ಕರ್ನಾಟಕ

karnataka

ETV Bharat / state

ಬೆಳಗಾವಿ: ಸರ್ಕಾರಿ ಮೆಡಿಕಲ್​ ಸೀಟು ಕೊಡಿಸುವುದಾಗಿ ನಂಬಿಸಿ ಕೋಟಿ ರೂ. ವಂಚಿಸಿದ ಆರೋಪಿ ಅರೆಸ್ಟ್ - NEET FRAUD - NEET FRAUD

ಸರ್ಕಾರಿ ಮೆಡಿಕಲ್​ ಸೀಟು ಕೊಡಿಸುತ್ತೇನೆಂದು ನಂಬಿಸಿ ಲಕ್ಷಾಂತರ ರೂಪಾಯಿ ವಂಚಿಸಿದ ವಂಚಕನನ್ನು ಬೆಳಗಾವಿ ಮಾರ್ಕೆಟ್ ಪೊಲೀಸರು ಬಂಧಿಸಿದ್ದಾರೆ. ಬಂಧಿತನಿಂದ ಒಟ್ಟು 12,66,900 ಮೌಲ್ಯದ ವಸ್ತುಗಳನ್ನು ವಶಕ್ಕೆ ಪಡೆಯಾಗಿದೆ.

ಅರವಿಂದ ಅರಗೊಂಡ ಬಂಧಿತ ಆರೋಪಿ
ಅರವಿಂದ ಅರಗೊಂಡ ಬಂಧಿತ ಆರೋಪಿ (ETV Bharat)

By ETV Bharat Karnataka Team

Published : Jul 15, 2024, 6:38 PM IST

Updated : Jul 15, 2024, 7:19 PM IST

ಡಿಸಿಪಿ ರೋಹನ್​ ಜಗದೀಶ್ (ETV Bharat)

ಬೆಳಗಾವಿ: ನೀಟ್ ಪರೀಕ್ಷೆಯಲ್ಲಿ ಕಡಿಮೆ ಅಂಕ ಗಳಿಸುತ್ತಿದ್ದ ವಿದ್ಯಾರ್ಥಿಗಳನ್ನೇ ಗುರಿಯಾಗಿಸಿಕೊಂಡು, ಫೋನ್​ ಮಾಡಿ ಸರ್ಕಾರಿ ಮೆಡಿಕಲ್​ ಸೀಟ್​ ಕೊಡಿಸುವುದಾಗಿ ನಂಬಿಸಿ ಲಕ್ಷಾಂತರ ರೂಪಾಯಿ ವಂಚಿಸಿದ ಆರೋಪಿಯನ್ನು ಬೆಳಗಾವಿ ಮಾರ್ಕೆಟ್ ಪೊಲೀಸರು ಬಂಧಿಸಿದ್ದಾರೆ. ಅರವಿಂದ ಅರಗೊಂಡ ಬಂಧಿತ ಆರೋಪಿ.

