ವಕೀಲ ದೇವರಾಜೇಗೌಡ (ETV Bharat) ಹಾಸನ:ಅತ್ಯಾಚಾರ ಆರೋಪ ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿರುವ ವಕೀಲ, ಬಿಜೆಪಿ ಮುಖಂಡ ದೇವರಾಜೇಗೌಡ ಗಂಭೀರವಾದ ಆರೋಪ ಮಾಡಿದ್ದಾರೆ. ಸಂಸದ ಪ್ರಜ್ವಲ್ ರೇವಣ್ಣ ಅವರದ್ದು ಎನ್ನಲಾದ ಅಶ್ಲೀಲ ಪೆನ್ಡ್ರೈವ್ ಪ್ರಕರಣಕ್ಕೆ ಸಂಬಂಧಪಟ್ಟಂತೆ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಮಗೆ 100 ಕೋಟಿ ರೂಪಾಯಿ ಆಫರ್ ಕೊಟ್ಟಿದ್ದರು ಎಂದು ದೂರಿದ್ದಾರೆ.
ಎಸ್ಐಟಿ ಅಧಿಕಾರಿಗಳು ಕರೆದುಕೊಂಡು ಹೋಗುವ ಸಂದರ್ಭದಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ದೇವರಾಜೇಗೌಡ, ರಾಜ್ಯದಲ್ಲಿ ಹೆಚ್.ಡಿ.ಕುಮಾರಸ್ವಾಮಿ ನಾಯಕತ್ವ ಹಾಳು ಮಾಡಬೇಕು ಮತ್ತು ಬಿಜೆಪಿ, ಪ್ರಧಾನಿ ಮೋದಿ ಅವರಿಗೆ ಕೆಟ್ಟ ಹೆಸರು ತರಲು ಇದನ್ನು ಮಾಡಲಾಗಿದೆ. ನಾನು ಹೊರಗಡೆ ಬಂದ ದಿನವೇ ಸರ್ಕಾರ ಪತನವಾಗುತ್ತದೆ ಎಂದು ಹೇಳಿದರು.
ಕಾರ್ತಿಕ್ನಿಂದ ಸಂಪೂರ್ಣ ಮಾಹಿತಿ ಪಡೆದುಕೊಂಡು ಪೆನ್ಪ್ರೈವ್ ತಯಾರಿಸಿರುವುದೇ ಡಿ.ಕೆ.ಶಿವಕುಮಾರ್. ಪೆನ್ಡ್ರೈವ್ ಅನ್ನು ಹೆಚ್.ಡಿ.ಕುಮಾರಸ್ವಾಮಿ ಅವರು ಹಂಚಿಕೆ ಮಾಡಿದ್ದಾರೆ ಎಂದು ಹೇಳಿದರೆ, ನನ್ನನ್ನು ರಕ್ಷಣೆ ಮಾಡುತ್ತೇವೆ ಎಂದು ಹೇಳಿದ್ದರು. ಜೊತೆಗೆ ದೊಡ್ಡ ಮಟ್ಟದ ಹಣದ ಆಫರ್ ಕೊಟ್ಟಿದ್ದರು ಎಂದು ದೇವರಾಜೇಗೌಡ ಹೇಳಿದರು.
