ಆರೋಪಿ ತಾಯಿಯ ಪ್ರತಿಕ್ರಿಯೆ (ಕೃಪೆ: ETV Bharat) ಹುಬ್ಬಳ್ಳಿ:ನ್ಯಾಯಾಲಯ ಏನು ಶಿಕ್ಷೆ ವಿಧಿಸುತ್ತದೆಯೋ ಅದನ್ನು ಅವನೇ ಅನುಭವಿಸಲಿ ಎಂದು ಆರೋಪಿ ವಿಶ್ವ ಅಲಿಯಾಸ್ ಗಿರೀಶನ ತಾಯಿ ಹೇಳಿದ್ದಾರೆ. ನಗರದಲ್ಲಿಂದು ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಅವನು ಮಾಡಿದ್ದು, ಅವನೇ ಅನುಭವಿಸಬೇಕು. ನಾನು ಬಿಡಿಸಿಕೊಂಡು ಬರುವುದಿಲ್ಲ ಎಂದು ಆರೋಪಿ ಗಿರೀಶ್ ತಾಯಿ ಸವಿತಾ ಹೇಳಿದ್ದಾರೆ.
ಅಂಜಲಿಯನ್ನು ಮದುವೆ ಆಗಿದ್ದೀನಿ ಎಂದು ಹೇಳಿದ್ದ. ಆದರೆ ಉಳಿದ ವಿಷಯಗಳ ಬಗ್ಗೆ ನನಗೇನೂ ಗೊತ್ತಿಲ್ಲ. ಎಷ್ಟೇ ಬುದ್ದಿವಾದ ಹೇಳಿದರೂ ಕೇಳ್ತಿರಲಿಲ್ಲ. 6 ತಿಂಗಳಿನಿಂದ ಆತ ನಮ್ಮ ಮನೆಗೆ ಬಂದಿಲ್ಲ. ಈಗ ಮನೆ ಓನರ್ ಕೂಡಾ ನಮ್ಮನ್ನು ಮನೆ ಬಿಡು ಎನ್ನುತ್ತಿದ್ದಾರೆ. ಮುಂದೆ ಏನು ಮಾಡಬೇಕು ಎಂದು ತೋಚುತ್ತಿಲ್ಲ ಎಂದು ಅಳಲು ತೋಡಿಕೊಂಡರು.
ಆದರೆ ಈ ರೀತಿ ಕೃತ್ಯ ಮಾಡಿರುವ ಬಗ್ಗೆ ನನಗೆ ಏನೂ ಗೊತ್ತಿಲ್ಲ. ಅವನು ಮಾಡಿರೋದು ತಪ್ಪು. ಅವನಿಗೆ ನ್ಯಾಯಾಲಯ ಯಾವ ಶಿಕ್ಷೆ ನೀಡುತ್ತದೆಯೋ ನೀಡಲಿ. ಅವನ ತಪ್ಪಿಗೆ ಶಿಕ್ಷೆಯಾಗಲಿ ಎಂದು ಹೇಳಿದರು.
ಓದಿ:ಹುಬ್ಬಳ್ಳಿ-ಧಾರವಾಡದಲ್ಲಿ ಪೊಲೀಸರು ಅಲರ್ಟ್; ಮಹಿಳೆಯರ ರಕ್ಷಣೆಗೆ ಕಾರ್ಯಾಚರಣೆಗಿಳಿಯಲಿದೆ ಚೆನ್ನಮ್ಮ ಪಡೆ - Chennamma Squad
ಸಂಪೂರ್ಣ ವಿವರ: ಪ್ರೀತಿ ನಿರಾಕರಿಸಿದ್ದಕ್ಕೆ ಕೋಪಗೊಂಡ ಯುವಕ ಯುವತಿಯ ಮನೆಗೆ ನುಗ್ಗಿ ಚಾಕುವಿನಿಂದ ಇರಿದು ಕೊಲೆಗೈದ ಘಟನೆ ನಗರದಲ್ಲಿ ಮೇ 15ರ ಬುಧವಾರ ಮುಂಜಾನೆ ನಡೆದಿತ್ತು. ಹುಬ್ಬಳ್ಳಿಯ ವೀರಾಪುರ ಗುಡಿಓಣಿ ನಿವಾಸಿ ಅಂಜಲಿ ಅಂಬಿಗೇರ (20) ಹತ್ಯೆಯಾದ ಯುವತಿ. ವಿಶ್ವ ಅಲಿಯಾಸ್ ಗಿರೀಶ್ ಸಾವಂತ (21) ಕೊಲೆ ಆರೋಪಿ.
