ಕರ್ನಾಟಕ

karnataka

ETV Bharat / state

ಅಖಿಲ ಭಾರತ ಪೊಲೀಸ್ ಆರ್ಚರಿ ಚಾಂಪಿಯನ್​ಶಿಪ್​; ಈ ತಂಡಗಳಿಗೆ ಅಗ್ರಸ್ಥಾನ

ಅಖಿಲ ಭಾರತ ಪೊಲೀಸ್ ಆರ್ಚರಿ ಚಾಂಪಿಯನ್​ಶಿಪ್ 2023-24 ಇಂದು ಮುಕ್ತಾಯವಾಗಿದೆ.

ಅಖಿಲ ಭಾರತ ಪೊಲೀಸ್ ಆರ್ಚರಿ ಚಾಂಪಿಯನ್​ಶಿಪ್
ಅಖಿಲ ಭಾರತ ಪೊಲೀಸ್ ಆರ್ಚರಿ ಚಾಂಪಿಯನ್​ಶಿಪ್

By ETV Bharat Karnataka Team

Published : Feb 4, 2024, 10:15 PM IST

ಸಿಎಂ ಸಿದ್ದರಾಮಯ್ಯ

ಬೆಂಗಳೂರು : 12ನೇ ಅಖಿಲ ಭಾರತ ಪೊಲೀಸ್ ಆರ್ಚರಿ ಚಾಂಪಿಯನ್​ಶಿಪ್​ 2023-24 ಇಂದು ಮುಕ್ತಾಯಗೊಂಡಿದೆ. ಇಂಡೋ ಟಿಬೆಟಿಯನ್ ಬಾರ್ಡರ್ ಪೊಲೀಸ್, ರಾಜಸ್ಥಾನ, ಅಸ್ಸೋಂ ರೈಫಲ್ಸ್ ಹಾಗೂ ಬಿಎಸ್ಎಫ್ ತಂಡಗಳು ಪದಕ ಪಟ್ಟಿಯಲ್ಲಿ ಅಗ್ರಸ್ಥಾನ ಗಿಟ್ಟಿಸಿಕೊಂಡಿವೆ. ಕೋರಮಂಗಲದ ಕೆಎಸ್ಆರ್​ಪಿ ಮೈದಾನದಲ್ಲಿ ನಡೆದ ಐದು ದಿನಗಳ ಪಂದ್ಯಾವಳಿ ನಡೆಯಿತು.

ಅರ್ಜುನ ಪ್ರಶಸ್ತಿ ವಿಜೇತ ಹಾಗೂ ರಾಜಸ್ಥಾನ ಪೊಲೀಸ್ ಇಲಾಖೆಯ ಡಿ.ಎಸ್.ಪಿ ರಜತ್ ಚೌಹಾಣ್, 2022 ಏಷ್ಯನ್ ಗೇಮ್ಸ್ ನ ಆರ್ಚರಿ ರಿಕರ್ವ್ ವಿಭಾಗದಲ್ಲಿ ಚಿನ್ನದ ಪದಕ ವಿಜೇತ ಹಾಗೂ ಇಂಡೋ ಟಿಬೆಟಿಯನ್ ಬಾರ್ಡರ್ ಪೊಲೀಸ್​ನ ತುಷಾರ್ ಪ್ರಭಾಕರ್ ಶೆಲ್ಕೆ ಸೇರಿದಂತೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸ್ಪರ್ಧಿಸಿರುವ 12 ಜನ‌ ಆಟಗಾರರು ಟೂರ್ನಿಯಲ್ಲಿ ಭಾಗವಹಿಸಿದ್ದು ವಿಶೇಷವಾಗಿತ್ತು.

