ಬೆಂಗಳೂರು: ಸಚಿವ ಪ್ರಿಯಾಂಕ್ ಖರ್ಗೆ ಆಪ್ತ ರಾಜು ಕಪನೂರ್ಗೆ ಬಿಜೆಪಿ ನಾಯಕರ ಹತ್ಯೆಗೆ ಸುಪಾರಿ ನೀಡಿರುವ ಗಂಭೀರ ಆರೋಪ ಕೇಳಿ ಬಂದಿದ್ದು, ಪ್ರಕರಣವನ್ನು ಸಿಬಿಐಗೆ ನೀಡುವಂತೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಆಗ್ರಹಿಸಿದ್ದಾರೆ.
ಈ ಸಂಬಂಧ ಸಾಮಾಜಿಕ ಜಾಲತಾಣ ಎಕ್ಸ್ನಲ್ಲಿ ಪೋಸ್ಟ್ ಮಾಡಿರುವ ಅವರು, "ಸಚಿವ ಪ್ರಿಯಾಂಕ್ ಖರ್ಗೆ ಅವರ ಬಲಗೈ ಬಂಟ ರಾಜುವಿನ ಕಿರುಕುಳದಿಂದ ಆತ್ಮಹತ್ಯೆಗೀಡಾದ ಬೀದರ್ ನ ಗುತ್ತಿಗೆದಾರ ಸಚಿನ್ ಬರೆದಿರುವ ಡೆತ್ನೋಟ್ನಲ್ಲಿ ನಮ್ಮ ಪಕ್ಷದ ಶಾಸಕ ಬಸವರಾಜ್ ಮತ್ತಿಮಡು, ಬಿಜೆಪಿ ನಾಯಕರಾದ ಚಂದು ಪಾಟೀಲ್, ಮಣಿಕಂಠ ರಾಥೋಡ್ ಹಾಗೂ ಶ್ರೀ ಆಂದೋಲ ಸ್ವಾಮೀಜಿಯವರನ್ನು ಹತ್ಯೆ ಮಾಡಲು ಸಚಿವ ಪ್ರಿಯಾಂಕ್ ಖರ್ಗೆ ಅವರ ಆಪ್ತ ರಾಜು ಕಪನೂರ್ಗೆ ಸುಪಾರಿ ನೀಡಿರುವ ಆತಂಕಕಾರಿ ಹಾಗೂ ಗಂಭೀರ ಮಾಹಿತಿ ಬಹಿರಂಗವಾಗಿದೆ" ಎಂದಿದ್ದಾರೆ.
"ಕಾಂಗ್ರೆಸ್ ಸರ್ಕಾರ ವಿರೋಧ ಪಕ್ಷದ ಶಾಸಕರನ್ನು ಗುರಿಯಾಗಿಸಿಕೊಂಡು ಇತ್ತೀಚೆಗೆ ರಾಜ್ಯದಲ್ಲಿ ನಡೆದಿರುವ ಘಟನೆಗಳ ಹಿನ್ನೆಲೆಯಲ್ಲಿ ಈ ಪ್ರಕರಣವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯನವರ ನೇತೃತ್ವದ ಕಾಂಗ್ರೆಸ್ ಸರ್ಕಾರ ಸಿಬಿಐ ತನಿಖೆಗೆ ವಹಿಸಬೇಕು" ಎಂದು ಆಗ್ರಹಿಸಿದ್ದಾರೆ.
