ಬೆಂಗಳೂರು :ಜೈಲಿನಲ್ಲಿರುವ ನಟ ದರ್ಶನ್ ಜೊತೆ ವಿಡಿಯೋ ಕರೆ ಮಾಡಿ ಮಾತನಾಡಿರುವ ಸಂಬಂಧ ಪ್ರಕರಣದ ತನಿಖೆ ಚುರುಕುಗೊಳಿಸಿರುವ ಪೊಲೀಸರು, ಆರೋಪಿ ಸತ್ಯ ಎಂಬುವನನ್ನ ತೀವ್ರ ವಿಚಾರಣೆಗೊಳಪಡಿಸಿದ್ದಾರೆ.
ಜೈಲಿನಲ್ಲಿ ವಿಡಿಯೋ ಕರೆ ಮಾಡಿರುವ ವಿಡಿಯೋ ವೈರಲ್ ಆಗುತ್ತಿದ್ದಂತೆ ಪರಪ್ಪನ ಅಗ್ರಹಾರ ಠಾಣೆ ಪೊಲೀಸರು ದರ್ಶನ್, ರೌಡಿ ಧರ್ಮ ಹಾಗೂ ಸತ್ಯ ವಿರುದ್ಧ ಪ್ರಕರಣ ದಾಖಲಿಸಿದ್ದರು. ದರ್ಶನ್ ಹಾಗೂ ಧರ್ಮ ಜೊತೆ ಎಷ್ಟು ಬಾರಿ ವಿಡಿಯೋ ಕರೆಯಲ್ಲಿ ಮಾತನಾಡಿದ್ದೆ. ಯಾವಾಗ ಕರೆ ಮಾಡಿದ್ದೆ? ಮೊದಲು ವಿಡಿಯೋ ಕರೆ ಮಾಡಿದವರು ಯಾರು? ಎಂಬುದು ಸೇರಿ ಹಲವು ಪ್ರಶ್ನೆಗಳನ್ನ ಪೊಲೀಸರು ಕೇಳಿದ್ದಾರೆ.
ಇದಕ್ಕೆ ಉತ್ತರಿಸಿರುವ ಆರೋಪಿ ಸತ್ಯ, ನಾನು ಕರೆ ಮಾಡಿಲ್ಲ, ಧರ್ಮನೇ ವಿಡಿಯೋ ಕರೆ ಮಾಡಿರುವುದು ಎಂದು ಹೇಳಿಕೆ ನೀಡಿದ್ದಾನೆ. ಅಲ್ಲದೆ ಮೊಬೈಲ್ ವಶಕ್ಕೆ ಪಡೆದು ಪರಿಶೀಲಿಸಿದಾಗ ವಾಟ್ಸಾಪ್ ಹಿಸ್ಟರಿಯನ್ನ ಡಿಲೀಟ್ ಮಾಡಿರುವುದು ಗೊತ್ತಾಗಿದೆ.
ಸದ್ಯ ರಿಟ್ರೀವ್ ಮಾಡಿ ದತ್ತಾಂಶ ಸಂಗ್ರಹಿಸಲು ಪೊಲೀಸರು ಮುಂದಾಗಿದ್ಧಾರೆ. ಮತ್ತೊಂದೆಡೆ ನ್ಯಾಯಾಂಗ ಬಂಧನದಲ್ಲಿರುವ ದರ್ಶನ್ ಹಾಗೂ ಧರ್ಮನನ್ನ ಬಾಡಿ ವಾರೆಂಟ್ ಪಡೆದು ಇನ್ನಷ್ಟೇ ವಿಚಾರಣೆ ನಡೆಸಲಿದ್ದಾರೆ. ಪರಪ್ಪನ ಅಗ್ರಹಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಹುಳಿಮಾವು ಠಾಣೆ ಇನ್ಸ್ಪೆಕ್ಟರ್ ಕುಮಾರಸ್ವಾಮಿ ಅವರು ತನಿಖಾಧಿಕಾರಿಯಾಗಿದ್ದಾರೆ.
ಇದನ್ನೂ ಓದಿ :ವಿಶೇಷ ಸವಲತ್ತು ಸಂಬಂಧ ದಾಖಲಾದ ಮೂರು ಎಫ್ಐಆರ್ನಲ್ಲಿ ಏನಿದೆ? ಎರಡು ಪ್ರಕರಣದಲ್ಲಿ ನಟ ದರ್ಶನ್ ಎ1 - Actor Darshan