ಕರ್ನಾಟಕ

karnataka

ETV Bharat / state

ರಾಜ್ಯದಲ್ಲಿ ಸನ್ಸೇರಾದಿಂದ 2,100 ಕೋಟಿ ಹೂಡಿಕೆ, ಸಾವಿರಾರು ಉದ್ಯೋಗ ಸೃಷ್ಟಿಯ ಗುರಿ: ಒಡಂಬಡಿಕೆಗೆ ಸಹಿ - Sansera Investment in Karnataka - SANSERA INVESTMENT IN KARNATAKA

ವಾಹನಗಳ ಮತ್ತು ವೈಮಾನಿಕ‌ ಬಿಡಿಭಾಗ ತಯಾರಿಸುವ ಸನ್ಸೇರಾ ಕಂಪನಿ ಹಾಗೂ ಕರ್ನಾಟಕ ಸರ್ಕಾರದ ನಡುವೆ 2,100 ಕೋಟಿ ರೂ. ಹೂಡಿಕೆ ಒಡಂಬಡಿಕೆ ನಡೆದಿದೆ.

sansera agreement
ಸಚಿವ ಎಂ.ಬಿ.ಪಾಟೀಲ್ ಸಮ್ಮುಖದಲ್ಲಿ ಹೂಡಿಕೆ ಒಡಂಬಡಿಕೆ (Etv Bharat)

By ETV Bharat Karnataka Team

Published : Jul 31, 2024, 5:02 PM IST

ಬೆಂಗಳೂರು:ವಾಹನಗಳ ಮತ್ತು ವೈಮಾನಿಕ‌ ಬಿಡಿಭಾಗಗಳನ್ನು ತಯಾರಿಸುವ ಸನ್ಸೇರಾ ಕಂಪನಿಯು ರಾಜ್ಯದಲ್ಲಿ 2,100 ಕೋಟಿ ರೂ. ಹೂಡಿಕೆ ಮಾಡಲಿದೆ. ಈ ಸಂಬಂಧ ಭಾರೀ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ‌. ಬಿ. ಪಾಟೀಲ್ ಸಮ್ಮುಖದಲ್ಲಿ ಬುಧವಾರ ಒಡಂಬಡಿಕೆಗೆ ಸಹಿ ಹಾಕಲಾಯಿತು.

ಖನಿಜ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಕೈಗಾರಿಕಾ ಇಲಾಖೆಯ ಪ್ರಧಾನ ಕಾರ್ಯದರ್ಶಿ ಎಸ್.ಸೆಲ್ವಕುಮಾರ್ ಮತ್ತು ಸೆನ್ಸೇರಾ ಕಂಪನಿಯ ಸಿಇಒ ಶೇಖರ್ ವಾಸನ್ ಒಡಂಬಡಿಕೆಗೆ ಸಹಿ ಹಾಕಿದರು. ಈ ಸಂದರ್ಭದಲ್ಲಿ ಮಾತನಾಡಿದ ಸಚಿವ ಎಂ.ಬಿ. ಪಾಟೀಲ್, ಸನ್ಸೇರಾ ಎಂಜಿನಿಯರಿಂಗ್ ಲಿಮಿಟೆಡ್ ಸಂಸ್ಥೆಯು ಮುಂದಿನ ಐದು ವರ್ಷಗಳಲ್ಲಿ ಹಂತ - ಹಂತವಾಗಿ ಈ ಹೂಡಿಕೆ ಮಾಡಲಿದೆ. ಇದರಿಂದ 3,500 ಉದ್ಯೋಗಗಳು ಸೃಷ್ಟಿ ಆಗಲಿವೆ ಎಂದು ಹೇಳಿದರು.