ಕೊಲೆ ಮಾಡಿ ಆರೋಪಿ ಪರಾರಿ: ಆರೋಪಿ ವಿಶ್ವ ಕಳೆದ ಹಲವು ದಿನಗಳಿಂದ ಅಂಜಲಿಗೆ ಪ್ರೀತಿಸುವಂತೆ ಪೀಡಿಸುತ್ತಿದ್ದ. ಆದರೆ ,ಆಕೆ ಪ್ರೀತಿ ನಿರಾಕರಿಸಿದ್ದಾಳೆ. ಬುಧವಾರ ಬೆಳಗ್ಗೆ ಗುಡಿಓಣಿಯಲ್ಲಿನ ಮನೆಯಲ್ಲಿ ಯುವತಿಯು ಮಲಗಿದ್ದ ವೇಳೆಯಲ್ಲೇ ವಿಶ್ವ ತೆರಳಿದ್ದ. ಬಳಿಕ ಮನೆಯವರೊಂದಿಗೆ ಜಗಳವಾಡಿ ಯುವತಿಗೆ ಚಾಕು ಇರಿದು ಕೊಲೆ ಮಾಡಿ ಪರಾರಿಯಾಗಿದ್ದನು ಎಂದು ಪೊಲೀಸರು ತಿಳಿಸಿದ್ದರು.
ಟ್ರೈನ್ನಿಂದ ಜಿಗಿದಿದ್ದ ಆರೋಪಿ:ಅಂಜಲಿ ಕೊಲೆ ಮಾಡಿದ ಆರೋಪಿಯನ್ನು ಮೇ 16ರ ಗುರುವಾರ ತಡರಾತ್ರಿ ದಾವಣಗೆರೆಯಲ್ಲಿ ಹುಬ್ಬಳ್ಳಿ-ಧಾರವಾಡ ಅವಳಿ ನಗರ ಪೊಲೀಸರು ಬಂಧಿಸಿದ್ದರು. ಬುಧವಾರ ಮುಂಜಾನೆ ಅಂಜಲಿ ಮನೆಗೆ ನುಗ್ಗಿದ ಆರೋಪಿ ಚಾಕುವಿನಿಂದ ಎದೆ, ಹೊಟ್ಟೆ ಹಾಗೂ ಕುತ್ತಿಗೆ ಇರಿದು ಪರಾರಿಯಾಗಿದ್ದ. ಅಂಜಲಿ ಕೊಲೆಗೈದ ಬಳಿಕ ಆರೋಪಿ ಗಿರೀಶ್ ಹುಬ್ಬಳ್ಳಿಯಿಂದ ರೈಲಿನಲ್ಲಿ ಹೊರಟಿದ್ದನು. ಇದೇ ರೈಲಿನಲ್ಲಿ ಮಹಿಳೆಯೊಬ್ಬರಿಗೆ ಚಾಕು ತೋರಿಸಿ ಹಲ್ಲೆಗೆ ಮುಂದಾಗಿದ್ದ. ಈ ವೇಳೆ ಆತನನ್ನು ಹಿಡಿದ ಸಾರ್ವಜನಿಕರು ಥಳಿಸಲು ಮುಂದಾದರು. ಇದರಿಂದ ತಪ್ಪಿಸಿಕೊಳ್ಳುವ ಭರದಲ್ಲಿ ದಾವಣಗೆರೆ ತಾಲೂಕಿನ ಮಾಯಕೊಂಡ ಸಮೀಪ ಚಲಿಸುತ್ತಿದ್ದ ರೈಲಿನಿಂದ ಜಿಗಿದಿದ್ದಾನೆ.
