ತುಳುನಾಡಿನ ದೈವಾರಾಧನೆ ಬಗ್ಗೆ ಜಾನಪದ ವಿದ್ವಾಂಸರಿಂದ ಮಾಹಿತಿ (ETV Bharat) ದಕ್ಷಿಣ ಕನ್ನಡ:ಪ್ರಕೃತಿಯನ್ನು ದೇವರೆಂದು ಆರಾಧಿಸುವ ತುಳುವರ ಸಂಪ್ರದಾಯ, ಸಂಸ್ಕೃತಿ, ಆಚರಣೆಗಳು ಬೇರೆ ಕಡೆಗೆ ಹೋಲಿಸಿದಲ್ಲಿ ಕೊಂಚ ಭಿನ್ನವೇ. ಇಲ್ಲಿ ದೇವರಿಗಿಂತ ಮೊದಲ ಆದ್ಯತೆ ದೈವಗಳಿಗೆ. ಪ್ರಕೃತಿ, ಪ್ರಾಣಿ-ಪಕ್ಷಿಗಳಿಂದ ಮನುಷ್ಯನಿಗೆ ಯಾವುದೇ ತೊಂದರೆಯಾಗದಿರಲಿ ಎನ್ನುವ ಕಾರಣಕ್ಕೆ ತುಳುವರು ಈ ಎಲ್ಲವನ್ನೂ ಆರಾಧಿಸಿಕೊಂಡು ಬಂದಿದ್ದಾರೆ. ಅದೇ ಪ್ರಕಾರ ಕೃಷಿಗೆ, ಮನುಷ್ಯ ಜೀವಕ್ಕೆ ತೊಂದರೆಯಾದ ಸಂದರ್ಭದಲ್ಲಿ ಆರಂಭವಾದ ದೈವಾರಾಧನೆಯಲ್ಲಿ ಪಿಲಿಚಾಮುಂಡಿ ದೈವವೂ ಒಂದು.
ತುಳುನಾಡಿನ ಮಣ್ಣಿನ ಗುಣದಿಂದಲೇ ಇಲ್ಲಿನ ಆಚರಣೆಗಳು ಇತರ ಪ್ರದೇಶಕ್ಕಿಂತ ವಿಶೇಷವೂ, ಭಿನ್ನವೂ ಆಗಿದೆ. ಯಾವಾಗ ಪ್ರಾಣಿ-ಪಕ್ಷಿ, ಪ್ರಕೃತಿಯಿಂದ ಮನುಷ್ಯ ಜೀವಕ್ಕೆ ತೊಂದರೆಯಾಗುತ್ತದೋ, ಆ ಸಂದರ್ಭದಲ್ಲಿ ಅವುಗಳನ್ನೇ ದೈವದ ರೂಪದಲ್ಲಿ ನಂಬಿ, ಅರಾಧಿಸಲು ಆರಂಭಿಸಿದವರು ತುಳುವರು. ಆ ಕಾರಣಕ್ಕಾಗಿಯೇ ತುಳುನಾಡಿನಲ್ಲಿ ಆರಾಧಿಸಲ್ಪಡುವ ಹೆಚ್ಚಿನ ದೈವಗಳು ಮನುಷ್ಯ ಮೂಲ, ಪ್ರಾಣಿ ಮೂಲಗಳಿಂದ ಬಂದಿವೆ.
ಕೃಷಿಗೆ ಮತ್ತು ಜನರ ಜೀವಕ್ಕೆ ಹಂದಿಯಿಂದ ತೊಂದರೆಯಾದ ಸಂದರ್ಭದಲ್ಲಿ 'ಪಂಜುರ್ಲಿ' ಎನ್ನುವ ದೈವದ ಆರಾಧನೆ ನಡೆಯುತ್ತದೆ. ಮಾತೃಪ್ರಧಾನವಿರುವ ಕುಟುಂಬದಲ್ಲಿ ಹೆಚ್ಚಾಗಿ ಮೂಲದೈವದ ರೂಪದಲ್ಲಿ ಪಂಜುರ್ಲಿ ಆರಾಧನೆ ನಡೆಯುತ್ತದೆ. ಅದರ ಜೊತೆಗೆ ಕಲ್ಲುರ್ಟಿ ದೈವವೂ ಇದ್ದು, ಅಣ್ಣ-ತಂಗಿಯರ ಕಲ್ಪನೆಯಲ್ಲಿಯೂ ಆರಾಧನೆ ನಡೆಯುತ್ತದೆ. ಅದೇ ಪ್ರಕಾರ ಒಂದು ಸಂದರ್ಭದಲ್ಲಿ ಹುಲಿಯಿಂದ ಸಮಸ್ಯೆಯಾದ ಸಂದರ್ಭದಲ್ಲಿ ಹುಲಿಯನ್ನು ದೈವರೂಪವಾಗಿ ಆರಾಧಿಸಿ ಹುಲಿಯಿಂದ ಯಾವುದೇ ತೊಂದರೆಯಾಗದಿರಲಿ ಎನ್ನುವ ಕಲ್ಪನೆಯಲ್ಲಿ ಈ 'ಪಿಲಿಚಾಮುಂಡಿ' ದೈವದ ಆರಾಧನೆ ಆರಂಭವಾಗಿದೆ.
ಪಿಲಿ ಚಾಮುಂಡಿ ದೈವವು ರಾಜನ್ ದೈವವಾಗಿ ಗುರುತಿಸಿಕೊಂಡಿದ್ದು, ಆ ಊರಿಗೆ ಪಿಲಿಚಾಮುಂಡಿ ದೈವವೇ ಪ್ರಧಾನ ದೈವವಾಗಿ ಆರಾಧಿಸಲ್ಪಡುತ್ತದೆ. ಹೆಚ್ಚಾಗಿ ಗುತ್ತಿನ ಮನೆಗಳಲ್ಲಿ ಈ ದೈವ ಆರಾಧನೆ ಮತ್ತು ನರ್ತನ ಸೇವೆ ನಡೆಯುತ್ತದೆ. ತುಳುವ ಅತ್ಯಂತ ನಂಬಿಕೆಯ ದೈವಗಳಲ್ಲಿ ಒಂದಾಗಿರುವ 'ಪಿಲಿಚಾಮುಂಡಿ' ದೈವದ ನರ್ತನ ಸೇವೆ ಸಂದರ್ಭದಲ್ಲಿ ಹೆಚ್ಚಿನ ಸಂಖ್ಯೆಯ ಭಕ್ತಾಧಿಗಳೂ ಭಾಗವಹಿಸಿ ದೈವದ ಕೃಪೆಗೆ ಪಾತ್ರರಾಗುತ್ತಾರೆ.
ಇದನ್ನೂ ಓದಿ:ಕುಟುಂಬ ಸಮೇತ ಪ್ರಸಿದ್ಧ ಯಾತ್ರಾ ಸ್ಥಳಗಳಿಗೆ ಭೇಟಿ ನೀಡಿದ ನಟ ರಿಷಬ್ ಶೆಟ್ಟಿ - Rishab Shetty Family Photos