ಸಚಿವ ಎಂ‌.ಬಿ. ಪಾಟೀಲ್ ಸಮ್ಮುಖದಲ್ಲಿ ಒಡಂಬಡಿಕೆ (ETV Bharat)

ಕಂಪನಿಯು ರಾಮನಗರ ಜಿಲ್ಲೆಯ ಹಾರೋಹಳ್ಳಿ ಕೈಗಾರಿಕಾ ಪ್ರದೇಶದಲ್ಲಿ 55 ಎಕರೆ ಪ್ರದೇಶದಲ್ಲಿ ತನ್ನ ಉತ್ಪಾದನಾ ಘಟಕ ಆರಂಭಿಸಲಿದೆ. ಇದರಿಂದ ರಾಜ್ಯದ ರಫ್ತು ವಹಿವಾಟಿಗೂ ಅನುಕೂಲ ಆಗಲಿದೆ. ಹಾರೋಹಳ್ಳಿ ಕೈಗಾರಿಕಾ ಪ್ರದೇಶದಲ್ಲಿ ತರಬೇತಿ ಕೇಂದ್ರ ಆರಂಭಿಸಲಿದ್ದು, ಇದರಿಂದ ಸ್ಥಳೀಯರ ಕೌಶಲ ವೃದ್ಧಿಯಾಗಲಿದೆ. ಕಂಪನಿಯು ದೇಶದಲ್ಲಿ 16 ತಯಾರಿಕಾ ಘಟಕಗಳನ್ನು ಹೊಂದಿದ್ದು, ಅವುಗಳ ಪೈಕಿ 12 ಘಟಕಗಳು ರಾಜ್ಯದಲ್ಲೇ ಇವೆ ಎಂದು ಸಚಿವರು ಮಾಹಿತಿ ನೀಡಿದರು.

ಓಟಿಸ್ ಕಂಪನಿಯಿಂದ 135 ಕೋಟಿ ಹೂಡಿಕೆ:ಎಲಿವೇಟರುಗಳನ್ನು ತಯಾರಿಸುವ ಓಟಿಸ್ ಕಂಪನಿ ಕೂಡ ರಾಜ್ಯದಲ್ಲಿ 135 ಕೋಟಿ ರೂ. ಹೂಡಲು ಒಲವು ವ್ಯಕ್ತಪಡಿಸಿದೆ ಎಂದು ಸಚಿವರು ತಿಳಿಸಿದರು. ಈ ಸಂಬಂಧ ಕಂಪನಿಯ ಹಿರಿಯ ನಿರ್ದೇಶಕ ರವಿಶಂಕರ್ ನೇತೃತ್ವದ ತಂಡದೊಂದಿಗೆ ಮಾತುಕತೆ ನಡೆಸಿದರು.

ಸಚಿವ ಎಂ‌.ಬಿ. ಪಾಟೀಲ್ ಸಮ್ಮುಖದಲ್ಲಿ ಒಡಂಬಡಿಕೆ (ETV Bharat)

ಇದಕ್ಕಾಗಿ ಕಂಪನಿಯು ಹಾರೋಹಳ್ಳಿಯಲ್ಲಿ 12 ಎಕರೆ ಭೂಮಿಯನ್ನು ಕೇಳಿದ್ದು, ಅದನ್ನು ಒದಗಿಸಲಾಗುವುದು. ಇದರಿಂದ 200ಕ್ಕೂ ಹೆಚ್ಚು ಉದ್ಯೋಗ ಸೃಷ್ಟಿ ಆಗಲಿದೆ ಎಂದು ಸಚಿವರು ಮಾಹಿತಿ ನೀಡಿದರು.

ಕಾರ್ಯಕ್ರಮದಲ್ಲಿ ವಾಣಿಜ್ಯ ಇಲಾಖೆಯ ಆಯುಕ್ತೆ ಗುಂಜನ್ ಕೃಷ್ಣ, ಕಂಪನಿಯ ಜಂಟಿ ವ್ಯವಸ್ಥಾಪಕ ನಿರ್ದೇಶಕ ಎಫ್‌.ಆರ್‌.ಸಿಂಘ್ವಿ, ಕಾರ್ಯದರ್ಶಿ ರಾಜೇಶ್‌ ಮೋದಿ ಉಪಸ್ಥಿತರಿದ್ದರು.

ಇದನ್ನೂ ಓದಿ:ಬೆಂಗಳೂರು, ನೀರಾವರಿ ಅಭಿವೃದ್ಧಿಗೆ ಹೆಚ್ಚಿನ ಅನುದಾನಕ್ಕೆ ಪ್ರಧಾನಿ ಮೋದಿ ಅವರ ಬಳಿ ಬೇಡಿಕೆ : ಡಿಸಿಎಂ ಡಿ ಕೆ ಶಿವಕುಮಾರ್ - D K SHIVAKUMAR MEETS PM MODI

ABOUT THE AUTHOR

...view details