ಬೆಳಗಾವಿ: ರಸ್ತೆ ಅಪಘಾತ ಇಲ್ಲವೇ ಗ್ಯಾಂಗ್ರೀನ್ ಸೇರಿ ಮತ್ತಿತ್ತರ ರೋಗಗಳಿಂದ ಕಾಲು ಕಳೆದುಕೊಂಡು, ಇನ್ನೇನು ನಮಗೆ ನಡೆಯೋಕೆ ಆಗೋದಿಲ್ಲ ಎಂದು ದುಃಖಿಸುತ್ತಿದ್ದಿರಾ..? ಹಾಗಾದರೆ, ಚಿಂತೆ ಬಿಡಿ ಜೈಪುರದ ಕೃತಕ ಕಾಲು ಎಲ್ಲರಂತೆ ನೀವು ಸ್ವತಂತ್ರವಾಗಿ ನಡೆದಾಡುವಂತೆ ಮಾಡುತ್ತದೆ. ಅದೂ ಸಂಪೂರ್ಣ ಉಚಿತವಾಗಿ.
ಹೌದು, ಬೆಳಗಾವಿಯ ಲಯನ್ಸ್ ಕ್ಲಬ್ ಹಾಗೂ ಹುಬ್ಬಳ್ಳಿಯ ಮಹಾವೀರ ಲಿಂಬ್ ಸೆಂಟರ್ ಸಹಯೋಗದಲ್ಲಿ ಉಚಿತ ಕೃತಕ ಕಾಲು ಜೋಡಣೆಗೆ ಅರ್ಜಿ ಆಹ್ವಾನಿಸಲಾಗಿದೆ. ಇದು ಬೆಳಗಾವಿ ಜನತೆಗೆ ಒಂದು ಸುವರ್ಣಾವಕಾಶ. ಅರ್ಜಿ ಸಲ್ಲಿಸುವವರು ಶಿಬಿರದ ಚೇರ್ಮನ್ ರವೀಂದ್ರ ಕಾಕತಿ ಅವರ ಮೊ.ನಂ. 9964247171 ಸಂಪರ್ಕಿಸಿ, ವಾಟ್ಸಪ್ ಮೂಲಕ ಅರ್ಜಿ ನಮೂನೆ ಪಡೆದುಕೊಳ್ಳಬೇಕು. ಭರ್ತಿ ಮಾಡಿದ ಅರ್ಜಿಯನ್ನು ಫೆ.25ರೊಳಗೆ ಆಧಾರ್ ಕಾರ್ಡ್ ಪ್ರತಿಯೊಂದಿಗೆ ಅವರಿಗೆ ವಾಟ್ಸ್ಆ್ಯಪ್ ಮಾಡುವಂತೆ ತಿಳಿಸಲಾಗಿದೆ. 3-70 ವರ್ಷದೊಳಗಿನ ದಿವ್ಯಾಂಗರು ಅರ್ಜಿ ಸಲ್ಲಿಸಬಹುದು.
ಬೆಳಗಾವಿ: ಉಚಿತ ಕೃತಕ ಕಾಲು ಜೋಡಣೆಗೆ ಅರ್ಜಿ ಆಹ್ವಾನ: ಫೆ.25 ಕೊನೆಯ ದಿನ (ETV Bharat) 55 ಸಾವಿರ ಜನರಿಗೆ ಕೃತಕ ಕಾಲು ಜೋಡಣೆ: ಈಟಿವಿ ಭಾರತ ಜೊತೆಗೆ ಮಾತನಾಡಿದ ರವೀಂದ್ರ ಕಾಕತಿ, "ಈ ಶಿಬಿರವು ಬೆಳಗಾವಿಯಲ್ಲೇ ನಡೆಯುತ್ತದೆ. ಮೊದಲಿಗೆ ಫಲಾನುಭವಿಗಳನ್ನು ಕರೆಸಿ ಅವರ ಕಾಲಿನ ಅಳತೆ ತೆಗೆದುಕೊಳ್ಳುತ್ತೇವೆ. ಕಾಲು ತಯಾರಾದ ಬಳಿಕ ಮತ್ತೊಮ್ಮೆ ಅವರನ್ನು ಕರೆಸಿ ಕಾಲು ಅಳವಡಿಸಲಾಗುತ್ತದೆ. ಒಂದು ಕಾಲಿಗೆ ಕನಿಷ್ಠ 2,500 ರೂ. ಖರ್ಚು ತಗಲುತ್ತದೆ . ಆ ಹಣವನ್ನು ದಾನಿಗಳ ಸಹಾಯದಿಂದ ಲೈನ್ಸ್ ಕ್ಲಬ್ ಹುಬ್ಬಳ್ಳಿಯ ಮಹಾವೀರ ಲಿಂಬ್ ಸೆಂಟರ್ಗೆ ಭರಿಸುತ್ತದೆ. ಈಗಾಗಲೇ ಇವರು ಸುಮಾರು 55 ಸಾವಿರ ಜನರಿಗೆ ಕೃತಕ ಕಾಲು ಜೋಡಿಸಿದ್ದಾರೆ. 350 ಶಿಬಿರಗಳನ್ನು ನಡೆಸಿದ್ದಾರೆ. ಅವರ ಸೇವೆಯನ್ನು ಗುರುತಿಸಿ ಕರ್ನಾಟಕ ಸರ್ಕಾರ 'ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ' ನೀಡಿ ಗೌರವಿಸಿದೆ" ಎಂದು ತಿಳಿಸಿದರು.
