ಧಾರವಾಡ:ಸಂವಿಧಾನ ಬದಲಿಸುವ ಬಗ್ಗೆ ಅನಂತ್ ಕುಮಾರ್ ಹೇಳಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಸ್ವಪಕ್ಷೀಯರಿಂದಲೇ ಖಂಡನೆ ವ್ಯಕ್ತವಾಗಿದೆ. ಅವರ ಹೇಳಿಕೆಯನ್ನು ವಿಧಾನಸಭೆ ವಿಪಕ್ಷ ಉಪನಾಯಕ ಅರವಿಂದ ಬೆಲ್ಲದ್ ಖಂಡಿಸಿದ್ದಾರೆ.
ಧಾರವಾಡದಲ್ಲಿ ಮಾತನಾಡಿದ ಅವರು, "ಅನಂತ್ ಕುಮಾರ್ ಹೆಗಡೆಯವರು ಜನರ ಸಮಸ್ಯೆ, ತೊಂದರೆ ಬಗ್ಗೆ ಮಾತನಾಡಬೇಕು. ಅದನ್ನು ಬಿಟ್ಟು ಸಂಬಂಧ-ಸೂತ್ರವಿಲ್ಲದ್ದು ಮಾತನಾಡುತ್ತಾರೆ. ಇದರಿಂದ ಜನರ ಭಾವನೆಗೆ ಬಹಳ ಧಕ್ಕೆಯಾಗುತ್ತದೆ. ಅವರು ಸೆಕ್ಯೂಲರ್ ಪದ ಸಂವಿಧಾನದಿಂದ ತೆಗೆಯಬೇಕು ಎಂದಿದ್ದಾರೆ. ಅದು ಅನವಶ್ಯಕವಾಗಿದೆ. ಈ ಸಂದರ್ಭದಲ್ಲಿ ಮಾತನಾಡುವಂತಹುದಲ್ಲ. ಅದರ ಬಗ್ಗೆ ಮುಂದೆ ಎಲ್ಲರೂ ಕೂಡಿ ವಿಚಾರ ಮಾಡಬಹುದು. ಈ ರೀತಿ ಅನಾವಶ್ಯಕ ಹೇಳಿಕೆ ಕೊಡಬಾರದು. ಅವರು ಕ್ಷಮೆ ಕೇಳಬೇಕು. ಈ ರೀತಿ ಅವರು ಹೇಳಿದ್ದು ನಮಗೆ ಧಕ್ಕೆಯಾಗಿದೆ" ಎಂದರು.
ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆಗೆ ಗೋ ಬ್ಯಾಕ್ ಘೋಷಣೆ ವಿಚಾರದ ಕುರಿತು ಮಾತನಾಡಿ, "ಟಿಕೆಟ್ ಹಂಚಿಕೆ ಬಗ್ಗೆ ವರಿಷ್ಠರು ತಿರ್ಮಾನ ಮಾಡುತ್ತಾರೆ. ಯಾವ ಅಭ್ಯರ್ಥಿ ಸೂಕ್ತ ಹಾಗೂ ಯಾರಿಲ್ಲ ಎಂದು ವರಿಷ್ಠರು ನಿರ್ಧಾರ ಮಾಡುತ್ತಾರೆ. ಹಿರಿಯರಿಗೆ, ಪಕ್ಷದಲ್ಲಿ ದುಡಿದವರಿಗೆ, ಜನರ ಸರ್ವೇ ಕೂಡಾ ಮಾಡಲಾಗಿದೆ, ಆ ವರದಿ ಮೇಲೆ ಪಕ್ಷ ತೀರ್ಮಾನ ಮಾಡುತ್ತದೆ. ನಾನು ದೆಹಲಿಗೆ ಇದೇ ಚರ್ಚೆಗಾಗಿ ಹೋಗಿದ್ದೆ" ಎಂದರು.
ಪ್ರತಾಪ್ ಸಿಂಹ ಟಿಕೆಟ್ ವಿಚಾರದ ಕುರಿತು ಪ್ರತಿಕ್ರಿಯೆ ನೀಡಲು ಬೆಲ್ಲದ ನಿರಾಕರಿಸಿದರು.
