ರಾಮನಗರ:''ಚನ್ನಪಟ್ಟಣದಲ್ಲಿ ಬಿಜೆಪಿ ಹಾಗೂ ಜೆಡಿಎಸ್ ನಾಯಕರು ಕಾಂಗ್ರೆಸ್ ಸೇರಿ ಪಕ್ಷದ ಶಾಲು ಹಾಕಿಸಿಕೊಳ್ಳಲು ಎಷ್ಟು ಉತ್ಸಾಹ, ಪ್ರೀತಿ, ಅಭಿಮಾನ ತೋರುತ್ತಿದ್ದಾರೆ ಎಂಬುದಕ್ಕೆ ಈ ವೇದಿಕೆ ಸಾಕ್ಷಿಯಾಗಿದೆ'' ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ತಿಳಿಸಿದರು.
''ಎರಡೂ ಪಕ್ಷದ ಕಾರ್ಯಕರ್ತರ ಜೊತೆಗೆ ಚರ್ಚೆ ಮಾಡದೆ, ಅವರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೇ ಯೋಗೇಶ್ವರ್ ಹಾಗೂ ಕುಮಾರಸ್ವಾಮಿ ಅವರು ನೆಂಟಸ್ಥನ ಬೆಳೆಸಿದ್ದಾರೆ. ಇದರಿಂದ ಉಭಯ ಪಕ್ಷಗಳ ಕಾರ್ಯಕರ್ತರು ವಿರೋಧ ವ್ಯಕ್ತಪಡಿಸಿದ್ದಾರೆ. ಬೆಂಗಳೂರು ಗ್ರಾಮಾಂತರ ಹಾಗೂ ರಾಮನಗರ ಜಿಲ್ಲೆ ಮಾತ್ರವಲ್ಲದೆ ಇಡೀ ರಾಜ್ಯಾದ್ಯಂತ ಈ ಮೈತ್ರಿಯಿಂದ ಬೇಸತ್ತಿರುವ ಎಲ್ಲಾ ಕಾರ್ಯಕರ್ತರು ಕಾಂಗ್ರೆಸ್ ಪಕ್ಷಕ್ಕೆ ಬರಲು ನಾನು ಮುಕ್ತ ಆಹ್ವಾನ ನೀಡುತ್ತಿದ್ದೇನೆ'' ಎಂದರು.
''ಚನ್ನಪಟ್ಟಣದಲ್ಲಿ ಈ ಕಾರ್ಯಕ್ರಮ ಕೇವಲ ಆರಂಭ. ನೀವೆಲ್ಲರೂ ಸ್ಥಳೀಯ ಮಟ್ಟದಲ್ಲಿ ಬೂತ್ ಮಟ್ಟದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಬೇರೆ ಪಕ್ಷದವರನ್ನು ಸೇರಿಸಿಕೊಳ್ಳಬೇಕು. ಚನ್ನಪಟ್ಟಣದ ಮತದಾರರು ಯಾವುದೇ ರೀತಿಯ ತೀರ್ಮಾನ ಮಾಡಬಹುದು. ಯಾರೇ ಒಂದಾದರೂ ಅವರನ್ನು ಧಿಕ್ಕರಿಸಿ ಮತದಾನ ಮಾಡಲು ಆ ಕ್ಷೇತ್ರದ ಜನ ಸಿದ್ಧರಿದ್ದಾರೆ. ಈ ಹಿಂದೆ ಸುರೇಶ್ ಅವರು ಮೊದಲ ಬಾರಿಗೆ ಸಂಸತ್ ಚುನಾವಣೆಗೆ ಸ್ಪರ್ಧಿಸಿದಾಗ ಬಿಜೆಪಿ ಹಾಗೂ ಜೆಡಿಎಸ್ ಒಂದಾಗಿ ಅನಿತಾ ಕುಮಾರಸ್ವಾಮಿ ಅವರನ್ನು ಕಣಕ್ಕಿಳಿಸಿತ್ತು. ಆಗಲೂ ಈ ಜನ ಅವರ ಮೈತ್ರಿ ಧಿಕ್ಕರಿಸಿ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಿ ಸುರೇಶ್ ಅವರನ್ನು 1.31 ಲಕ್ಷ ಮತಗಳ ಅಂತರದಲ್ಲಿ ಗೆಲ್ಲಿಸಿದ್ದರು'' ಎಂದು ತಿಳಿಸಿದರು.
