ಹೊಸಪೇಟೆ (ವಿಜಯನಗರ): ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಶಕ್ತಿ ಯೋಜನೆ ಮಹಿಳಾ ಪ್ರಯಾಣಿಕರಿಗೆ ಹೆಚ್ಚು ಅನುಕೂಲವಾಗಿದೆ ಎಂಬುದರಲ್ಲಿ ಎರಡು ಮಾತಿಲ್ಲ. ಈ ಯೋಜನೆ ಶುರುವಾದಾಗಿನಿಂದ ಸರ್ಕಾರಿ ಬಸ್ಗಳಲ್ಲಿ ಮಹಿಳಾ ಪ್ರಯಾಣಿಕರ ಸಂಖ್ಯೆ ದುಪ್ಪಟ್ಟು ಆಗಿರೋದು ಕಂಡುಬರುತ್ತಿದೆ. ಆದ್ರೆ ಕೆಲ ಸಂದರ್ಭಗಳಲ್ಲಿ ಮಹಿಳೆಯರು ತಮ್ಮ ವಸ್ತುಗಳನ್ನು ಕಳೆದುಕೊಂಡು ಪೇಚಿಗೆ ಸಿಲುಕಿದ ಪ್ರಕರಣಗಳು ಆಗಾಗ್ಗೆ ವರದಿಯಾಗುತ್ತವೆ. ಅದೇ ರೀತಿಯ ಪ್ರಕರಣ ನಡೆದು ಭಾರಿ ಹೈಡ್ರಾಮಾ ಸೃಷ್ಟಿಯಾಗಿರುವ ಘಟನೆ ಹೊಸಪೇಟೆ ತಾಲೂಕಿನಲ್ಲಿ ಭಾನುವಾರ ನಡೆದಿದೆ.
ಪೊಲೀಸ್ ಠಾಣೆಗೆ ಬಂದ ಬಸ್; 80 ಜನ ಪ್ರಯಾಣಿಕರ ಸಮೇತ ಬಸ್ ನ್ನು ಪೊಲೀಸ್ ಠಾಣೆಗೆ ಕರೆತಂದ ಸಾರಿಗೆ ಇಲಾಖೆಯ ಚಾಲಕ, ನಿರ್ವಾಹಕ, ಬಸ್ ಪ್ರಯಾಣದ ವೇಳೆ ಮಹಿಳೆಯ ವ್ಯಾನಿಟಿ ಬ್ಯಾಗ್ ನಿಂದ ಬರೋಬ್ಬರಿ 9 ತೊಲೆ ಬಂಗಾರದ ಒಡವೆ ಎಗರಿಸಿದ್ದು ಯಾರು ಎಂಬುದನ್ನು ಪತ್ತೆ ಹಚ್ಚಲು ಈ ಹರಸಾಹಸ ಮಾಡಿದರು. ಅಂಬಮ್ಮ ಎಂಬ ಮಹಿಳೆ ಆಭರಣ ಕಳೆದುಕೊಂಡವರು. ಹೊಸಪೇಟೆಯಿಂದ ಕೊಪ್ಪಳ ಕಡೆ ಹೊರಟಿದ್ದಾಗ ಮುನಿರಾಬಾದ್ ಬಳಿ ಈ ಘಟನೆ ನಡೆದಿದೆ.