ಸಂತೋಷ್ ಲಾಡ್ ಪ್ರತಿಕ್ರಿಯೆ: ಸಂಸದ ಅನಂತ್ ಕುಮಾರ್ ಹೆಗಡೆಯ ಸಂವಿಧಾನ ಬದಲಾವಣೆ ಹೇಳಿಕೆಗೆ ಸಚಿವ ಸಂತೋಷ ಲಾಡ್ ತಿರುಗೇಟು ನೀಡಿದ್ದಾರೆ. "ಬಿಜೆಪಿಯವರು ಪ್ರಣಾಳಿಕೆಯೊಳಗೆ ಸಂವಿಧಾನ ಬದಲಾವಣೆ ಮಾಡುತ್ತೇವೆ ಎಂದು ಹೇಳಲಿ ನೋಡೋಣ" ಎಂದು ಸವಾಲ್ ಹಾಕಿದ್ದಾರೆ.
ಧಾರವಾಡದಲ್ಲಿ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ಅವರು, "ಯಾತಕ್ಕಾಗಿ ಬದಲಾವಣೆ ಮಾಡುತ್ತಾರೆ ಎಂದು ಸ್ಪಷ್ಟವಾಗಿ ಹೇಳಲಿ. ನಾವು ಗೆದ್ದರೆ ಸಂವಿಧಾನ ಬದಲಾವಣೆ ಮಾಡುತ್ತೇವೆ ಎಂದು ಬಹಿರಂಗವಾಗಿ ಹೇಳಲಿ. ಒಬ್ಬೊಬ್ಬರ ಕಡೆ ಈ ರೀತಿಯಾಗಿ ಹೇಳಿಸುತ್ತಾರೆ. ಈ ಬಗ್ಗೆ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅವರಿಗೆ ಪ್ರಶ್ನೆ ಕೇಳಬೇಕು. ಶೋಷಿತ ವರ್ಗದ ಜನರ ಹಿಂದೆ ನಾವಿದ್ದೇವೆ ಎಂದು ಹೇಳಿದ್ದರು. ಯಾವುದೇ ಕಾರಣಕ್ಕೂ ಸಂವಿಧಾನ ಬದಲಾವಣೆ ಮಾಡಲಿಕ್ಕೆ ನಾವು ಬಿಡಲ್ಲ. ದೇಶದ ಜನರು ಇದ್ದಾರೆ. ಯಾರು ಸಂವಿಧಾನ ಬದಲಾವಣೆ ಮಾಡುತ್ತೇವೆ ಅಂತಾರೋ ಅವರಿಗೆ ಪಾಠ ಕಲಿಸಿ" ಎಂದು ಮನವಿ ಮಾಡಿದರು.
ಅದು ಅವರ ವೈಯಕ್ತಿಕ ಹೇಳಿಕೆ: ಬಿಜೆಪಿ ಟ್ವೀಟ್:-ಅನಂತ್ ಕುಮಾರ್ ಹೆಗಡೆ ಹೇಳಿಕೆ ವಿಚಾರಕ್ಕೆ ಬಿಜೆಪಿ ಟ್ವೀಟ್ ಕುರಿತು ಮಾತನಾಡಿ, "ಅವರ ಹೇಳಿಕೆ ವೈಯಕ್ತಿಕವಾದದ್ದು ಎಂದು ಟ್ವಿಟ್ ಮಾಡಿದ್ದಾರೆ. ಬಿಜೆಪಿಯವರ ನಾಟಕ ಇದು. ಅವರ ಮೇಲೆ ಕ್ರಮ ಕೈಗೊಳ್ಳಿ. ಇಂತಹವರನ್ನು ಇಟ್ಟುಕೊಂಡು ಟಿಕೆಟ್ ನೀಡುತ್ತೀರಾ? ಅವರನ್ನು ಪಕ್ಷದಿಂದ ಉಚ್ಚಾಟನೆ ಮಾಡಿ ನೋಡೋಣ. ಅಂತಹವರ ಜೊತೆ ವೇದಿಕೆಯನ್ನು ಹಂಚಿಕೊಳ್ಳುತ್ತೀರಿ ಎಂದರೆ ಏನಿದು? ಎಂದರು.