ಬೆಳಗಾವಿ: ಉಚಿತ ಕೃತಕ ಕಾಲು ಜೋಡಣೆಗೆ ಅರ್ಜಿ ಆಹ್ವಾನ: ಫೆ.25 ಕೊನೆಯ ದಿನ (ETV Bharat) 1 ಕಾಲು 350-500 ಗ್ರಾಂ ತೂಕ:"ಗ್ಯಾಂಗ್ರೀನ್, ರಸ್ತೆ ಅಪಘಾತ ಸೇರಿ ಮತ್ತಿತರ ಸಂದರ್ಭದಲ್ಲಿ ಕಾಲು ಕಳೆದುಕೊಂಡಿರುತ್ತಾರೆ. ಆ ಸಂದರ್ಭದಲ್ಲಿ ಗಾಯ ಸಂಪೂರ್ಣವಾಗಿ ಒಣಗಿದ ಬಳಿಕ ಕೃತಕ ಕಾಲು ಜೋಡಿಸಲು ಸಾಧ್ಯವಾಗುತ್ತದೆ. ದೇಶಾದ್ಯಂತ ಪ್ರಸಿದ್ಧಿ ಪಡೆದಿರುವ ಜೈಪುರ ಕಾಲು ಹಗುರವಾಗಿರುತ್ತದೆ. 1 ಕಾಲು 350-500 ಗ್ರಾಂ ವರೆಗೆ ತೂಕ ಇರುತ್ತದೆ. ಹಗುರವಾದ ಪ್ಲಾಸ್ಟಿಕ್, ಹಾರ್ಡ್ ಡೆನ್ಸಿಟಿ ಪ್ಲಾಸ್ಟಿಕ್ ಪೈಪ್, ನಟ್-ಬೋಲ್ಟ್, ಪ್ಲಾಸ್ಟೋಪ್ಯಾರೀಸ್, ಸಾಕ್ಸ್ ಒಳಗೊಂಡಿರುತ್ತದೆ" ಎಂದು ರವೀಂದ್ರ ಕಾಕತಿ ಮಾಹಿತಿ ನೀಡಿದ್ದಾರೆ.
ಸಂಪೂರ್ಣ ಉಚಿತ :ಲಯನ್ಸ್ ಕ್ಲಬ್ ಸಂಪರ್ಕ ಅಧಿಕಾರಿ ಪ್ರಭಾಕರ್ ಶಹಾಪುರಕರ್ ಮಾತನಾಡಿ, "ಯಾವುದೋ ಕಾರಣದಿಂದ ಕಾಲು ಕಳೆದುಕೊಂಡಿರುವ ವ್ಯಕ್ತಿಗಳು ಕೃತಕ ಕಾಲು ಜೋಡಣೆಗೆ ಅರ್ಜಿ ಸಲ್ಲಿಸಬಹುದು. ಇದು ಸಂಪೂರ್ಣ ಉಚಿತವಾಗಿರುತ್ತದೆ. ಹಿಂದೆ 2023ರಲ್ಲೂ ಶಿಬಿರ್ ಆಯೋಜಿಸಿದ್ದೆವು. ಆ ವೇಳೆ 73 ಜನರಿಗೆ ಕೃತಕ ಕಾಲು ಜೋಡಿಸಲಾಗಿದೆ. ನಾಲ್ಕೈದು ವರ್ಷಗಳ ಬಳಿಕ ಈ ಕಾಲನ್ನು ಬದಲಿಸಿಕೊಳ್ಳಬೇಕಾಗುತ್ತದೆ. ಅಂತವರಿಗೂ ನಾವು ಕಾಲು ಜೋಡಿಸುತ್ತೇವೆ. ಅವಶ್ಯಕತೆ ಇರುವವರು ಕೂಡಲೇ ಅರ್ಜಿ ಸಲ್ಲಿಸುವಂತೆ" ಕೋರಿದರು.
"ಕೃತಕ ಕಾಲು ಅಳವಡಿಸಿಕೊಂಡವರು ಸ್ವತಂತ್ರವಾಗಿ ಓಡಾಡಬಹುದು. ಕೆಲಸಕ್ಕೂ ಹೋಗಬಹುದು. ಆದರೆ, ಕೃತಕ ಕಾಲು ಜೋಡಣೆಗೆ ಸಾವಿರಾರು ರೂ. ಖರ್ಚಾಗುತ್ತದೆ. ಹಾಗಾಗಿ, ಇದು ಸಂಪೂರ್ಣ ಉಚಿತ ಶಿಬಿರವಾಗಿದ್ದು, ಬಡವರು ಮತ್ತು ಮಧ್ಯಮವರ್ಗದ ಜನರು ಇದರ ಸದುಪಯೋಗ ಪಡೆಯುವಂತೆ" ಆಯೋಜಕರು ಮನವಿ ಮಾಡಿಕೊಂಡಿದ್ದಾರೆ.
ಇದನ್ನೂ ಓದಿ:ವಿಶೇಷಚೇತನ ಮಗುವಿನ ಬಾಳಿಗೆ ಬೆಳಕಾದ ಇಟಲಿ ದಂಪತಿ: ಬೆಳಗಾವಿಯಲ್ಲಿ ಅಪರೂಪದ ದತ್ತು ಪ್ರಕ್ರಿಯೆ