ಉಡುಪಿ/ಬೆಂಗಳೂರು: "ಮತದಾನದ ಕರ್ತವ್ಯದಿಂದ ಯಾರೂ ಹಿಂಜರಿಯಬಾರದು. ಮತ ಹಾಕದೇ ಯಾರನ್ನೂ ದೂರಲು ನಮಗೆ ಹಕ್ಕಿಲ್ಲ" ಎಂದು ನಟ ರಕ್ಷಿತ್ ಶೆಟ್ಟಿ ಹೇಳಿದರು. ಲೋಕಸಭಾ ಚುನಾವಣೆಗೆ ಕುಕ್ಕಿಕಟ್ಟೆ ಅನುದಾನಿತ ಖಾಸಗಿ ಹಿರಿಯ ಪ್ರಾಥಮಿಕ ಶಾಲೆಯ ಮತಗಟ್ಟೆ ಸಂಖ್ಯೆ 197ಕ್ಕೆ ಆಗಮಿಸಿದ ಅವರು ವೋಟ್ ಮಾಡಿದರು.
ಬಳಿಕ ಮಾತನಾಡಿ, "ಕಡ್ಡಾಯ ಮತದಾನ ನಿಯಮ ಜಾರಿಗೆ ತರುವಂತೆ ಪೇಜಾವರ ಶ್ರೀಗಳು ಹೇಳಿರುವುದು ಬಹಳ ಒಳ್ಳೆಯ ಯೋಚನೆ. ಆದರೆ, ಎಲ್ಲರನ್ನೂ ಮತಗಟ್ಟೆಗೆ ಕರೆತರುವುದು ಕಷ್ಟದ ಕೆಲಸ. ಮುಂದಿನ ಐದು ಹತ್ತು ವರ್ಷಗಳಲ್ಲಿ ಅಂಥ ನಿಯಮ ಜಾರಿಗೆ ತರಬಹುದು. ಅಂತರ್ಜಾಲದ ಮೂಲಕ ಮತ ಹಾಕುವ ವ್ಯವಸ್ಥೆ ಬಂದರೆ ಇದು ಸಾಧ್ಯವಿದೆ. ಸದ್ಯಕ್ಕೆ ಶೇ 100ರಷ್ಟು ಮತದಾನ ಮಾಡಿಸುವುದು ಕಷ್ಟವಿದೆ. ನಾನು ವೋಟು ಮಾಡುವುದಕ್ಕೋಸ್ಕರ ಊರಿಗೆ ಬಂದಿದ್ದೇನೆ. ನಾನು ಮತ ಹಾಕಿದವರು ಶೇ.100 ರಷ್ಟು ಗೆಲ್ಲುತ್ತಾರೆ, ಅದರಲ್ಲಿ ಡೌಟೇ ಇಲ್ಲ. ನಾನು ಯಾರಿಗೆ ಮತ ಹಾಕಿದ್ದೇನೆ ಅನ್ನೋದನ್ನು ಮುಂದಿನ ವರ್ಷ ಹೇಳುವೆ" ಎಂದರು.
ನಟಿ ಮಾಲಾಶ್ರೀ ತಮ್ಮ ಪುತ್ರಿ ಆರಾಧನಾ ರಾಮ್, ಪುತ್ರ ಆರ್ಯನ್ ಸಮೇತರಾಗಿ ಶ್ರೀ ವೀರೇಂದ್ರ ಪಾಟೀಲ್ ಕಾಲೇಜು ಹತ್ತಿರದ ಪತಗಟ್ಟೆಗೆ ಆಗಮಿಸಿ ಮತದಾನ ಮಾಡಿದರು.
ಅಶ್ವಥ್ ನಗರದ ಪುಟ್ಟಯ್ಯ ಕಾಂಪೌಂಡ್ ಅಂಗನವಾಡಿ ಕೇಂದ್ರ ಮತಗಟ್ಟೆ ಸಂಖ್ಯೆ- 59ಕ್ಕೆ ಕುಟುಂಬಸಮೇತರಾಗಿ ಆಗಮಿಸಿದ ನಟ ಅನಂತ್ ನಾಗ್ ಮತದಾನ ಮಾಡಿದರು. ಪತ್ನಿ ಗಾಯತ್ರಿ, ಪುತ್ರಿ ಅದಿತಿ ಕೂಡ ವೋಟ್ ಮಾಡಿದ್ದಾರೆ.