ಧಾರವಾಡ ಲೋಕಸಭಾ ಟಿಕೆಟ್ ವಿಚಾರ ಕುರಿತು ಮಾತನಾಡಿ, ಪಕ್ಷ ಯಾರಿಗೆ ಟಿಕೆಟ್ ಕೊಟ್ಟರೂ ಜೋಶಿ ಅವರನ್ನು ಸೋಲಿಸುತ್ತೇವೆ. ಬಿಜೆಪಿಯವರು ಈ ಬಾರಿ 400 ಸ್ಥಾನಗಳು ಗೆಲ್ಲುತ್ತೇವೆ ಅಂತಾರೆ. ಡಬ್ಬಿ ಒಡೆದ ಮೇಲೆ ಗೊತ್ತಾಗುತ್ತದೆ. ಕ್ಲೀನಾಗಿ ಚುನಾವಣೆ ಮಾಡಿದರೆ 200 ಸ್ಥಾನಗಳನ್ನೂ ಕೂಡಾ ಬಿಜೆಪಿ ಗೆಲ್ಲಲ್ಲ. ಇವಿಎಂ ಸರಿಯಾಗಿ ಇದ್ದರೆ ಚುನಾವಣೆ ಫಲಿತಾಂಶ ಗೊತ್ತಾಗುತ್ತದೆ. ಎಲೆಕ್ಟ್ರಾನಿಕ್ ಸಿಸ್ಟಂನಲ್ಲಿ ಜ್ಯೂಡಿಶಿಯರ್ ಎಂಬುದು ಮೆಂಬರ್ಶಿಪ್ ಆಗಬೇಕಿತ್ತು. ಜ್ಯೂಡಿಶಿಯರನ್ನೇ ತೆಗೆದು ಹಾಕಿದ್ದಾರೆ. ಸದ್ಯ ಸಿಲಿಂಡರ್ ಬೆಲೆ 100 ರೂ ಕಡಿಮೆ ಮಾಡಿದ್ದಾರೆ. ಅದೆಲ್ಲಾ ಚುನಾವಣೆ ಗಿಮಿಕ್" ಎಂದರು.
"ಮೋದಿ ಅವರು ಮಾಡಿರುವ ಕೆಲಸಗಳಿಂದ ಬಿಜೆಪಿಯವರಿಗೆ ಲಾಭವಿದೆ. ಬಡ ಹಿಂದೂಗೆಗಳಿಗೆ 1 ರೂಪಾಯಿಯ ಲಾಭವಿಲ್ಲ. ಸಾಹುಕಾರ ಹಿಂದೂಗಳಿಗೆ ಮಾತ್ರ ಲಾಭವಾಗಿದೆ. ದೇಶದಲ್ಲಿ ಬಡವರು ಬಡವರಾಗಿಯೇ ಇದ್ದಾರೆ. ಅನೂಕೂಲವಾಗಿರುವ ಉದಾಹರಣೆ ಕೊಡಿ. ಸಂವಿಧಾನ ಬದಲಾವಣೆ ಮಾಡುವ ಮಾತಾಡುತ್ತಾರೆ, ಹಿಂದೂ ಕೋಡಿಫಿಕೇಶನ್ ಬಿಲ್ ಬದಲಾವಣೆ ಮಾಡಲು ಹೊರಟವರು ಬಿಜೆಪಿಯವರು. ಹಿಂದೂ ಕೋಡಿಫಿಕೇಶನ್ ಬಿಲ್ ವಿರೋಧ ಮಾಡಿದವರು ಸಂಘ ಪರಿವಾರದವರೆ. ನಿಮಗೆ ಧೈರ್ಯ ಇದ್ದರೆ ಅನಂತ್ ಕುಮಾರ್ ಹೇಗಡೆ ವಿರುದ್ಧ ಕ್ರಮ ಕೈಗೊಳ್ಳಲಿ ನೋಡೋಣ. ಈ ಬಾರಿ ಧಾರವಾಡದಲ್ಲಿ ಕಾಂಗ್ರೆಸ್ ಪಕ್ಷ ಗೆದ್ದೇ ಗೆಲ್ಲುತ್ತದೆ" ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಇದನ್ನೂ ಓದಿ:ಕಾಂಗ್ರೆಸ್ನವರು ಮೂಲಭೂತವಾಗಿ ಸಂವಿಧಾನ ತಿರುಚಿದ್ದಾರೆ: ಅನಂತ್ಕುಮಾರ್ ಹೆಗಡೆ