ಬಳ್ಳಾರಿ: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಬಂಧಿತರಾಗಿರುವ ನಟ ದರ್ಶನ್ ಅವರನ್ನು ಇಂದು ಬೆಳಗ್ಗೆ ಬಳ್ಳಾರಿ ಜೈಲಿಗೆ ಸ್ಥಳಾಂತರ ಮಾಡಲಾಗಿದೆ. ಇದುವರೆಗೆ ದರ್ಶನ್ ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದರು. ಇಂದು ಬಿಗಿ ಭದ್ರತೆಯಲ್ಲಿ ಬಳ್ಳಾರಿಯ ಜೈಲಿಗೆ ಪೊಲೀಸ್ ವಾಹನಗಳು ಎಂಟ್ರಿಕೊಟ್ಟಿವೆ.
ಬಳ್ಳಾರಿ ಸೆಂಟ್ರಲ್ ಜೈಲಿಗೆ ನಟ ದರ್ಶನ್ ಸ್ಥಳಾಂತರ (ETV Bharat) ತುಮಕೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಕ್ಯಾತಸಂದ್ರ ಟೋಲ್ ದಾಟಿ, ಶಿರಾ ಮೂಲಕ ಬೆಂಗಳೂರಿನ ಪೊಲೀಸರ ಭದ್ರತೆಯೊಂದಿಗೆ ಟಿಟಿ ವಾಹನದಲ್ಲಿ ದರ್ಶನ್ ಅವರನ್ನು ಕರೆತರಲಾಯಿತು. ಬೆಳಗ್ಗಿನ ಜಾವ 4.30ಕ್ಕೆ ಬೆಂಗಳೂರಿನ ಪರಪ್ಪನ ಅಗ್ರಹಾರದಿಂದ ಹೊರಟ ಪೊಲೀಸ್ ವಾಹನ ಬೆಳಗ್ಗೆ 9.45ರ ಸುಮಾರಿಗೆ ಬಳ್ಳಾರಿ ಸೆಂಟ್ರಲ್ ಜೈಲು ತಲುಪಿದೆ. ಪೂಮಾ ಕಂಪನಿಯ ಬ್ಲ್ಯಾಕ್ ಟಿ-ಶರ್ಟ್ ಜೀನ್ಸ್ ಧರಿಸಿದ್ದ ದರ್ಶನ್ ಬಲಗೈಯಲ್ಲಿ ಬ್ಯಾಂಡೇಜ್ ಕಟ್ಟಿಕೊಂಡಿದ್ದರು.
ಪೊಲೀಸ್ ವಾಹನದಿಂದ ಇಳಿದ ದರ್ಶನ್ ಜೈಲು ಪ್ರವೇಶದ್ವಾರದ ಎಂಟ್ರಿ ಪುಸ್ತಕದಲ್ಲಿ ಸಹಿ ಮಾಡಿದರು. ಆಂತರಿಕ ಭದ್ರತಾ ವಿಭಾಗದಲ್ಲಿ ತಪಾಸಣೆ, ನಂತರ ಜೈಲು ವೈದ್ಯಾಧಿಕಾರಿಗಳು ಅವರ ಆರೋಗ್ಯ ತಪಾಸಣೆ ನಡೆಸಿದ್ದು, ಬಳಿಕ ಹೈ-ಸೆಕ್ಯೂರಿಟಿ ಸೆಲ್ಗೆ ಕಳುಹಿಸಲಾಯಿತು. ಯಾರೊಬ್ಬರೂ ಎಂಟ್ರಿಯಾಗದಂತೆ ಹೈ-ಸೆಕ್ಯೂರಿಟಿ ಸೆಲ್ ನಿರ್ಮಾಣ ಮಾಡಲಾಗಿದೆ ಎಂದು ಬಳ್ಳಾರಿ ಜೈಲಿನ ಮೂಲಗಳು ತಿಳಿಸಿವೆ.
