ಬೆಂಗಳೂರು:ನಗರದಪಿ.ಜಿಯೊಂದರೊಳಗೆ ನುಗ್ಗಿ ಯುವತಿಯ ಕತ್ತು ಕೊಯ್ದು ಕೊಲೆ ಮಾಡಿದ್ದ ಆರೋಪಿಯನ್ನ ಕೋರಮಂಗಲ ಠಾಣಾ ಪೊಲೀಸರು ಬಂಧಿಸಿದ್ದಾರೆ. ಮಧ್ಯಪ್ರದೇಶ ಮೂಲದ ಅಭಿಷೇಕ್ ಬಂಧಿತ ಆರೋಪಿ.
ಜುಲೈ 23ರಂದು ಕೋರಮಂಗಲದ ವಿ.ಆರ್. ಲೇಔಟ್‌ನಲ್ಲಿರುವ ಪಿಜಿಯಲ್ಲಿ ಬಿಹಾರ ಮೂಲದ ಕೃತಿ ಕುಮಾರಿ (24) ಎಂಬ ಯುವತಿಯನ್ನು ಹತ್ಯೆಗೈದು ಆರೋಪಿ ಅಭಿಷೇಕ್ ಊರಿಗೆ ಹೋಗಿ, ತನ್ನ ಪೋಷಕರನ್ನು ಸಂಪರ್ಕಿಸಿದ್ದ. ಯುವತಿಯೊಬ್ಬಳನ್ನು ಹತ್ಯೆಗೈದಿರುವುದಾಗಿ ತಿಳಿಸಿದ್ದ. ಮತ್ತೊಂದೆಡೆ ಆರೋಪಿಯ ಪೋಷಕರನ್ನು ಸಂಪರ್ಕಿಸಿದ್ದ ಪೊಲೀಸರು, ಮಧ್ಯಪ್ರದೇಶದ ಸ್ಥಳೀಯ ಪೊಲೀಸರ ಸಹಾಯದಿಂದ ಆತನನ್ನು ವಶಕ್ಕೆ ಪಡೆದು ಬೆಂಗಳೂರಿಗೆ ಕರೆತರುತ್ತಿದ್ದಾರೆ.
ಕೃತಿ ಕುಮಾರಿಯ ಸಹೋದ್ಯೋಗಿ ಮತ್ತು ರೂಮ್‌ಮೇಟ್ ಆಗಿದ್ದ ಯುವತಿ ಹಾಗೂ ಅಭಿಷೇಕ್ ಕೆಲ ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದರು. ಅಭಿಷೇಕ್ ಮಧ್ಯಪ್ರದೇಶದ ಭೋಪಾಲ್ನಲ್ಲಿ ಯಾವುದೇ ಕೆಲಸವಿಲ್ಲದೆ ಖಾಲಿಯಿದ್ದ. ಈತ ಆಗಾಗ ಬೆಂಗಳೂರಿಗೆ ಬಂದು ಪ್ರೇಯಸಿಯನ್ನ ಭೇಟಿಯಾಗಿ ಹೋಗುತ್ತಿದ್ದ. ಕೆಲಸವಿಲ್ಲದೆ ಸುತ್ತಾಡುತ್ತಿದ್ದ ಅಭಿಷೇಕ್ ಹಾಗೂ ಆತನ ಪ್ರೇಯಸಿ ನಡುವೆ ಆಗಾಗ ಜಗಳ ನಡೆಯುತ್ತಿತ್ತು. ಇದರ ಮಧ್ಯೆ ಕೆಲಸಕ್ಕೆ ಸೇರುವಂತೆ ಪ್ರೇಯಸಿ ಒತ್ತಾಯಿಸಿದಾಗ, ಕೆಲಸಕ್ಕೆ ಸೇರಿಕೊಂಡಿರುವುದಾಗಿ ಅಭಿಷೇಕ್ ಸುಳ್ಳು ಹೇಳಿದ್ದನಂತೆ. ಸುಳ್ಳು ಹೇಳಿರುವುದನ್ನ ತಿಳಿದ ಬಳಿಕ ಅಭಿಷೇಕ್‌ನನ್ನ ಆತನ ಪ್ರೇಯಸಿ ನಿರ್ಲಕ್ಷ್ಯಿಸಲಾರಂಭಿಸಿದ್ದಳು. ಇದರಿಂದ ಸಿಟ್ಟಾಗಿದ್ದ ಅಭಿಷೇಕ್ ಆಗಾಗ ಪಿ.ಜಿ ಬಳಿ ಬಂದು ಗಲಾಟೆ ಮಾಡುತ್ತಿದ್ದ. ಹೀಗಾಗಿ ಕೆಲವು ದಿನಗಳ ಹಿಂದಷ್ಟೇ ಕೃತಿ ಕುಮಾರಿಯು ತನ್ನ ಗೆಳತಿಯನ್ನು ಬೇರೊಂದು ಪಿ.ಜಿಗೆ ಶಿಫ್ಟ್ ಮಾಡಿಸಿದ್ದಳು. ಇದರಿಂದ ಅಭಿಷೇಕ್ ಕೃತಿ ಕುಮಾರಿ ಮೇಲೆ ಸಿಟ್ಟಾಗಿದ್ದ.