ಬೆಳಗಾವಿಯ ಕೊಲ್ಹಾಪುರ ಸರ್ಕಲ್​ನಲ್ಲಿ ಆಫೀಸ್ ಮಾಡಿಕೊಂಡಿದ್ದ ಆರೋಪಿ, ನೀಟ್ ಪರೀಕ್ಷೆ ಬರೆದ ವಿದ್ಯಾರ್ಥಿಗಳು ಹಾಗೂ ಅವರ ಪೋಷಕರನ್ನೆ ಟಾರ್ಗೆಟ್ ಮಾಡುತ್ತಿದ್ದ. ಬೆಳಗಾವಿಯಲ್ಲಿ ಸುಮಾರು 10 ಜನರಿಂದ ಬರೋಬ್ಬರಿ 1 ಕೋಟಿ 8 ಲಕ್ಷ ರೂ. ಹಣವನ್ನು ಪಡೆದಿದ್ದ. ಬೆಳಗಾವಿಯಲ್ಲಿ ಅಷ್ಟೇ ಅಲ್ಲದೇ ಮುಂಬೈನಲ್ಲೂ ಬ್ರಾಂಚ್ ಓಪನ್ ಮಾಡಿದ್ದ ಖದೀಮ ನೀಟ್ ಪರೀಕ್ಷೆ ಬರೆದು ಕಡಿಮೆ ಅಂಕ ಪಡೆದವರನ್ನು ಗುರುತಿಸಿ ಅವರಿಗೆ ಸರ್ಕಾರಿ ಕೋಟಾದಡಿ ವೈದ್ಯಕೀಯ ಸೀಟ್ ಕೊಡುವುದಾಗಿ ನಂಬಿಸಿದ್ದ. ಡ್ರೈವರ್ ಮೊಬೈಲ್ ಟ್ರೇಸ್ ಮಾಡಿದ್ದರಿಂದ ವಂಚಕ ಸಿಕ್ಕಿ ಬಿದ್ದಿದ್ದಾನೆ. ಮುಂಬೈಗೆ ಹೋಗಿ ಆರೋಪಿಯನ್ನು ಬಂಧಿಸಿ ಬೆಳಗಾವಿಗೆ ಪೊಲೀಸರು ಕರೆ ತಂದಿದ್ದರು. ಸದ್ಯ ಆರೋಪಿ ಅರವಿಂದ ಅರಗೊಂಡ ನ್ಯಾಯಾಂಗ ಬಂಧನದಲ್ಲಿದ್ದಾನೆ. ಈತನಿಂದ 12 ಲಕ್ಷ ನಗದು, 15 ಕಂಪ್ಯೂಟರ್, 1 ಲ್ಯಾಪಟಾಪ್ ಸೇರಿ ಒಟ್ಟು 12,66,900 ಮೌಲ್ಯದ ವಸ್ತುಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಬೆಳಗಾವಿಯ ಮಾರ್ಕೆಟ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಆರೋಪಿ ಸಿಕ್ಕಿದ್ದು ಹೀಗೆ:ಬೆಳಗಾವಿಯಲ್ಲಿ 10 ಜನರಿಗೆ ಮೋಸ ಮಾಡಿದ್ದ ಆರೋಪಿ ಅರವಿಂದ ಅರಗೊಂಡ ಮುಂಬೈಗೆ ಹಾರಿದ್ದ. ಮುಂಬೈನಲ್ಲಿ ಆಫೀಸ್ ತೆರೆದು ಅಲ್ಲಿಯೂ ನೀಟ್ ಸೀಟ್ ಕೊಡಿಸುವುದಾಗಿ ಮೋಸ ಮಾಡಲು ತಯಾರಿ ನಡೆಸಿದ್ದ. ಅಷ್ಟರಲ್ಲಾಗಲೇ ಅವನ ಜಾಲ ಹಿಡಿದು ಬೆಳಗಾವಿ ಪೊಲೀಸರು ಕಾರ್ಯಾಚರಣೆಗೆ ಇಳಿದಿದ್ದರು. ಆತನ ಪತ್ತೆ ಪೊಲೀಸರಿಗೆ ದೊಡ್ಡ ತಲೆನೋವಾಗಿತ್ತು. ಆತನ ಮೊಬೈಲ್ ನಂಬರ್ ಟ್ರೇಸ್ ಮಾಡೋಣ ಎಂದರೆ ಸಿಮ್ ಬದಲಾಯಿಸುತ್ತಿದ್ದ. ಕೊನೆಗೆ ಪೊಲೀಸರು ಆತನ ಡ್ರೈವರ್ ಮೊಬೈಲ್ ಟ್ರೇಸ್ ಮಾಡಿದಾಗ ಆರೋಪಿ ಬಲೆಗೆ ಬಿದ್ದಿದ್ದಾನೆ.

