ಮಂಡ್ಯ:ದಿ.ಅಂಬರೀಶ್ ಅವರ ಆಪ್ತ ಹಾಗು ಕಾಂಗ್ರೆಸ್ ಮುಖಂಡ ಅಮರಾವತಿ ಚಂದ್ರಶೇಖರ್ ಅವರು ಕಾಂಗ್ರೆಸ್ ತೊರೆದು ಜೆಡಿಎಸ್ ಸೇರಿದ್ದಾರೆ. ಇಂದು ಮಂಡ್ಯದ ಅಮರಾವತಿ ಹೋಟೆಲ್ನಲ್ಲಿ ಪಕ್ಷ ಸೇರ್ಪಡೆ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ಈ ವೇಳೆ ಅಮರಾವತಿ ಚಂದ್ರಶೇಖರ್ ಸಹೋದರ ಅಶ್ವಥ್ ಸೇರಿದಂತೆ ಹಲವು ಕಾಂಗ್ರೆಸ್ ಮುಖಂಡರನ್ನು ಜೆಡಿಎಸ್ ಪಕ್ಷಕ್ಕೆ ಮಂಡ್ಯ ಲೋಕಸಭಾ ಕ್ಷೇತ್ರದ ಮೈತ್ರಿ ಅಭ್ಯರ್ಥಿ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಬರ ಮಾಡಿಕೊಂಡರು.
ಕಾರ್ಯಕ್ರಮದಲ್ಲಿ ಮಾತನಾಡಿದ ಕುಮಾರಸ್ವಾಮಿ, ಕಾವೇರಿ ನೀರಿನ ವಿಷಯದಲ್ಲಿ ಮೊದಲಿಂದಲೂ ನಮಗೆ ಅನ್ಯಾಯವಾಗಿದೆ. ರಾಜ್ಯದ ಸಿಎಂ ಸೇರಿದಂತೆ ಕಾಂಗ್ರೆಸ್ ನಾಯಕರು ಹೆಚ್.ಡಿ.ದೇವೇಗೌಡರ ಕೊಡುಗೆ ಏನು ಅಂತ ಪ್ರಶ್ನೆ ಮಾಡುತ್ತಿದ್ದಾರೆ. ಇಂದಿನ ಸಿಎಂ ಸಿದ್ದರಾಮಯ್ಯನವರು ದೇವೇಗೌಡರ ಬಗ್ಗೆ ಲಘುವಾಗಿ ಮಾತನಾಡುತ್ತಾರೆ ಎಂದರು.
ಈ ಜಿಲ್ಲೆಯ ಅಭಿವೃದ್ದಿಯೇ ನನ್ನ ಗುರಿ. ನಾನು ಸಿಎಂ ಆಗಿದ್ದಾಗ ಹಲವಾರು ಕೊಡುಗೆಗಳನ್ನು ನೀಡಿದ್ದೇನೆ. ಮೆಡಿಕಲ್ ಕಾಲೇಜಿಗೆ 60 ಕೋಟಿ ನೀಡಿದ್ದೇನೆ. ಹಲವಾರು ಪವರ್ ಸ್ಟೇಷನ್ ಕೊಟ್ಟಿದ್ದೇವೆ. ಬಜೆಟ್ನಲ್ಲಿ 9 ಸಾವಿರ ಕೋಟಿ ನೀಡಲು ಮುಂದಾದೆ. ಅದನ್ನೂ ಇವರು ಮಂಡ್ಯ ಬಜೆಟ್ ಅಂತ ಲೇವಡಿ ಮಾಡಿದರು.