ಟೂರ್ನಿಯ ಪುರುಷರ ವಿಭಾಗದಲ್ಲಿ ರಾಜಸ್ಥಾನದ ರಜತ್ ಚೌಹಾಣ್ (5 ಚಿನ್ನದ ಪದಕ) ಹಾಗೂ ಮಹಿಳಾ ವಿಭಾಗದಲ್ಲಿ ರಾಜಸ್ಥಾನದ ಅಮನ್ ದೀಪ್ ಕೌರ್ (4 ಚಿನ್ನ,1 ಬೆಳ್ಳಿ ಹಾಗೂ 1 ಕಂಚು ಸಹಿತ 6) ಅತ್ಯುತ್ತಮ ಆರ್ಚರ್​ಗಳ ಪಟ್ಟ ಗಿಟ್ಟಿಸಿಕೊಂಡರು. 9 ಚಿನ್ನ 6 ಬೆಳ್ಳಿ 5 ಕಂಚು ಸೇರಿದಂತೆ 20 ಪದಕಗಳೊಂದಿಗೆ ಇಂಡೋ ಟಿಬೆಟಿಯನ್ ಬಾರ್ಡರ್ ಪೊಲೀಸ್ (ಐಟಿಬಿಪಿ) ತಂಡ ಅಗ್ರಸ್ಥಾನ ಸಂಪಾದಿಸಿದೆ. 8 ಚಿನ್ನದ ಪದಕ ಸಂಪಾದಿಸಿದ ರಾಜಸ್ಥಾನ ದ್ವಿತೀಯ ಹಾಗೂ 6 ಚಿನ್ನ, 1 ಬೆಳ್ಳಿ, 9 ಕಂಚು ಸಹಿತ 16 ಪದಕ ಗೆದ್ದ ಅಸ್ಸೋಂ ರೈಫಲ್ಸ್ ತೃತೀಯ ಸ್ಥಾನ ಪಡೆದುಕೊಂಡಿತು.

ಮಹಿಳೆಯರ ವಿಭಾಗದಲ್ಲಿ 7 ಚಿನ್ನ, 6 ಬೆಳ್ಳಿ, 1 ಕಂಚು ಸಹಿತ 14 ಪದಕಗಳೊಂದಿಗೆ ರಾಜಸ್ಥಾನ ಮೊದಲ ಸ್ಥಾನ ಪಡೆಯಿತು. 6 ಚಿನ್ನ, 2 ಬೆಳ್ಳಿ, 9 ಕಂಚು ಸಹಿತ 17 ಪದಕ ಪಡೆದ ಬಿಎಸ್ಎಫ್ ತಂಡ ದ್ವಿತೀಯ ಸ್ಥಾನ‌ ಹಾಗೂ 6 ಚಿನ್ನ, 1 ಕಂಚು ಸಹಿತ 7 ಪದಕ ಪಡೆದ ಅಸ್ಸೊಂ ರೈಫಲ್ಸ್ ತೃತೀಯ ಸ್ಥಾನ ಪಡೆಯಿತು.

ಪಂದ್ಯಾವಳಿಯ ಸಮಾರೋಪ ಸಮಾರಂಭದಲ್ಲಿ ಭಾಗಿಯಾದ ಮುಖ್ಯಮಂತ್ರಿ ಸಿದ್ದರಾಮಯ್ಯ ವಿಜೇತರಿಗೆ ಪದಕ ವಿತರಿಸಿ ಶುಭಕೋರಿದರು. ಬಳಿಕ ಮಾತನಾಡಿದ ಅವರು, ''ಆಲ್ ಇಂಡಿಯಾ ಪೊಲೀಸ್ ಸ್ಪೋರ್ಟ್ಸ್ ಕಂಟ್ರೋಲ್ ಬೋರ್ಡ್ ಸಹಯೋಗದೊಂದಿಗೆ ಕರ್ನಾಟಕ ಪೊಲೀಸ್ ಇಲಾಖೆಯು 12ನೇ ಅಖಿಲ ಭಾರತ ಪೊಲೀಸ್ ಆರ್ಚರಿ ಚಾಂಪಿಯನ್​ಶಿಪ್​ ಅನ್ನು ಯಶಸ್ವಿಯಾಗಿ ಆಯೋಜಿಸಿದೆ.

ವಿವಿಧ ರಾಜ್ಯಗಳ ಪೊಲೀಸ್ ಸಿಬ್ಬಂದಿ, ಸೆಂಟ್ರಲ್ ಫೋರ್ಸ್ ಸಹಿತ 24 ತಂಡಗಳು‌ ಟೂರ್ನಿಯಲ್ಲಿ ಭಾಗಿಯಾಗಿರುವುದು ಸಂತಸದ ವಿಚಾರ. ಅಖಿಲ ಭಾರತ ಪೊಲೀಸ್ ಆರ್ಚರಿ ಚಾಂಪಿಯನ್​ಶಿಪ್ 2023-24 ಗಾಗಿ ರಾಜ್ಯ ಸರ್ಕಾರ 25 ಲಕ್ಷ ರೂ. ಬಿಡುಗಡೆ ಮಾಡಿದೆ. ಕ್ರೀಡಾಪಟುಗಳು ಹೆಚ್ಚಾಗಿ ಪೊಲೀಸ್ ಇಲಾಖೆಗೆ ಸೇರಬೇಕು ಎಂಬ ಉದ್ದೇಶದಿಂದ ಅವರಿಗಾಗಿ 2% ಮೀಸಲಾತಿ ನೀಡಲಾಗಿದೆ. ಮುಂದಿನ ದಿನಗಳಲ್ಲಿ ಮೀಸಲಾತಿ ಪ್ರಮಾಣವನ್ನು ಹೆಚ್ಚಿಸುವ ಆಲೋಚನೆಯಿದೆ. 2022-23ರಲ್ಲಿ 80 ಜನ ಸಿವಿಲ್ ಕಾನ್​ಸ್ಟೇಬಲ್ಸ್ ಹಾಗೂ 20 ಪಿಎಸ್ಐಗಳು ಕ್ರೀಡಾ ಮೀಸಲಾತಿಯಡಿ ಪೊಲೀಸ್ ಇಲಾಖೆಗೆ ಸೇರ್ಪಡೆಯಾಗಿದ್ದಾರೆ ಎಂದರು.

