ಚಾಮರಾಜನಗರ:ಭಾರತದ ಪ್ರಮುಖ ಹುಲಿ ಸಂರಕ್ಷಿತ ಪ್ರದೇಶಗಳಲ್ಲಿ ಒಂದಾಗಿರುವ ಗುಂಡ್ಲುಪೇಟೆ ತಾಲೂಕಿನ ಬಂಡೀಪುರದಲ್ಲಿ ಈಗ ಭೀಮನದ್ದೇ ದರ್ಬಾರ್. ಒಂದು ಕಾಲದಲ್ಲಿ ಪ್ರವಾಸಿಗರ ಫೇವರೇಟ್ ಆಗಿದ್ದ ಪ್ರಿನ್ಸ್ ನಂತೆ ಈಗ ಭೀಮ ಕೂಡ ಎಲ್ಲರ ನೆಚ್ಚಿನ ಹುಲಿರಾಯ ಆಗಿದ್ದಾನೆ.
ಬಂಡೀಪುರ ಅಂದರೆ ಸಾಕು ವನ್ಯಪ್ರೇಮಿಗಳಿಗೆ ನೆನಪಾಗುವುದು ಪ್ರಿನ್ಸ್ ಹೆಸರಿನ ಹುಲಿ. ಹುಲಿ ಬಲಿಷ್ಠ ಪ್ರಾಣಿಯಾಗಿದ್ದರೂ ಮನುಷ್ಯರನ್ನು ಕಂಡರೇ ಮರೆಯಾಗುವುದೇ ಹೆಚ್ಚು. ಆದರೆ, ಬಂಡೀಪುರದಲ್ಲಿ ಈ ಹಿಂದೆ ಇದ್ದ ಪ್ರಿನ್ಸ್ ಎಂಬ ಹುಲಿ ಪ್ರವಾಸಿಗರನ್ನು ಕಂಡರೇ ದೂರ ಓಡದೇ ಹತ್ತಿರಕ್ಕೆ ಬರುತ್ತಿದ್ದ. ಗಂಟೆಗಟ್ಟಲೆ ದರ್ಶನ ಕೊಡುತ್ತಿದ್ದ ಪ್ರಿನ್ಸ್, ಸಫಾರಿ ಜೀಪ್ ಹತ್ತಿರವೇ ಸುಳಿದಾಡುತ್ತಿದ್ದ. ಈಗ ಪ್ರಿನ್ಸ್ ನಂತೆ ಭೀಮ ಎಂಬ ಹುಲಿಯು ಪ್ರವಾಸಿಗರನ್ನು ಸೆಳೆಯುತ್ತಿದೆ.
ಬಂಡೀಪುರದ ಸಫಾರಿಯ ಬೆಟ್ಟದಕಟ್ಟೆಯಿಂದ ಮಂಗಲ ಕೆರೆ ತನಕವೂ ತನ್ನ ಸರಹದ್ದನ್ನು ಇಟ್ಟುಕೊಂಡಿರುವ ಭೀಮ, ಪ್ರವಾಸಿಗರಿಗೆ ಆಗಾಗ್ಗೆ ದರ್ಶನ ಕೊಡುತ್ತಿದೆ. ಜೊತೆಗೆ, ಪ್ರವಾಸಿಗರನ್ನು ಕಂಡರೇ ಮರೆಯಾಗದೇ ಗಾಂಭೀರ್ಯದ ಹೆಜ್ಜೆ ಇಡುತ್ತಿದೆ. ಸಫಾರಿ ವಾಹನ ಬಂದರೂ ಹೆದರದೇ ರಸ್ತೆ ದಾಟಿ, ರಗಡ್ ಲುಕ್ ಕೊಡಲಿದ್ದು ಭೀಮನ ಪ್ರವಾಸಿಗರು ಫಿಧಾ ಆಗುತ್ತಿದ್ದಾರೆ.