ಮಂಗಳೂರು:ನಗರದ ಹೊರವಲಯದ ಅಡ್ಯಾರ್ ಬಳಿಯ 'ಪಾವೂರು ಉಳಿಯ ದ್ವೀಪ'ದಲ್ಲಿ ನಡೆಯುತ್ತಿರುವ ಅಕ್ರಮ ಮರಳುಗಾರಿಕೆ ವಿರುದ್ಧ ಜಿಲ್ಲಾಡಳಿತದ ನಿರ್ಲಕ್ಷ್ಯ ಖಂಡಿಸಿ ಗ್ರಾಮಸ್ಥರು ನೇತ್ರಾವತಿ ನದಿಗಿಳಿದು ವಿನೂತನವಾಗಿ ಹೋರಾಟ ನಡೆಸಿದರು.
ನದಿಯಲ್ಲಿನ ಮರಳು ಬಗೆಯುತ್ತಿರುವ ದುರುಳರ ವಿರುದ್ಧ ಸೆಟೆದು ನಿಂತ ಜನರು ನೇತ್ರಾವತಿ ನದಿ ನೀರಿನಲ್ಲಿ ನಿಂತು ಘೋಷಣೆ ಕೂಗಿದರು. ಪಾವೂರು - ಉಳಿಯ ದ್ವೀಪವನ್ನು ಅಕ್ರಮ ಮರಳುಗಾರರಿಂದ ರಕ್ಷಿಸಿ, ಇಲ್ಲವಾದಲ್ಲಿ ನಮ್ಮನ್ನು ಸಾಯಿಸಿ ಎಂದು ಗ್ರಾಮಸ್ಥರು ಆಗ್ರಹಿಸಿದರು. ಮಾನವ ಸರಪಳಿ ರಚಿಸುವ ಮೂಲಕ ಪಾವೂರು ಉಳಿಯ ನಿವಾಸಿಗಳು ನದಿ ನೀತಿನಲ್ಲಿ ನಿಂತು ಮರಳುಗಾರಿಕೆಗೆ ವಿರೋಧ ವ್ಯಕ್ತಪಡಿಸಿದರು.
ಅಕ್ರಮ ಮರಳು ಗಣಿಗಾರಿಕೆ ತಡೆಯಲು ವಿಫಲವಾದ ಜಿಲ್ಲಾಡಳಿತದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಗ್ರಾಮಸ್ಥರು, ನದಿ ಒಡಲಲ್ಲಿರುವ ಮರಳನ್ನು ಖದೀಮರು ಕೊಳ್ಳೆ ಹೊಡೆಯುತ್ತಿದ್ದರೂ, ಯಾವುದೇ ಕ್ರಮ ಕೈಗೊಳ್ಳದ ಅಧಿಕಾರಿಗಳು ಮತ್ತು ಗಣಿ ಇಲಾಖೆ ವಿರುದ್ಧ ಘೋಷಣೆ ಕೂಗಿದರು. ಪ್ಲೇಕಾರ್ಡ್ಗಳನ್ನು ಹಿಡಿದು ಮಹಿಳೆಯರು ಕೂಡ ನೀರಿನಲ್ಲಿ ಪ್ರತಿಭಟಿಸಿದರು.
ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಬೇಸರ:ಗ್ರಾಮಸ್ಥ ಗಿಲ್ಬರ್ಟ್ ಡಿಸೋಜ ಮಾತನಾಡಿ, ಎರಡು ತಿಂಗಳ ಹಿಂದೆ ಜಿಲ್ಲಾಡಳಿತ ದ್ವೀಪದಲ್ಲಿ ಗಣಿಗಾರಿಕೆಗೆ ಅವಕಾಶ ನೀಡುವುದಿಲ್ಲ ಎಂದು ಭರವಸೆ ನೀಡಿತ್ತು. ಜಿಲ್ಲಾಧಿಕಾರಿ ಈ ಬಗ್ಗೆ ತನಿಖೆಗೆ ಆಯೋಗ ರಚಿಸಿದ್ದರು. ಆದರೆ, ಅಕ್ರಮ ಮರಳು ಮಾಫಿಯಾ ದಂಧೆ ಮತ್ತೆ ಆರಂಭವಾಗಿದೆ. ಹಲವಾರು ಬಾರಿ ಮನವಿ ನೀಡಿದರೂ ಜಿಲ್ಲಾಧಿಕಾರಿ ಭೇಟಿ ನೀಡದೆ ಇರುವುದು ಬೇಸರದ ಸಂಗತಿ. ನಮ್ಮ ಆಗ್ರಹವನ್ನು ನಿರ್ಲಕ್ಷಿಸಿದರೆ, ತೀವ್ರ ಪ್ರತಿಭಟನೆ ಮಾಡಲಿದ್ದೇವೆ ಎಂದು ಎಚ್ಚರಿಸಿದರು.
ಫಾ.ವಲೇರಿಯನ್ ಡಿಸೋಜಾ, ಕೆಥೋಲಿಕ್ ಸಭಾದ ಅಧ್ಯಕ್ಷ ಅಲ್ವಿನ್ ಡಿಸೋಜ, ಕೆಥೋಲಿಕ್ ಸಭಾದ ಮಾಜಿ ಅಧ್ಯಕ್ಷ ಸ್ಪ್ಯಾನಿ ಲೋಬೊ, ಐಸಿವೈಎಂ ಮಾಜಿ ಅಧ್ಯಕ್ಷ ಮಿಥೇಶ್, ಡಿಸೋಜ ಮತ್ತಿತರರು ಪ್ರತಿಭಟನೆಯಲ್ಲಿ ಭಾಗಿಯಾಗಿದ್ದರು.
ಅಗತ್ಯ ಕ್ರಮದ ಭರವಸೆ ನೀಡಿದ ಡಿ.ಸಿ.:ಇದಾದ ಬಳಿಕ ಅಕ್ರಮ ಮರಳುಗಾರಿಕೆಗೆ ಬಗ್ಗೆ ಈಟಿವಿ ಭಾರತ್ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಅವರನ್ನು ಸಂಪರ್ಕಿಸಿದಾಗ, ಈ ಹಿಂದೆ ಪಾವೂರು ಉಳಿಯ ದ್ವೀಪದಲ್ಲಿ ಮರಳುಗಾರಿಕೆ ನಡೆಸುತ್ತಿದ್ದ ದೂರು ಬಂದಾಗ, ಸ್ಥಳಕ್ಕೆ ಭೇಟಿ ನೀಡಿ ದಂಧೆಯನ್ನು ನಿಲ್ಲಿಸಲಾಗಿತ್ತು. ಈಗ ಮತ್ತೆ ಆರಂಭವಾಗಿದೆ ಎಂದು ಪ್ರತಿಭಟನೆ ನಡೆಸಲಾಗಿದೆ. ಈ ಬಗ್ಗೆ ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುವುದು. ಪಾವೂರು ದ್ವೀಪವನ್ನು ಉಳಿಸುವುದು ಮೊದಲ ಆದ್ಯತೆಯಾಗಿದೆ. ದಂಧೆಗೆ ಕಡಿವಾಣ ಹಾಕಲಾಗುವುದು ಎಂದು ತಿಳಿಸಿದರು.
ಇದನ್ನೂ ಓದಿ:ನಮೋ ಭಾರತ್ ರ‍್ಯಾಪಿಡ್ ರೈಲಾಗಿ ಬದಲಾದ ವಂದೇ ಮೆಟ್ರೋ; ಪ್ರಧಾನಿ ಮೋದಿಯಿಂದ ಚಾಲನೆ - ಏನೇನೆಲ್ಲ ವಿಶೇಷತೆ ಇದೆ? - Namo Bharat Rapid Rail