ಆರ್ಚರಿ ನಮ್ಮ ಸಂಸ್ಕೃತಿಯಲ್ಲಿದೆ. ಏಕಲವ್ಯ, ಅರ್ಜುನ, ಕರ್ಣ, ದ್ರೋಣಾಚಾರ್ಯ ಮತ್ತಿತರ ಶ್ರೇಷ್ಠ ಬಿಲ್ವಿದ್ಯೆಗಾರರನ್ನು ನಾವು ಮರೆಯುವಂತಿಲ್ಲ. ಉತ್ತಮ ಆರ್ಚರ್ ಆಗಲು ಮಾನಸಿಕ ಶಿಸ್ತು, ಶ್ರೇಷ್ಠ ತಂತ್ರಗಾರಿಕೆ, ಕಠಿಣ ಶ್ರಮದ ಅಗತ್ಯವಿದೆ. ಭಾರತ ಎದುರಿಸಿದ ಯುದ್ಧಗಳ ಸಂದರ್ಭದಲ್ಲಿ ಆರ್ಚರಿ ನಿರ್ಣಾಯಕ ಪಾತ್ರ ವಹಿಸಿರುವ ಇತಿಹಾಸವಿದೆ. ವೈರಿಗಳನ್ನ ಎದುರಿಸಲು ಮೌರ್ಯ ಹಾಗೂ ಗುಪ್ತ ಸಾಮ್ರಾಜ್ಯಗಳು ಸೇನೆಯಲ್ಲಿ ಬಿಲ್ವಿದ್ಯೆಗಾರರ ದಳವನ್ನ ಹೊಂದಿದ್ದವು. ಇಂದು ಆರ್ಚರಿ ಎಂಬುದು ರಾಷ್ಟ್ರ ಹಾಗೂ ಅಂತರಾಷ್ಟ್ರೀಯ ಮಟ್ಟದಲ್ಲಿ ತನ್ನದೇ ಸ್ಥಾನ ಹೊಂದಿದೆ. ಲಿಂಬಾ ರಾಮ್, ಸತೀಶ್ ಕುಮಾರ್, ದೀಪಿಕಾ ಕುಮಾರಿಯಂತಹ ಆರ್ಚರಿ‌ ಪಟುಗಳು ಒಲಂಪಿಕ್​ ಮಟ್ಟದಲ್ಲಿ ಭಾರತದ ಕೀರ್ತಿ ಪತಾಕೆ ಹಾರಿಸಿದ್ದಾರೆ ಎಂದು ಹೇಳಿದರು.

ಸಮಾರೋಪ ಸಮಾರಂಭದಲ್ಲಿ ಗೃಹ ಸಚಿವ ಡಾ. ಜಿ ಪರಮೇಶ್ವರ್, ಸಚಿವ ರಾಮಲಿಂಗಾ ರೆಡ್ಡಿ, ರಾಜ್ಯ ಪೊಲೀಸ್ ಇಲಾಖೆಯ ಮಹಾ ನಿರ್ದೇಶಕ ಡಾ‌. ಅಲೋಕ್ ಮೋಹನ್, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಗೋವಿಂದರಾಜು ಸೇರಿದಂತೆ ಹಿರಿಯ ಪೊಲೀಸ್ ಅಧಿಕಾರಿಗಳು ಭಾಗಿಯಾಗಿದ್ದರು.

ಇದನ್ನೂ ಓದಿ:ಅಖಿಲ ಭಾರತ ಪೊಲೀಸ್ ಆರ್ಚರಿ ಚಾಂಪಿಯನ್​ಶಿಪ್​ಗೆ ಗೃಹ ಸಚಿವ ಜಿ. ಪರಮೇಶ್ವರ್​ ಚಾಲನೆ

ABOUT THE AUTHOR

...view details