ಕರ್ನಾಟಕ

karnataka

ETV Bharat / state

ಬೈಕ್ ಸರ್ವೀಸ್​ಗೆ ಬಂದ ಗೆಳೆಯನ ಗುದನಾಳಕ್ಕೆ ಏರ್ ಪ್ರೆಶರ್​​ನಿಂದ ಗಾಳಿ ಬಿಟ್ಟ!: ಕರುಳು ಛಿದ್ರವಾಗಿ ಸಾವು - Air Pressure Pipe

ತಮಾಷೆಗಾಗಿ ಗುದದ್ವಾರಕ್ಕೆ ಏರ್​ ಪ್ರೆಶರ್​ ಪೈಪ್​ನಿಂದ ಗಾಳಿ ಬಿಟ್ಟಿದ್ದರಿಂದ ಕರುಳು ಛಿದ್ರವಾಗಿ ಯುವಕ ಸಾವನ್ನಪ್ಪಿರುವ ಘಟನೆ ಬೆಂಗಳೂರಲ್ಲಿ ನಡೆದಿದೆ.

Etv Bharat
Etv Bharat

By ETV Bharat Karnataka Team

Published : Mar 28, 2024, 11:33 AM IST

Updated : Mar 28, 2024, 1:02 PM IST

ಡಿಸಿಪಿ ಲಕ್ಷ್ಮಿ ಪ್ರಸಾದ್

ಬೆಂಗಳೂರು: ಗುದದ್ವಾರಕ್ಕೆ ಏರ್ ಪ್ರೆಶರ್ ಪೈಪ್​ನಿಂದ ಗಾಳಿ ಬಿಟ್ಟ ಪರಿಣಾಮ ಒತ್ತಡ ಹೆಚ್ಚಾಗಿ ಹೊಟ್ಟೆಯೊಳಗಿನ ಕರುಳು ಛಿದ್ರವಾಗಿ ಯುವಕ ಸಾವನ್ನಪ್ಪಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಸಂಪಿಗೆಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮಾರ್ಚ್ 25ರಂದು ನಡೆದ ಘಟನೆಯಲ್ಲಿ ಯೋಗೇಶ್ (24) ಎಂಬಾತ ಸಾವನ್ನಪ್ಪಿದ್ದು, ಮುರುಳಿ ಎಂಬುವನನ್ನು ಪೊಲೀಸರು ಬಂಧಿಸಿದ್ದಾರೆ.

ಮೂಲತಃ ದೇವನಹಳ್ಳಿ ತಾಲೂಕಿನ ಯೇಗೇಶ್ ಥಣಿಸಂದ್ರದಲ್ಲಿ ಅಜ್ಜಿ ಮನೆಯಲ್ಲಿ ವಾಸವಾಗಿದ್ದು, ಫಾರ್ಮಾ ಕಂಪೆನಿಯೊಂದರಲ್ಲಿ ಡೆಲಿವರಿ ಬಾಯ್​ ಆಗಿ ಕೆಲಸ ಮಾಡುತ್ತಿದ್ದ. ತಂದೆ ಹಾಗೂ ಅಕ್ಕನೊಂದಿಗೆ ವಾಸವಾಗಿದ್ದ. ಏಪ್ರಿಲ್​ನಲ್ಲಿ ಯೋಗೇಶ್ ಸಹೋದರಿಯ ವಿವಾಹ ನಿಶ್ಚಯವಾಗಿತ್ತು. ಹೀಗಾಗಿ ಮದುವೆ ಕೆಲಸ ಕಾರ್ಯಗಳಿಗಾಗಿ ಓಡಾಡುತ್ತಿದ್ದರು. ಮಾರ್ಚ್ 25ರ ಸಂಜೆ ಥಣಿಸಂದ್ರದ ಸಿಎನ್ಎಸ್ ಕಾರ್ ಸ್ಪಾ ಸರ್ವೀಸ್ ಸೆಂಟರ್​​​ಗೆ ಬೈಕ್ ಅನ್ನು ಸರ್ವೀಸ್ ಮಾಡಿಸಲು ಹೋಗಿದ್ದ‌. ಈ ವೇಳೆ ಅಲ್ಲಿ ಕೆಲಸ ಮಾಡುತ್ತಿದ್ದ ಮುರುಳಿ ಎಂಬಾತ ಯೋಗೇಶ್​ಗೆ ಸ್ನೇಹಿತನಾಗಿದ್ದ. ಚಡ್ಡಿ ಧರಿಸಿ ನಿಂತಿದ್ದ ಯೋಗೇಶ್‌ನನ್ನು ನೋಡಿದ ಮುರುಳಿ, ತಮಾಷೆಗಾಗಿ ಹಿಂದೆಯಿಂದ ತೆರಳಿ ಏಕಾಏಕಿ ಆತನ ಗುದದ್ವಾರಕ್ಕೆ ಏರ್ ಪ್ರೆಶರ್​​ನಿಂದ ಗಾಳಿ ಬಿಟ್ಟಿದ್ದಾನೆ.