ಬಿಜೆಪಿ ನಾಯಕರ ವಿರುದ್ಧ ಗರಂ:''ನಮ್ಮ ಜಿಲ್ಲೆಯ ಜನ ಬಹಳ ವಿದ್ಯಾವಂತ, ಬುದ್ಧಿವಂತ ಹಾಗೂ ಪ್ರಜ್ಞಾವಂತರಿದ್ದಾರೆ. ನೀವೆಲ್ಲರೂ ಅವರ ಮನೆ ಬಾಗಿಲಿಗೆ ಹೋಗಿ ಮತ ಕೇಳಬೇಕು. ನಾನು ಇಲ್ಲಿಗೆ ಬರುವ ಮುನ್ನ ಬಿಡದಿಯಲ್ಲಿ ಹೋಬಳಿ ಮಟ್ಟದ ಗೃಹಲಕ್ಷ್ಮಿ ಯೋಜನೆ ಫಲಾನುಭವಿಗಳ ಸಮಾವೇಶದಲ್ಲಿ ಭಾಗವಹಿಸಿದ್ದೆ. ಈ ಕಾರ್ಯಕ್ರಮದಲ್ಲಿ 30 ಸಾವಿರಕ್ಕೂ ಹೆಚ್ಚು ಜನ ಸೇರಿದ್ದರು. ಬಿಜೆಪಿ ನಾಯಕರು ನಮ್ಮ ಗ್ಯಾರಂಟಿ ಯೋಜನೆಗಳನ್ನು 420 ಗ್ಯಾರಂಟಿ, ಡುಪ್ಲಿಕೇಟ್ ಗ್ಯಾರಂಟಿ ಎಂದು ಟೀಕೆ ಮಾಡುತ್ತಿದ್ದಾರೆ. ಚನ್ನಪಟ್ಟಣದಲ್ಲಿ ಶೇ.92 ರಷ್ಟು ಜನ ನಮ್ಮ ಗ್ಯಾರಂಟಿ ಯೋಜನೆಗಳ ಫಲಾನುಭವಿಗಳಾಗಿದ್ದಾರೆ'' ಎಂದು ವಿವರಿಸಿದರು.
''ನಾವು ಜನರಿಗೆ ಕರೆ ಮಾಡಿದಾಗ ಜನರು, ನಿಮ್ಮ ಯೋಜನೆಗಳಿಂದ ನಮಗೆ ಪ್ರತಿ ತಿಂಗಳು ಸುಮಾರು 5 ಸಾವಿರದಷ್ಟು ಸಹಾಯವಾಗುತ್ತದೆ. ಹೀಗಾಗಿ ನಾವು ನಿಮ್ಮ ಋಣ ತೀರಿಸುತ್ತೇವೆ ಎಂದು ಹೇಳುತ್ತಿದ್ದಾರೆ. ಗ್ಯಾರಂಟಿ ಯೋಜನೆಗಳನ್ನು ಟೀಕೆ ಮಾಡುವ ಯೋಗೇಶ್ವರ್ ಹಾಗೂ ಕುಮಾರಸ್ವಾಮಿ ಅವರು ತಮ್ಮ ಕ್ಷೇತ್ರದಲ್ಲಿ ಈ ಗ್ಯಾರಂಟಿ ಯೋಜನೆ ತೆಗೆದುಕೊಳ್ಳಬೇಡಿ ಎಂದು ತಮ್ಮ ಕಾರ್ಯಕರ್ತರಿಗೆ ಹೇಳಲಿ ನೋಡೋಣ. ಅವರಿಗೆ ಧೈರ್ಯ ಇದ್ದರೆ, ಅವರ ಪಕ್ಷಕ್ಕೆ ಸ್ವಾಭಿಮಾನ ಇದ್ದರೆ ಈ ರೀತಿ ಹೇಳಲಿ'' ಎಂದು ಸವಾಲು ಹಾಕಿದರು.
''ಕುಮಾರಸ್ವಾಮಿ ಹಾಗೂ ಯೋಗೇಶ್ವರ್ ಮನೆಯಲ್ಲಿ ಕೆಲಸ ಮಾಡುವ ಜನರು ನಮ್ಮ ಯೋಜನೆಯನ್ನು ಬೇಡ ಎನ್ನುವುದಿಲ್ಲ. ಇತ್ತೀಚೆಗೆ ಬೆಳಗಾವಿಯಲ್ಲಿ ಮಗನನ್ನು ಕಳೆದುಕೊಂಡ ಮಹಿಳೆಯೊಬ್ಬರು, ಕಾಂಗ್ರೆಸ್ ಪಕ್ಷದ ಗ್ಯಾರಂಟಿ ಯೋಜನೆಗಳು ನನಗೆ ಆಸರೆಯಾಗಲಿದೆ ಎಂದು ಹೇಳಿದ್ದಾರೆ. ಇದು ನಮ್ಮ ಯೋಜನೆಗಳಿಂದ ಸಮಾಜದಲ್ಲಿ ಆಗಿರುವ ಬದಲಾವಣೆ'' ಎಂದರು.