ಅಲ್ಲದೇ, ಇದರಲ್ಲಿ ನಾಲ್ವರು ಸಚಿವರ ಕಮಿಟಿಯೂ ಇದೆ. ಚಲುವರಾಯಸ್ವಾಮಿ, ಕೃಷ್ಣ ಬೈರೇಗೌಡ, ಪ್ರಿಯಾಂಕ್ ಖರ್ಗೆ ಸೇರಿ ನಾಲ್ವರ ತಂಡ ರಚನೆ ಮಾಡಿ, ಇದನೆಲ್ಲವನ್ನೂ ನಿರ್ವಹಣೆ ಮಾಡಲು ಬಿಟ್ಟಿದ್ದಾರೆ. ಇದನ್ನೆಲ್ಲ ಮೋದಿ, ಬಿಜೆಪಿ, ಕುಮಾರಸ್ವಾಮಿ ಅವರಿಗೆ ಕಳಂಕ ತರಬೇಕು ಎಂದು ಮಾಡಿರುವುದು. ನನಗೆ 100 ಕೋಟಿ ರೂಪಾಯಿ ಆಫರ್ ಅನ್ನು ಡಿ.ಕೆ.ಶಿವಕುಮಾರ್ ಕೊಟ್ಟಿದ್ದರು. ನಾನು ಇದಕ್ಕೆ ಒಪ್ಪದೇ ಇದ್ದಾಗ ಚನ್ನರಾಯಪಟ್ಟಣದ ಗೋಪಾಲಸ್ವಾಮಿ ಮೂಲಕ ಬೌರಿಂಗ್ ಕ್ಲಬ್ನ 110 ರೂಂಗೆ ಐದು ಕೋಟಿ ರೂಪಾಯಿ ಹಣವನ್ನೂ ಕೊಟ್ಟು ಸಂಧಾನಕ್ಕೆ ಕಳುಹಿಸಿದ್ದರು ಎಂದು ಆರೋಪಿಸಿದರು.
ಅಶ್ಲೀಲ ವಿಡಿಯೋ ಪ್ರಕರಣದಲ್ಲಿ ಮೋದಿ ಅವರನ್ನು ಪ್ರಮುಖ ನಾಯಕರು ಎಂದು ಬಿಂಬಿಸಬೇಕು. ಡಿ.ಕೆ.ಶಿವಕುಮಾರ್ ಅವರು ಮುಖ್ಯ ಉದ್ದೇಶವೆಂದರೆ, ರಾಜ್ಯದಲ್ಲಿ ಕುಮಾರಸ್ವಾಮಿ ನಾಯಕತ್ವವನ್ನು ಹಾಳು ಮಾಡಬೇಕೆಂಬುವುದು. ಇಷ್ಟೇ ಅಲ್ಲ, ನಾನು ಒಪ್ಪದೇ ಇದ್ದಾಗ ನನ್ನ ಮೇಲೆ ಅಟ್ರಾಸಿ ಕೇಸ್ ಹಾಕಿದ್ದರು. ಆದರೆ, ದಾಖಲೆಗಳು ಸಿಗದ ಕಾರಣಕ್ಕೆ ಪ್ರಕರಣ ನಡೆಯಲಿಲ್ಲ. ಇದಾದ ಮೇಲೆ ಮತ್ತೊಬ್ಬ ಮಹಿಳೆ ಮೂಲಕ ಲೈಂಗಿಕ ಕಿರುಕುಳ ಪ್ರಕರಣ ದಾಖಲಿಸಿದ್ದರು. ಇದು ಕೂಡ ವಿಫಲವಾಯಿತು. ಈಗ ಅತ್ಯಾಚಾರ ಆರೋಪ ಪ್ರಕರಣ ಹಾಕಿಸಿದ್ದಾರೆ. ಈ ಪ್ರಕರಣದಲ್ಲೂ ಯಾವುದೇ ದಾಖಲಾತಿಗಳು ಸಿಕ್ಕಿಲ್ಲ. ನಾಲ್ಕು ದಿನಗಳ ಕಾಲ ನಿರಂತರವಾಗಿ ವಿಚಾರಣೆಗೆ ಒಳಪಡಿಸಿದ್ದಾರೆ ಎಂದು ಹೇಳಿದರು.
ಇದನ್ನೂ ಓದಿ:’ಯಾರ ಷಡ್ಯಂತ್ರವೂ ನಡೆಯೋದಿಲ್ಲ, ಸತ್ಯ ಶೀಘ್ರವೇ ಹೊರ ಬರಲಿದೆ‘: ವಕೀಲ ದೇವರಾಜೇಗೌಡ