ಈ ಕುರಿತು ಡಿಸಿಪಿ ರೋಹನ್​ ಜಗದೀಶ್​ ಮಾತನಾಡಿ, ಆರೋಪಿ ನೀಟ್ ಕೌನ್ಸಲಿಂಗ್ ಸೆಂಟರ್ ತೆರೆದಿರುತ್ತಾನೆ. ಒಬ್ಬ ಮ್ಯಾನೇಜರ್, ಟೆಲಿಕಾಲರ್ಸ್ ಮತ್ತು ಸಿಬ್ಬಂದಿ ಸೇರಿ 12 ಜನರನ್ನು ಕೆಲಸಕ್ಕೆ ಇಟ್ಟುಕೊಂಡಿರುತ್ತಾನೆ. ಹೀಗೆ ಇವರೆಲ್ಲಾ ಯಾರು ನೀಟ್ ಪರೀಕ್ಷೆಯಲ್ಲಿ ಕಡಿಮೆ ಅಂಕ ಬಂದಿರುತ್ತದೆಯೋ ಅವರಿಗೆ ದುಡ್ಡು ಕೊಟ್ಟರೆ ನಿಮಗೆ ಮೆಡಿಕಲ್ ಸೀಟ್ ಕೊಡಿಸುತ್ತೇನೆಂದು ನಂಬಿಸಿ ಸುಮಾರು 10 ಜನರಿಗೆ 1 ಕೋಟಿ 8 ಲಕ್ಷ ರೂ. ವಂಚಿಸಿದ್ದಾನೆ. ಹೀಗೆ ಮೋಸ ಹೋದ ಒಬ್ಬರು ಈತನ ವಿರುದ್ಧ ದೂರು ನೀಡಿದ್ದರು. ಇದಷ್ಟೇ ಅಲ್ಲದೇ ಆತನ ವಿರುದ್ಧ ತೆಲಂಗಾಣದ ಪಂಜಾಗುಟ್ಟಾ ಠಾಣೆಯಲ್ಲಿ 7 ಪ್ರಕರಣಗಳು, ಜುಬಿಲಿ ಹಿಲ್ಸ್ ಠಾಣೆಯಲ್ಲಿ 4, ಬೆಂಗಳೂರಿನ ಅಶೋಕ ನಗರ ಠಾಣೆಯಲ್ಲಿ 1, ಆರ್.ಟಿ‌.ನಗರ ಠಾಣೆಯಲ್ಲಿ 1, ಮಧ್ಯಪ್ರದೇಶದ ಭೂಪಾಲ್ ಕ್ರೈಮ್ ಬ್ರ್ಯಾಂಚ್​ನಲ್ಲಿ 1 ಪ್ರಕರಣ ದಾಖಲಾಗಿದೆ. ಅದೇ ರೀತಿ ಮುಂಬೈನಲ್ಲೂ ಕೂಡ ಒಂದು ಆಫೀಸ್ ತೆರೆಯಲು ಸಿದ್ಧತೆ ನಡೆಸಿದ್ದ. ಆರು ತಿಂಗಳಿನಿಂದ ನಮ್ಮ ಪೊಲೀಸರು ಆತನಿಗೆ ಬಲೆ ಬೀಸಿದ್ದರು. ಕೊನೆಗೂ ಆತನ ಡ್ರೈವರ್ ಮೊಬೈಲ್ ಟ್ರೇಸ್ ಮಾಡಿ ಮುಂಬೈನಲ್ಲಿ ಆರೋಪಿಯನ್ನು ಬಂಧಿಸಿ ವಿಚಾರಣೆ ನಡೆಸಿದಾಗ ಪ್ರಕರಣ ಬೆಳಕಿಗೆ ಬಂದಿದೆ ಎಂದು ತಿಳಿಸಿದರು‌.

ಆರೋಪಿ ಅರವಿಂದ ತೆಲಂಗಾಣದ ಹೈದರಾಬಾದ್ ಮೂಲದ ಎಂಬಿಎ ಪದವೀಧರ‌. ಈತ ಬೆಳಗಾವಿಯಲ್ಲಿ ನಕಲಿ ಆಧಾರ್ ಕಾರ್ಡ್, ಬ್ಯಾಂಕ್ ದಾಖಲೆಗಳು ಹಾಗೂ ಅಡ್ರೆಸ್ ಪ್ರೂಫ್ ತೋರಿಸಿ ಆಫೀಸನ್ನು ಬಾಡಿಗೆ ಪಡೆದಿದ್ದ. 2 ಲಕ್ಷ ರೂ.‌ ಫೀಸ್ ಮತ್ತು 8 ಲಕ್ಷ ರೂ. ಹಣವನ್ನು ನೀಟ್ ಸೀಟ್ ಕೊಡಿಸಲು ಪ್ರತಿಯೊಬ್ಬರಿಂದ ಆರೋಪಿ ತೆಗೆದುಕೊಳ್ಳುತ್ತಿದ್ದ. ಸ್ವಲ್ಪ ದಿನ ಆದ ಬಳಿಕ ಸಿಟಿ ಬಿಟ್ಟು ಪರಾರಿಯಾಗುತ್ತಿದ್ದ ಎಂದು ಮಾಹಿತಿ ನೀಡಿದರು.

ಇದನ್ನೂ ಓದಿ:ಮೈಸೂರು: ಬಾಡಿಗೆ ಮನೆ ಕೇಳುವ ನೆಪ, ಮಾಲಕಿಯ ಕೈಕಾಲು ಕಟ್ಟಿ ಚಿನ್ನಾಭರಣ ದೋಚಿದ ದಂಪತಿ ಸೆರೆ - COUPLE ARRESTED FOR THEFT

Last Updated : Jul 15, 2024, 7:19 PM IST

ABOUT THE AUTHOR

...view details