ಬೆಂಗಳೂರು: ಮುಖ್ಯಮಂತ್ರಿಗಳ ಅಧಿಕೃತ ನಿವಾಸ ಕಾವೇರಿಯಲ್ಲಿ ಇಂದು ಅಂಗಾಂಗ ದಾನಿಗಳ ಕುಟುಂಬದವರಿಗೆ ಸಿಎಂ ಸಿದ್ದರಾಮಯ್ಯ ಪ್ರಶಂಸನಾ ಪತ್ರಗಳನ್ನು ನೀಡಿ, ಸಂತೈಸಿ ಧೈರ್ಯ ತುಂಬಿದರು. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಕಾರ್ಯಕ್ರಮ ಆಯೋಜಿಸಿತ್ತು.
ಈ ಸಂದರ್ಭದಲ್ಲಿ ಮಾತನಾಡಿದ ಸಿಎಂ, "ಒಬ್ಬರ ಜೀವ ಹೋದ ಸಂದರ್ಭದಲ್ಲಿ ಇನ್ನೊಬ್ಬರ ಜೀವ ಉಳಿಸುವ ಬಗ್ಗೆ ಯೋಚಿಸುವುದು ಸಾಮಾನ್ಯ ಸಂಗತಿಯಲ್ಲ. ಅಂಗಾಂಗ ದಾನ ಹೆಚ್ಚಾಗಬೇಕು. ಈ ನಿಟ್ಟಿನಲ್ಲಿ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೆಚ್ಚಿನ ಒತ್ತು ನೀಡಿದ್ದಾರೆ" ಎಂದು ತಿಳಿಸಿದರು.
"ದೇಶದಲ್ಲಿಯೇ ಇಂದು ಕರ್ನಾಟಕ ಅಂಗಾಂಗ ದಾನದಲ್ಲಿ ಎರಡನೇ ಸ್ಥಾನದಲ್ಲಿದೆ. ದಾನಿಗಳ ಕುಟುಂಬಕ್ಕೆ ಯಾವುದೇ ತೊಂದರೆಗಳಾದಂತೆ ಸರ್ಕಾರ ಕೂಡ ನೋಡಿಕೊಳ್ಳಲಿದೆ. ಅಂಗಾಂಗ ದಾನಿಗಳ ಪರ ಸರ್ಕಾರ ನಿಲ್ಲಲಿದೆ" ಎಂದು ಹೇಳಿದರು.
ಅಪಘಾತಕ್ಕೀಡಾದ ಶರವಣ ಅವರ ಪತ್ನಿ ಪ್ರಶಂಸನಾ ಪತ್ರ ಸ್ವೀಕರಿಸುವಾಗ ಕಣ್ಣೀರಿಟ್ಟರು. ಇದೇ ವೇಳೆ, ಕೊಲೆಗೀಡಾದ ರಾಮನಗರದ ಕೆ.ಜಿ.ನವೀನ್ ಕುಟುಂಬದವರಿಗೆ ನ್ಯಾಯ ಒದಗಿಸುವುದಾಗಿ ಸಿಎಂ ಭರವಸೆ ನೀಡಿದರು.
"ನೀವು ಕೈಗೊಂಡ ನಿರ್ಧಾರ ಸುಲಭವಲ್ಲ. ಆದರೆ ಇತರರ ಜೀವ ಉಳಿಸುವ ಕೆಲಸ ನೀವು ಮಾಡಿದ್ದೀರಿ" ಎಂದು ಸಿಎಂ ಮೆಚ್ಚುಗೆಯ ನುಡಿಗಳನ್ನಾಡಿದರು. "ನಿಮಗೆ ಯಾವುದೇ ಸಂಕಷ್ಟ ಎದುರಾದರೂ ನಿಮ್ಮೊಂದಿಗೆ ನಾವಿದ್ದೇವೆ" ಎಂದು ಧೈರ್ಯ ತುಂಬಿದರು. ತಮ್ಮ ಹಿಂದಿನ ಅವಧಿಯಲ್ಲಿ ಅಂಗಾಂಗ ದಾನಕ್ಕೆ ಸೊಸೈಟಿ ಸ್ಥಾಪಿಸಿದ್ದನ್ನು ಸ್ಮರಿಸಿದ ಮುಖ್ಯಮಂತ್ರಿ, ಇನ್ನಷ್ಟು ಜನರು ಅಂಗಾಂಗ ದಾನಕ್ಕೆ ಮುಂದಾಗಬೇಕೆಂದು ಕರೆ ಕೊಟ್ಟರು.