ದರ್ಶನ್ ನೋಡಲು ರಸ್ತೆಯಲ್ಲಿ ಕಾಯುತ್ತಿದ್ದ ಅಭಿಮಾನಿಗಳು (ETV Bharat) ಹೈ-ಸೆಕ್ಯೂರಿಟಿ ಸೆಲ್ಗಳನ್ನು ಮೂರು ದಶಕಗಳ ಹಿಂದೆ ನಿರ್ಮಾಣ ಮಾಡಲಾಗಿದೆ. ಎರಡು ಬದಿಯಲ್ಲಿ ಕನಿಷ್ಟ 30 ಸೆಲ್ಗಳಿವೆ. ಒಂದು ಕಡೆ 15 ಸೆಲ್ಗಳಿದ್ದು ಅಲ್ಲಿ ದರ್ಶನ್ ಅವರನ್ನು ಇರಿಸಲಾಗಿದೆ. ಪಂಜಾಬ್ ಸಿಎಂ ಹತ್ಯೆ ಮಾಡಿದ ಉಗ್ರಗಾಮಿಗಳನ್ನು ಬಂಧಿಸಿಡಲು ಸಿದ್ದಪಡಿಸಿದ್ದ ಸೆಲ್ನಲ್ಲಿ ದರ್ಶನ್ ಅವರನ್ನು ಬಂಧಿಸಿಡಲಾಗಿದೆ. ಈಗಾಗಲೇ ವಿವಿಧ ಆರೋಪ ಮತ್ತು ಅಪರಾಧಗಳ ಅಡಿ ಬಂಧಿತ 11 ಜನರನ್ನು ಈ ಸೆಲ್ಗಳಲ್ಲಿ ಇಡಲಾಗಿದೆ. ಮಂಗಳೂರು, ಶಿವಮೊಗ್ಗ, ಬೆಂಗಳೂರಿನ 11 ಜನರು ಈ ಸೆಲ್ಗಳಲ್ಲಿ ಇದ್ದಾರೆ.
ಬಳ್ಳಾರಿ ಕೇಂದ್ರ ಕಾರಾಗೃಹದ ಒಳಗಡೆ ಯೋಗ ಕೇಂದ್ರ ಇದೆ. ಆದರೆ ಹೈ-ಸೆಕ್ಯೂರಿಟಿ ಸೆಲ್ನಲ್ಲಿ ಇಲ್ಲ. ಕೇಂದ್ರ ಕಾರಾಗೃಹ ಹಾಗೂ ಈ ಹೈ-ಸೆಕ್ಯೂರಿಟಿ ಸೆಲ್ಗೆ ಸಂಪರ್ಕ ಇಲ್ಲ. ಜೈಲ್ ಸಿಬ್ಬಂದಿಗೂ ಸೆಲ್ನಲ್ಲಿ ಮೊಬೈಲ್ ಬಳಕೆ ನಿಷಿದ್ಧ. ಏನಿದ್ದರೂ ವೈಯರ್ ಲೆಸ್ ವ್ಯವಸ್ಥೆ ಮಾತ್ರ ಇದೆ. ಪರಪ್ಪನ ಅಗ್ರಹಾರ ಜೈಲಿನಲ್ಲಾದ ಘಟನೆ ಹಿನ್ನೆಲೆಯಲ್ಲಿ ಜೈಲ್ ಅಧಿಕಾರಿಗಳು ಹೈ ಅಲರ್ಟ್ ಆಗಿದ್ದಾರೆ. ಸಿಬ್ಬಂದಿ ಮೊಬೈಲ್ ಬಳಕೆ ಮೇಲೆ ಹೆಚ್ಚಿನ ನಿಗಾ ವಹಿಸಲಾಗಿದೆ. ಈ ಬಗ್ಗೆ ಅಧಿಕಾರಿಗಳು ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ. ಕೆಲ ಸಿಬ್ಬಂದಿ ಮನೆಯಲ್ಲಿಯೇ ಮೊಬೈಲ್ ಬಿಟ್ಟುಹೋಗುವ ಸ್ಥಿತಿ ಎದುರಾಗಿದೆ.