ನಾವು ಕೊಟ್ಟ ಅಕ್ಕಿಗೆ ಅರಿಶಿನ ಹಾಕಿ ಮಂತ್ರಾಕ್ಷತೆ ಹಂಚಿದ್ದಾರೆ - ಡಿಕೆಶಿ ಕಿಡಿ:''ಬಿಜೆಪಿ ಅಧಿಕಾರದಲ್ಲಿ ಇದ್ದಾಗ ಇಂತಹ ಯಾವುದಾದರೂ ಒಂದು ಕಾರ್ಯಕ್ರಮ ನೀಡಿದ್ದಾರಾ? ಬಿಜೆಪಿಯವರು ಇತ್ತೀಚೆಗೆ ಮಂತ್ರಾಕ್ಷತೆ ಹಂಚುತ್ತಿದ್ದರು. ಮಂತ್ರಾಕ್ಷತೆಯನ್ನು ದೇವಾಲಯದಲ್ಲಿ ಎಲ್ಲ ಪ್ರತಿಷ್ಠಾಪನೆ ಆದ ನಂತರ. ನೀವು ಮದುವೆಯಲ್ಲಿ ತಾಳಿ ಕಟ್ಟುವಾಗ ಮಂತ್ರಾಕ್ಷತೆ ಹಾಕುತ್ತೀರಿ ಅಲ್ಲವೇ. ಆದರೆ, ಅಯೋಧ್ಯೆಯಲ್ಲಿ ಮಂದಿರ ಉದ್ಘಾಟನೆ ಆಗುವ ಮುನ್ನ 2 ತಿಂಗಳಿಂದ ಇಲ್ಲಿ ಮಂತ್ರಾಕ್ಷತೆ ಹಂಚಿದ್ದಾರೆ. ನಾವು ಕೊಟ್ಟ ಅಕ್ಕಿಗೆ ಅರಿಶಿನ ಹಾಕಿ ಮಂತ್ರಾಕ್ಷತೆ ಹಂಚಿದ್ದಾರೆ'' ಎಂದು ಕಿಡಿಕಾರಿದರು.
''ಬಿಜೆಪಿ ಹಾಗೂ ಜೆಡಿಎಸ್ ಮೈತ್ರಿಯನ್ನು ಯಾರೂ ಒಪ್ಪಲು ಸಿದ್ಧವಿಲ್ಲ. ಇತ್ತೀಚೆಗೆ ನಡೆದ ಶಿಕ್ಷಕರ ಕ್ಷೇತ್ರದ ವಿಧಾನ ಪರಿಷತ್ ಚುನಾವಣೆಯಲ್ಲಿ ಜನ ಕಾಂಗ್ರೆಸ್ ಪಕ್ಷದ ಪುಟ್ಟಣ್ಣ ಅವರನ್ನು ಗೆಲ್ಲಿಸಿದ್ದಾರೆ. ಮುಂದಿನ ಲೋಕಸಭೆ ಚುನಾವಣೆಯಲ್ಲೂ ಕಾಂಗ್ರೆಸ್ ಪಕ್ಷಕ್ಕೆ ಮತ ಹಾಕಲು ಜನ ತೀರ್ಮಾನಿಸಿದ್ದಾರೆ. ರಾಜಕಾರಣದಲ್ಲಿ ಏನೇ ಭಿನ್ನಾಭಿಪ್ರಾಯ ಇದ್ದರೂ ಅದನ್ನು ಪಕ್ಕಕ್ಕಿಟ್ಟು, ಹಳಬರು, ಹೊಸಬರು ಎಂಬ ವ್ಯತ್ಯಾಸ ಇಲ್ಲದೆ ಒಟ್ಟಾಗಿ ಕೆಲಸ ಮಾಡಿ. ಇನ್ನು ಅನೇಕ ನಾಯಕರು ಜೆಡಿಎಸ್ನಿಂದ ಕಾಂಗ್ರೆಸ್ಗೆ ಬರಲು ಸಿದ್ಧರಿದ್ದಾರೆ. ಇಂದು ಪಕ್ಷ ಸೇರಿರುವ ಎಲ್ಲರಿಗೂ ಸ್ವಾಗತ ಕೋರುತ್ತೇನೆ. ನೀವೆಲ್ಲ ಒಟ್ಟಾಗಿ ಕೆಲಸ ಮಾಡಿ ಚನ್ನಪಟ್ಟಣ ಕ್ಷೇತ್ರವೊಂದರಲ್ಲೆ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗೆ 1 ಲಕ್ಷ ಮತ ಬರುವಂತೆ ಮಾಡಬೇಕು'' ಎಂದು ಮನವಿ ಮಾಡಿದರು.
ಇದನ್ನೂ ಓದಿ:ಅಂಬರೀಶ್ ನೆಚ್ಚಿನ ಮಂಡ್ಯದಿಂದಲೇ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತೇನೆ: ಸುಮಲತಾ