ವೇಳೆ, ಪುಷ್ಕರಣಿ ಸುತ್ತಲೂ ಭೇಟಿ ನೀಡಿ, ಅಲ್ಲಿರುವ ಕೆತ್ತನೆಯ ಚಿತ್ರಗಳನ್ನು ಸೆರೆ ಹಿಡಿದರು. ನಂತರ ರೈತರೊಂದಿಗೆ ಪುಷ್ಕರಣಿ ಮಾಹಿತಿ ಪಡೆದರು. ನಂತರ ಬಸರಿಹಾಳ ಗ್ರಾಮದ ರೈತರ ಜಮೀನಿನಲ್ಲಿ ಪುಷ್ಕರಣಿ ಹಾಗೂ ಹುಲಿಹೈದರ್ ಗ್ರಾಮದಲ್ಲಿ ವಿವಿಧ ಪುಷ್ಕರಣಿಗಳಿಗೆ ಭೇಟಿ ನೀಡಿ ಮಾಹಿತಿಯನ್ನು ಸಂಗ್ರಹಿಸಿದರು.
ಬಳಿಕ ಈ ಬಗ್ಗೆ ಕನಕಗಿರಿ ತಹಶೀಲ್ದಾರ್ ವಿಶ್ವನಾಥ ಮುರುಡಿ ಅವರೊಂದಿಗೆ ಮಾತನಾಡಿದ ಅಧಿಕಾರಿಗಳ ತಂಡ, ಎಲ್ಲ ಪುಷ್ಕರಣಿಗಳ ಮಾಹಿತಿಯನ್ನು ಕಲೆಹಾಕಿ ಸರ್ಕಾರದಿಂದ ಅದಿಸೂಚನೆ ಮಾಡಿಸಿ ಸಂರಕ್ಷಿಸಲಾಗುವುದು ಎಂದು ತಿಳಿಸಿದರು.
ಇದನ್ನೂ ಓದಿ :ಶಿವಮೊಗ್ಗದಲ್ಲಿ ಸಿಡಿತಲೆ ಬಲಿದಾನದ ವೀರಗಲ್ಲುಗಳು ಪತ್ತೆ.. ಹೊಯ್ಸಳರ ಕಾಲದ ಸಂಪ್ರದಾಯ ಅನಾವರಣ?