ಗಾಳಿಯ ಒತ್ತಡ ಹೆಚ್ಚಾಗಿ ಹೊಟ್ಟೆಯೊಳಗಿನ ಕರುಳು ಸ್ಫೋಟಗೊಂಡು‌ ಯೋಗೇಶ್ ಪ್ರಜ್ಞೆ ತಪ್ಪಿ ಬಿದ್ದಿದ್ದಾನೆ‌. ಕೂಡಲೇ ಆತನನ್ನು ಮುರುಳಿ ಹಾಗೂ ಇನ್ನಿತರರು ಆಸ್ಪತ್ರೆಗೆ ಸೇರಿಸಿದರೂ ಚಿಕಿತ್ಸೆ ಫಲಕಾರಿಯಾಗದೆ ಯೋಗೇಶ್ ಸಾವನ್ನಪ್ಪಿದ್ದಾನೆ. ಘಟನೆ ಸಂಬಂಧ ಐಪಿಸಿ ಸೆಕ್ಷನ್ 304 ಅಡಿ ಪ್ರಕರಣ ದಾಖಲಿಸಿಕೊಂಡು ಮುರುಳಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಡಿಸಿಪಿ ಲಕ್ಷ್ಮಿ ಪ್ರಸಾದ್ ಹೇಳಿಕೆ:ಯೋಗೇಶ್ ಮತ್ತು ಮುರುಳಿ ಸ್ನೇಹಿತರಾಗಿದ್ದರು. ಯೋಗೇಶ್ ಫಾರ್ಮಾ ಕಂಪನಿಯೊಂದರಲ್ಲಿ ಡೆಲಿವರಿ ಬಾಯ್ ಆಗಿ ಕೆಲಸ ಮಾಡುತ್ತಿದ್ದು, ಮುರುಳಿ ವಾಹನ ಸರ್ವೀಸ್ ಸಂಟರ್​ನಲ್ಲಿ ಕೆಲಸ ಮಾಡುತ್ತಿದ್ದಾನೆ. ಯೋಗೇಶ್ ತನ್ನ ಬೈಕ್ ಸರ್ವೀಸ್​ಗೆಂದು ಬಂದಿದ್ದ. ಈ ವೇಳೆ ಅಲ್ಲೇ ಕೆಲಸ ಮಾಡುತ್ತಿದ್ದ ಮುರುಳಿ ಆಟವಾಡುತ್ತಾ ತಮಾಷೆಗಾಗಿ ತನ್ನ ಗೆಳೆಯ ಯೋಗೇಶ್​ನ ಗುದದ್ವಾರಕ್ಕೆ ಏರ್ ಪ್ರೆಶ್​​ರ್ ಪೈಪ್ ಹಿಡಿದಿದ್ದಾನೆ. ಗಾಳಿಯ ತೀವ್ರ ಒತ್ತಡದಿಂದ ಯೋಗೇಶ್​ ಕರಳಿಗೆ ಹಾನಿಯಾಗಿ ಮೃತಪಟ್ಟಿದ್ದಾನೆ. ಈ ಕುರಿತು ಸಂಪಿಗೆ ಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಆರೋಪಿಯನ್ನು ಬಂಧಿಸಿ ಕ್ರಮ ಕೈಗೊಂಡಿದ್ದೇವೆ ಎಂದು ಈಶಾನ್ಯ ವಿಭಾಗದ ಡಿಸಿಪಿ ಲಕ್ಷ್ಮಿ ಪ್ರಸಾದ್ ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ:ಪಗಾರ ಕೊಡದಿದ್ದಕ್ಕೆ ಬಾಂಬ್ ಇಟ್ಟಿರುವುದಾಗಿ ಹುಸಿ ಕರೆ: ರೆಸ್ಟೋರೆಂಟ್ ಮಾಜಿ ನೌಕರ ವಶಕ್ಕೆ - Hoax Bomb Call

Last Updated : Mar 28, 2024, 1:02 PM IST

ABOUT THE AUTHOR

...view details