ಆಂಧ್ರದ ಅನಂತಪುರ ಜಿಲ್ಲೆಯ ಮೂಲಕ ಬಳ್ಳಾರಿಗೆ:ಗಡಿಗ್ರಾಮ ಜೋಳದ ರಾಶಿ ಮೂಲಕ ಆಗಮಿಸಿದ ದರ್ಶನ್ ವಾಹನಕ್ಕೆ ಸ್ಥಳೀಯ ಪೊಲೀಸರು ಕೂಡ ಬಿಗಿ ಭದ್ರತೆ ಒದಗಿಸಿದ್ದರು. ಜಿಲ್ಲಾಧಿಕಾರಿ ಪ್ರಶಾಂತ್ ಕುಮಾರ್ ಮಿಶ್ರಾ, ಎಸ್ಪಿ ಶೋಭಾರಾಣಿ, ಜೈಲು ಅಧೀಕ್ಷಕಿ ಲತಾ ನೇತೃತ್ವದಲ್ಲಿ ಪೊಲೀಸರು ಜೈಲಿನೊಳಗಿನ ಎಲ್ಲಾ ಪರಿಸ್ಥಿತಿ ವೀಕ್ಷಿಸಿದರು.
ದರ್ಶನ್ ಸ್ಥಳಾಂತರ (ETV Bharat) ಬಳ್ಳಾರಿ ಜೈಲಿಗೆ ಪೊಲೀಸ್ ಸಿಬ್ಬಂದಿ ನಿಯೋಜಿಸಿ ಹೆಚ್ಚಿನ ಭದ್ರತೆ:ನಟ ದರ್ಶನ್ ಅವರನ್ನು ನೋಡಲು ಕ್ಯಾತಸಂದ್ರ ಮಾರ್ಗದಲ್ಲಿ ಅಭಿಮಾನಿಗಳು ನೆರೆದಿದ್ದರು. ದರ್ಶನ್ ಅಭಿಮಾನಿಗಳನ್ನು ಜೈಲು ಬಳಿಗೆ ಬಿಡದಂತೆ ದುರ್ಗಮ್ಮಗುಡಿ ಬಳಿಯೇ ಬ್ಯಾರಿಕೇಡ್ ಅಳವಡಿಸಿ, ತಡೆಹಿಡಿಯಲಾಯಿತು. ದರ್ಶನ್ ಬರುತ್ತಿದ್ದಂತೆ ದುರ್ಗಮ್ಮ ಗುಡಿ ಬಳಿ ಜಮಾಯಿಸಿದ್ದ ಅಭಿಮಾನಿಗಳು ಕೇಕೆ ಹಾಕಿದರು.
ಪರಪ್ಪನ ಅಗ್ರಹಾರದಲ್ಲಿದ್ದ ಆರೋಪಿ ದರ್ಶನ್ ಅವರಿಗೆ ರಾಜಾತಿಥ್ಯ ಸಿಗುತ್ತಿದೆ ಎನ್ನುವ ಫೋಟೋ ವೈರಲ್ ಆದ ಬೆನ್ನಲ್ಲೇ ಆರೋಪಿಗಳನ್ನು ಬೇರೆ ಬೇರೆ ಕಾರಾಗೃಹಗಳಿಗೆ ಸ್ಥಳಾಂತರ ಮಾಡಲು ಬೆಂಗಳೂರು ನಗರದ 24ನೇ ಎಸಿಎಂಎಂ ನ್ಯಾಯಾಲಯ ಆದೇಶಿಸಿತ್ತು. ನ್ಯಾಯಾಲಯದ ಆದೇಶದಂತೆ ಆರೋಪಿ ನಟ ದರ್ಶನ್ ಅವರನ್ನು ಬಳ್ಳಾರಿಯ ಜೈಲ್ಗೆ ಶಿಫ್ಟ್ ಮಾಡಲಾಗಿದೆ.
ಇದನ್ನೂ ಓದಿ:ಬಳ್ಳಾರಿ ಸೆಂಟ್ರಲ್ ಜೈಲ್ಗೆ ಸ್ಥಳಾಂತರಗೊಳ್ಳಲಿರುವ ದರ್ಶನ್: ಕಾರಾಗೃಹಕ್ಕೆ ಭೇಟಿ ಕೊಟ್ಟ ಎಸ್ಪಿ - SP Visits Ballary Jail