ದಾವಣಗೆರೆ: ಸಂಸದ ಜಿ ಎಂ ಸಿದ್ದೇಶ್ವರ್ ಅವರು ಮಾಜಿ ಸಚಿವ ಎಸ್ ಎ ರವೀಂದ್ರನಾಥ್ ಅವರ ನಿವಾಸಕ್ಕೆ ಮೊದಲ ಬಾರಿಗೆ ಭೇಟಿ ನೀಡಿ ಕೆಲ ಕಾಲ ಲೋಕಸಭೆ ಚುನಾವಣೆ ಬಗ್ಗೆ ಮಾತುಕತೆ ನಡೆಸಿದರು.
ಬಿ ಎಸ್ ಯಡಿಯೂರಪ್ಪನವರ ನೇತೃತ್ವದಲ್ಲಿ ನಡೆದ ಅತೃಪ್ತರ ಸಂಧಾನ ಸಭೆ ಬಳಿಕ ದಾವಣಗೆರೆ ತಾಲೂಕು ಶಿರಮಗೊಂಡ ಹಳ್ಳಿಯಲ್ಲಿರುವ ಮಾಜಿ ಸಚಿವ ಎಸ್ ಎ ರವೀಂದ್ರನಾಥ್ ಅವರ ನಿವಾಸಕ್ಕೆ ಭೇಟಿ ನೀಡಿದ ಬಳಿಕ ಅವರು ಮಾಧ್ಯಮದವರೊಂದಿಗೆ ಮಾತನಾಡಿದರು. ನಿನ್ನೆ ಬಿಎಸ್ವೈ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಎಸ್ ಎ ರವೀಂದ್ರನಾಥ್ ಅವರ ಸಮ್ಮುಖದಲ್ಲಿ ಚುನಾವಣೆ ಮಾಡಬೇಕೆಂದು ನಿರ್ಧರಿಸಲಾಗಿದೆ. ಇಂದು ಸಂಜೆ ಚುನಾವಣೆ ಸಮಿತಿ ಸಭೆ ಇದೆ. ಚುನಾವಣೆ ತಯಾರಿ ಮಾಡಿಕೊಳ್ಳುತ್ತಿದ್ದೇವೆ ಎಂದು ಹೇಳಿದರು.
ಜಿಲ್ಲೆಯ ಎಲ್ಲ ನಾಯಕರು ಒಟ್ಟಾಗಿ ಕೆಲಸ ಮಾಡುತ್ತೇವೆ. ಕ್ಷೇತ್ರದಲ್ಲಿ ನಮ್ಮ ಮನೆಯವರು ಈಗಾಗಲೇ ಪ್ರಚಾರ ಶುರು ಮಾಡಿದ್ದಾರೆ. ಅವರು ಕೂಡ ರೈತ ಮಹಿಳೆಯಾಗಿ ಏಳು ಲೋಕಸಭಾ, ವಿಧಾನಸಭಾ ಚುನಾವಣೆಯಲ್ಲಿ ಗೆಲುವಿಗಾಗಿ ಕೆಲಸ ಮಾಡಿದ್ದಾರೆ. ಜನರ ಬೆಂಬಲವೂ ಇದ್ದು, ಮತದಾರರು ಹೆಚ್ಚು ಮತ ನೀಡಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಇನ್ನು ಎಂ ಪಿ ರೇಣುಕಾಚಾರ್ಯ ಅವರ ಮನೆಗೆ ಹೋಗಿ ಮಾತುಕತೆ ನಡೆಸುವೆ, ಎಲ್ಲವೂ ಕೆಲವೇ ದಿನಗಳಲ್ಲಿ ಸರಿಯಾಗುತ್ತೆ. ಹಿಂದಿನ ದಿನ ನಡೆದ ಸಂಧಾನ ಸಭೆಯಲ್ಲಿ ಗಲಾಟೆ ನಡೆದಿದೆ ಎಂಬ ವಿಚಾರಕ್ಕೆ ಪ್ರತಿಕ್ರಿಯಿಸಿದ ಸಿದ್ದೇಶ್ವರ್, ನನಗೆ ಸಭೆಯಲ್ಲಿ ನಡೆದಿರುವ ಗಲಾಟೆ ಬಗ್ಗೆ ಗೊತ್ತಿಲ್ಲ. ಗಲಾಟೆ ಮಾಡಿದವರ ವಿರುದ್ಧ ಕ್ರಮ ಜರುಗಿಸುವಂತೆ ಬಿ ವೈ ವಿಜಯೇಂದ್ರ ಅವರಿಗೆ ಪತ್ರ ಬರೆದಿರುವ ಬಗ್ಗೆ ನನಗೇನು ಗೊತ್ತಿಲ್ಲ. ಸಭೆಯಲ್ಲಿ ಎಲ್ಲ ನಾಯಕರು ಒಟ್ಟಾಗಿ ಪ್ರಚಾರ ಮಾಡುವ ಕುರಿತು ಚರ್ಚಿಸಿದ್ದೇವೆ ಎಂದರು.