ಚಿಕ್ಕಮಗಳೂರು:ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿಯಾಗಿದ್ದ ಅನ್ವರ್ ಕೊಲೆಯಾಗಿ 6 ವರ್ಷ ಕಳೆದರೂ ಆರೋಪಿ ಇನ್ನೂ ಪತ್ತೆಯಾಗಿಲ್ಲ. ಈ ಹಿನ್ನೆಲೆಯಲ್ಲಿ ಎಡಿಜಿಪಿ ಬಿ.ಕೆ. ಸಿಂಗ್ ಖುದ್ದು ಪ್ರಕರಣದ ತನಿಖೆಗೆ ಇಳಿದಿದ್ದು, ಶನಿವಾರ ನಗರಕ್ಕೆ ಆಗಮಿಸಿದ ಅವರು ಮಾಹಿತಿ ಕಲೆ ಹಾಕಿದ್ದಾರೆ.
ಬಿಜೆಪಿ ಮುಖಂಡ ಅನ್ವರ್ರನ್ನು 2018ರ ಜೂನ್ 22ರಂದು ಉಪ್ಪಳ್ಳಿ ಬಡಾವಣೆಯಲ್ಲಿನ ಅವರ ಮನೆ ಸಮೀಪದಲ್ಲಿ ಕೊಲೆ ಮಾಡಲಾಗಿತ್ತು. ಪ್ರಕರಣದಿಂದ ಚಿಕ್ಕಮಗಳೂರು ನಗರದ ಜನರು ಬೆಚ್ಚಿ ಬಿದ್ದಿದ್ದರು. ಈ ಪ್ರಕರಣವನ್ನು 2019ರಲ್ಲಿ ಅಂದಿನ ಬಿಜೆಪಿ ಸರ್ಕಾರ ಸಿಐಡಿ ತನಿಖೆಗೆ ವಹಿಸಿತ್ತು. ಇಂದಿಗೂ ಕೂಡ ಅನ್ವರ್ ಕೊಲೆ ಪ್ರಕರಣದ ಆರೋಪಿಗಳ ಪತ್ತೆ ಸಾಧ್ಯವಾಗಿಲ್ಲ.
ಅನ್ವರ್ ಕೊಲೆ ಪ್ರಕರಣದ ಆರೋಪಿಗಳನ್ನು ಪತ್ತೆ ಹಚ್ಚಿ ಬಂಧಿಸಬೇಕೆಂದು ಅನ್ವರ್ ಕುಟುಂಬದವರು ಚಿಕ್ಕಮಗಳೂರು ನಗರದಲ್ಲಿ ಅನೇಕ ಸಲ ಪ್ರತಿಭಟನೆ ನಡೆಸಿ ಸರ್ಕಾರಕ್ಕೆ ಆಗ್ರಹಿಸಿದ್ದರು. ಜೊತೆಗೆ, ಆರೋಪಿಗಳನ್ನು ಶೀಘ್ರವೇ ಬಂಧಿಸಿ, ಇಲ್ಲವೇ ದಯಾಮರಣಕ್ಕೆ ಅನುಮತಿ ನೀಡುವಂತೆ ಪ್ರಧಾನಮಂತ್ರಿಗಳಿಗೆ ಪತ್ರವನ್ನೂ ಕೂಡ ಬರೆದಿದ್ದರು. ಕುಟುಂಬಸ್ಥರು ಪೊಲೀಸ್ ಇಲಾಖೆ, ರಾಜ್ಯ ಸರ್ಕಾರದ ಮೇಲೆ ಎಷ್ಟೇ ಒತ್ತಡ ತಂದರೂ ಕೊಲೆ ಆರೋಪಿಗಳ ಸುಳಿವು ಸಿಕ್ಕಿಲ್ಲ.
ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಎಡಿಜಿಪಿ ಬಿ.ಕೆ. ಸಿಂಗ್, ಶನಿವಾರ ನಗರಕ್ಕೆ ಆಗಮಿಸಿ, ಕೊಲೆ ನಡೆದ ಜಾಗ, ಅಲ್ಲಿನ ಮಾರ್ಗಗಳು ಸೇರಿದಂತೆ ಸಂಬಂಧಪಟ್ಟ ಮಾಹಿತಿಯನ್ನು ತನಿಖೆ ನಡೆಸಿದ ಪೊಲೀಸ್ ಅಧಿಕಾರಿಗಳಿಂದ ಮಾಹಿತಿ ಪಡೆದಿದ್ದಾರೆ. ಈ ವೇಳೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ವಿಕ್ರಮ್ ಅಮಟೆ, ಸೇರಿದಂತೆ ಇತರೆ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿ ಇದ್ದರು.
ಇದನ್ನೂ ಓದಿ:ಮಾಜಿ ಸಚಿವರಿಗೆ ಬ್ಲ್ಯಾಕ್ಮೇಲ್: ನಲಪಾಡ್ ಬ್ರಿಗೇಡ್ ಜಿಲ್ಲಾ ಘಟಕದ ಅಧ್ಯಕ್ಷೆ, ಪತಿ ಬಂಧನ