ಆನೇಕಲ್: ಬಟ್ಟೆ ಒಗೆಯುವ ವಿಚಾರಕ್ಕೆ ಇಬ್ಬರು ಸ್ನೇಹಿತರ ನಡುವಿನ ಕಿತ್ತಾಟ ಕೊಲೆಯಲ್ಲಿ ಅಂತ್ಯವಾದ ಘಟನೆ ಆನೇಕಲ್ ಭಾಗದ ಸಿದ್ದನಪಾಳ್ಯದಲ್ಲಿ ತಡರಾತ್ರಿ ನಡೆದಿದೆ. ಸಿದ್ದನಪಾಳ್ಯದ ಮದರ್ ಇಂಡಿಯಾ ಎನ್ನುವ ಜೆಸಿಬಿ ಬಿಡಿ ಭಾಗಗಳನ್ನು ತಯಾರಿಸುವ ಕಂಪನಿಯಲ್ಲಿ ಕೂಲಿ ಕಾರ್ಮಿಕನಾಗಿದ್ದ ಬಿಹಾರ ಮೂಲದ ಗಯಾ ಜಿಲ್ಲೆ ನಿತೀಶ್ ಕುಮಾರ್ (23) ಕೊಲೆಯಾದ ವ್ಯಕ್ತಿ.
ಬಟ್ಟೆ ಒಗೆಯುವ ವಿಚಾರಕ್ಕೆ ಸ್ನೇಹಿತರಿಬ್ಬರ ನಡುವೆ ಗಲಾಟೆ: ಒಬ್ಬನ ಕೊಲೆಯಲ್ಲಿ ಅಂತ್ಯ (ETV Bharat) ಘಟನೆ ಬಗ್ಗೆ ಬೆಂಗಳೂರು ಗ್ರಾಮಾಂತರ ಎಸ್ಪಿ ಸಿ.ಕೆ.ಬಾಬ ಮಾಹಿತಿ ನೀಡಿದ್ದು, "ಆನೇಕಲ್ ಠಾಣೆಯ ವ್ಯಾಪ್ತಿಯ ಸಿದ್ದನಪಾಳ್ಯದಲ್ಲಿ ಸೋಮವಾರ ತಡರಾತ್ರಿ ಮದರ್ ಇಂಡಿಯಾ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಕಾರ್ಮಿಕನೊಬ್ಬನನ್ನು ಕೊಲೆ ಮಾಡಲಾಗಿದೆ. ಈ ಕಂಪನಿಯಲ್ಲಿ ಕೆಲಸಕ್ಕೆ ಎಂದು ಬೇರೆಡೆಯಿಂದ ಬಂದವರು ಇಲ್ಲಿ ವಾಸವಾಗಿದ್ದಾರೆ.
ಭಾನುವಾರ ದಿವಸ ಕೊಲೆಯಾದ ವ್ಯಕ್ತಿ ಹಾಗೂ ಕೊಲೆ ಮಾಡಿದ ವ್ಯಕ್ತಿಗೆ ಬಟ್ಟೆ ಒಗೆಯುವ ವಿಚಾರಕ್ಕೆ ವಾಗ್ವಾದವಾಗಿದೆ. ಮಂಗಳವಾರ ರಾತ್ರಿ ಎಲ್ಲರೂ ಮಲಗಿದ್ದಂತಹ ಸಂದರ್ಭದಲ್ಲಿ ಪಕ್ಕದಲ್ಲೇ ಇದ್ದಂತಹ ಕಲ್ಲನ್ನು ಮಲಗಿದ್ದ ನಿತೀಶ್ ಕುಮಾರ್ ತಲೆ ಮೇಲೆ ಎತ್ತಿ ಹಾಕಿ ಪರಾರಿಯಾಗಿದ್ದ. ಇಂದು ಬೆಳಗ್ಗೆ ಆಸ್ಪತ್ರೆಯಲ್ಲಿ ಆತ ಸಾವನ್ನಪ್ಪಿರುವುದಾಗಿ ಘೋಷಿಸಿದ್ದಾರೆ. ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದೇವೆ. ಕೊಲೆಯಾದ ವ್ಯಕ್ತಿ ಬಿಹಾರದವನಾಗಿದ್ದು, ಆರೋಪಿ ಸೋಮನಾಥ್ (24) ಜಾರ್ಖಂಡ್ ಮೂಲದವನು. ಆತನನ್ನು ಈಗಾಗಲೇ ಬಂಧಿಸಿದ್ದು, ಮುಂದಿನ ತನಿಖೆ ಕೈಗೊಳ್ಳುತ್ತೇವೆ." ಎಂದು ತಿಳಿಸಿದರು.
ಇದನ್ನೂ ಓದಿ:ಕಲಬುರಗಿ: ಮಗನನ್ನು ಶಾಲೆಗೆ ಬಿಟ್ಟು ಬರುತ್ತಿದ್ದ ಗ್ರಾ.ಪಂ ಮಾಜಿ ಉಪಾಧ್ಯಕ್ಷನಿಗೆ ಗುಂಡಿಕ್ಕಿ ಕೊಲೆ - ALANDA MURDER