ಗುತ್ತಿಗೆದಾರ ಸಚಿನ್ ಆತ್ಮಹತ್ಯೆ ಪ್ರಕರಣ ಸಂಬಂಧ ಸಚಿವ ಪ್ರಿಯಾಂಕ್ ಖರ್ಗೆ ಆಪ್ತನ ಹೆಸರು ಡೆತ್ನೋಟ್ನಲ್ಲಿ ಬಹಿರಂಗವಾಗಿರುವುದನ್ನು ಗಂಭೀರವಾಗಿ ಪರಿಗಣಿಸಿರುವ ರಾಜ್ಯ ಬಿಜೆಪಿ, ಈ ಪ್ರಕರಣವನ್ನೇ ಪ್ರಬಲ ಅಸ್ತ್ರ ಮಾಡಿಕೊಂಡು ಕಾಂಗ್ರೆಸ್ ವಿರುದ್ಧ ಸಮರ ಸಾರಲು ಮುಂದಾಗಿದೆ. ಈ ನಿಟ್ಟಿನಲ್ಲಿ ಸಚಿವ ಪ್ರಿಯಾಂಕ್ ಖರ್ಗೆ ತಲೆದಂಡಕ್ಕೆ ಬಿಜೆಪಿ ಆಗ್ರಹಿಸುತ್ತಿದೆ. ಪ್ರಿಯಾಂಕ್ ಖರ್ಗೆ ಸೂಚನೆಯಂತೆ ಆಪ್ತ ರಾಜು ಕಪನೂರ ನಡೆದುಕೊಂಡಿದ್ದಾರೆ ಎಂಬುದು ಬಿಜೆಪಿ ಆರೋಪವಾಗಿದೆ.
ಕೆ.ಎಸ್ ಈಶ್ವರಪ್ಪ ಮಾದರಿಯಲ್ಲೇ ಪ್ರಿಯಾಂಕ್ ಖರ್ಗೆ ರಾಜೀನಾಮೆಗೆ ಒತ್ತಡ ಹಾಕಲು ಬಿಜೆಪಿ ತಂತ್ರ ರೂಪಿಸಲು ಮುಂದಾಗಿದೆ. ಅಂದು ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆ ವಿಚಾರದಲ್ಲಿ ವಿಪಕ್ಷದಲ್ಲಿದ್ದ ಕಾಂಗ್ರೆಸ್ ಆಗಿನ ಸಚಿವ ಕೆ.ಎಸ್. ಈಶ್ವರಪ್ಪ ರಾಜೀನಾಮೆಗೆ ಒತ್ತಡ ಹೇರಿತ್ತು. ಹೀಗಾಗಿ ಇಂದು ಬಿಜೆಪಿಯ ಸತ್ಯಶೋಧನಾ ಸಮಿತಿ, ಭಾಲ್ಕಿ ತಾಲೂಕಿನಲ್ಲಿರುವ ಮೃತ ಸಚಿನ್ ಮನೆಗೆ ಸಂಜೆ ಭೇಟಿ ನೀಡಲಿರುವ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ನೇತೃತ್ವದ ನಿಯೋಗ ಮಾಹಿತಿ ಪಡೆಯಲಿದೆ.
ಬಿಜೆಪಿ ನಿಯೋಗದಲ್ಲಿ ಛಲವಾದಿ ನಾರಾಯಣಸ್ವಾಮಿ, ಎನ್ ರವಿಕುಮಾರ್, ಬಸವರಾಜ್ ಮತ್ತಿಮಡ, ಶೈಲೆಂದ್ರ ಬೆಲ್ದಾಳೆ, ಶರಣು ಸಲಗಾರ್, ಸಿದ್ದು ಪಾಟೀಲ್ ಸೇರಿದಂತೆ ಬಿಜೆಪಿ ಮುಖಂಡರು ಇರಲಿದ್ದಾರೆ. ಭೇಟಿ ಬಳಿಕ ಪ್ರತಿಭಟನೆಯ ರೂಪುರೇಷೆಯ ಸಿದ್ಧತೆ ಮಾಡಲಿದ್ದಾರೆ.
ಇದನ್ನೂ ಓದಿ:ಬೆಳಗಾವಿ ಕಾಂಗ್ರೆಸ್ ಸಮಾವೇಶಕ್ಕೆ ವಿರೋಧ: ವಿಧಾನಸೌಧದ ಗಾಂಧಿ ಪ್ರತಿಮೆ ಮುಂದೆ ನಾಳೆ ಬಿಜೆಪಿ ಪ್ರತಿಭಟನೆ