ಕೊಲೆ ಆರೋಪಿ ಬಂಧನ: ಇದರ ಪರಿಣಾಮ, ತಲೆ ಹಾಗೂ ಮುಖಕ್ಕೆ ಗಂಭೀರ ಸ್ವರೂಪದ ಗಾಯಗಳಾಗಿದ್ದವು. ಯುವಕನನ್ನು ಗಮನಿಸಿದ ಸ್ಥಳೀಯರು ತಕ್ಷಣ ಆಂಬ್ಯುಲೆನ್ಸ್ ಮೂಲಕ ದಾವಣಗೆರೆ ಚಿಗಟೇರಿ ಜಿಲ್ಲಾಸ್ಪತ್ರೆಗೆ ಕರೆತಂದು ದಾಖಲಿಸಿದ್ದರು. ಈ ವಿಚಾರ ದಾವಣಗೆರೆ ರೈಲ್ವೆ ಪೊಲೀಸರಿಗೆ ಗೊತ್ತಾಗಿದೆ. ತಕ್ಷಣ ಸ್ಥಳಕ್ಕೆ ಬಂದ ಪೊಲೀಸರು ಆರೋಪಿಯನ್ನು ವಿಚಾರಿಸಿದ್ದಾರೆ. ಈ ಸಂದರ್ಭದಲ್ಲಿ ಆತ ಕೊಟ್ಟ ಮಾಹಿತಿಯಿಂದ ಪೊಲೀಸರಿಗೆ ಅನುಮಾನ ಮೂಡಿದೆ. ಬಳಿಕ ಮತ್ತಷ್ಟು ವಿಚಾರಣೆ ನಡೆಸಿದ್ದು, ಆರೋಪಿ ಸತ್ಯ ಬಾಯಿಬಿಟ್ಟಿದ್ದಾನೆ. ಪೊಲೀಸರಿಗೆ ಈತನೇ ಅಂಜಲಿಯನ್ನು ಹತ್ಯೆ ಮಾಡಿದ ಆರೋಪಿ ಎಂದು ಗೊತ್ತಾಗಿದೆ. ಕೂಡಲೇ ಆತನನ್ನು ಪೊಲೀಸರು ಬಂಧಿಸಿ, ಹುಬ್ಬಳ್ಳಿ ಪೊಲೀಸರಿಗೆ ಮಾಹಿತಿ ನೀಡಿದ್ದರು. ಹುಬ್ಬಳ್ಳಿ ಪೊಲೀಸರು ಆರೋಪಿಯನ್ನು ತಮ್ಮ ವಶಕ್ಕೆ ತೆಗೆದುಕೊಂಡಿದ್ದರು.
ಪೊಲೀಸ್ ಇನ್ಸ್ಪೆಕ್ಟರ್ ಅಮಾನತು:ಇನ್ನು ಕೊಲೆ ಖಂಡಿಸಿ ಹಲವು ಸಂಘಟನೆಗಳು ಪ್ರತಿಭಟನೆ ನಡೆಸಿದ್ದವು. ಪ್ರಕರಣದ ತನಿಖೆಗಾಗಿ ಎರಡು ವಿಶೇಷ ಪೊಲೀಸ್ ತಂಡಗಳನ್ನು ರಚಿಸಲಾಗಿತ್ತು. ಸದ್ಯ ಆರೋಪಿ ವಿರುದ್ಧ ಆಕ್ರೋಶ ಭುಗಿಲೆದ್ದಿದೆ. ಅಂಜಲಿ ಹತ್ಯೆ ಪ್ರಕರಣದಲ್ಲಿ ಕರ್ತವ್ಯ ನಿರ್ಲಕ್ಷ್ಯ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಬೆಂಡಿಗೇರಿ ಠಾಣೆಯ ಪೊಲೀಸ್ ಇನ್ಸ್ಪೆಕ್ಟರ್ ಹಾಗೂ ಮಹಿಳಾ ಹೆಡ್ ಕಾನ್ಸ್‌ಟೇಬಲ್ ಅಮಾನತುಗೊಳಿಸಿ ಹುಬ್ಬಳ್ಳಿ-ಧಾರವಾಡ ಪೊಲೀಸ್ ಕಮಿಷನರ್ ರೇಣುಕಾ ಸುಕುಮಾರ್ ಆದೇಶಿಸಿರುವುದು ಗೊತ್ತಿರುವ ಸಂಗತಿ.
ಎರಡು ಲಕ್ಷ ರೂಪಾಯಿಯ ಚೆಕ್ ವಿತರಣೆ: ಇಂದು ಸಚಿವ ಸಂತೋಷ್ ಲಾಡ್ ಮತ್ತು ಶಾಸಕ ಪ್ರಸಾದ ಅಬ್ಬಯ್ಯ ಅಂಜಲಿ ಮನೆಗೆ ಭೇಟಿ ನೀಡಿ ಸಾಂತ್ವನ ಹೇಳಿದರು. ಬಳಿಕ ಸಚಿವ ಲಾಡ್ ತಮ್ಮ ಫೌಂಡೇಶನ್ ವತಿಯಿಂದ ಸಂತ್ರಸ್ತ ಕುಟುಂಬಕ್ಕೆ ಎರಡು ಲಕ್ಷ ಚೆಕ್ ನೀಡಿದರು. ಆರೋಪಿ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಮೃತ ಕುಟುಂಬಕ್ಕೆ ಭರವಸೆ ನೀಡಿದರು.