ಕರ್ನಾಟಕ

karnataka

ETV Bharat / state

ದಕ್ಷಿಣ ಕನ್ನಡ: ಸಾವಿರಕ್ಕೂ ಹೆಚ್ಚು ವಿದೇಶಿ ಹಣ್ಣಿನ ಗಿಡಗಳನ್ನು ಬೆಳೆದ ಪ್ರಗತಿಪರ ಕೃಷಿಕ - ಅನಿಲ್ ಬಳಂಜ

ಪ್ರಗತಿಪರ ಕೃಷಿಕರೊಬ್ಬರು ತಮ್ಮ ತೋಟದಲ್ಲಿ ಸಾವಿರಕ್ಕೂ ಹೆಚ್ಚು ವಿದೇಶಿ ಹಣ್ಣುಗಳ ಗಿಡಗಳನ್ನು ಬೆಳೆದು ಯಶಸ್ವಿಯಾಗಿ ಇತರರಿಗೆ ಮಾದರಿಯಾಗಿದ್ದಾರೆ.

a-progressive-agriculturist-grew-more-than-a-thousand-variety-fruit-trees-in-mangaluru
ದಕ್ಷಿಣ ಕನ್ನಡ: ಸಾವಿರಕ್ಕೂ ಹೆಚ್ಚು ವಿದೇಶಿ ಹಣ್ಣಿನ ಗಿಡಗಳನ್ನು ಬೆಳೆದ ಪ್ರಗತಿಪರ ಕೃಷಿಕ

By ETV Bharat Karnataka Team

Published : Jan 27, 2024, 8:17 PM IST

Updated : Jan 27, 2024, 8:35 PM IST

ವಿದೇಶಿ ಹಣ್ಣಿನ ಗಿಡಗಳನ್ನು ಬೆಳೆದ ಪ್ರಗತಿಪರ ಕೃಷಿಕ

ಮಂಗಳೂರು: ಕೃಷಿ ಚಟುವಟಿಕೆ ನಡೆಸುವ ಕೃಷಿಕರು ಒಂದೇ ರೀತಿಯ ಬೆಳೆಗಳಿಗೆ ಪ್ರಾಮುಖ್ಯತೆ ಕೊಡುತ್ತಾರೆ. ಆದರೆ, ದಕ್ಷಿಣ ಕನ್ನಡ ಜಿಲ್ಲೆಯ ಪ್ರಗತಿಪರ ಕೃಷಿಕರೊಬ್ಬರು ತಮ್ಮ ತೋಟದಲ್ಲಿ ಸಾವಿರಕ್ಕೂ ಹೆಚ್ಚು ವಿದೇಶಿ ಹಣ್ಣುಗಳ ಗಿಡಗಳನ್ನು ಬೆಳೆದು ಯಶಸ್ಸು ಕಂಡಿದ್ದಾರೆ. ಹೌದು, ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಬಳಂಜ ಗ್ರಾಮದ ಅನಿಲ್ ಬಳಂಜ ಈ ಸಾಧನೆ ಮಾಡಿದ್ದಾರೆ. ವಿದೇಶಿ ಮತ್ತು ಉಷ್ಣವಲಯದ ಹಣ್ಣುಗಳಿಗೆ ದೇಶದಲ್ಲಿ ಭಾರಿ ಬೇಡಿಕೆಯಿದೆ. ಈ ಹಿನ್ನೆಲೆಯಲ್ಲಿ ಅನಿಲ್ ಬಳಂಜ ಅವರು ಕಳೆದ ಎರಡು ದಶಕಗಳಿಂದ ಉಷ್ಣವಲಯದ ಮತ್ತು ವಿದೇಶಿ ಹಣ್ಣುಗಳ ಕೃಷಿಯಲ್ಲಿ ತೊಡಗಿಸಿಕೊಂಡಿದ್ದಾರೆ. ಅದನ್ನು ಅವರು ತಮ್ಮ ಹವ್ಯಾಸವನ್ನಾಗಿ ಮಾಡಿಕೊಂಡಿದ್ದಾರೆ.

ಅನಿಲ್ ಬಳಂಜ ಅವರು ತಮ್ಮ ಕೃಷಿ ತೋಟದಲ್ಲಿ 1500ಕ್ಕೂ ಹೆಚ್ಚು ವಿದೇಶಿ ಮತ್ತು ಉಷ್ಣವಲಯದ ಹಣ್ಣುಗಳ ಗಿಡಗಳನ್ನು ನೆಟ್ಟಿದ್ದಾರೆ. ಅವರು ಪ್ರಪಂಚದಾದ್ಯಂತದ ಹಣ್ಣುಗಳ ಗಿಡಗಳನ್ನು ಕರಾವಳಿ ಪ್ರದೇಶದ ಹವಾಮಾನಕ್ಕೆ ಸೂಕ್ತವಾಗಿರುವುದನ್ನು ಗುರುತಿಸಿ ಬೆಳೆಸುತ್ತಿದ್ದಾರೆ. ಅನಿಲ್ ಅವರು ಪಿಯುಸಿ ಮುಗಿಸಿದ ನಂತರ ಹವ್ಯಾಸವಾಗಿ ಉಷ್ಣವಲಯದ ಮತ್ತು ವಿದೇಶಿ ಹಣ್ಣುಗಳನ್ನು ಬೆಳೆಯಲು ಮುಂದಾದರು. ಇವರು ಪ್ರಪಂಚದಾದ್ಯಂತ ವಿವಿಧ ಹಣ್ಣುಗಳ ಸಸಿಗಳನ್ನು ಸಂಗ್ರಹಿಸುತ್ತಿದ್ದಾರೆ. ಬ್ರೆಜಿಲ್, ಥಾಯ್ಲೆಂಡ್​, ಇಂಡೋನೇಷ್ಯಾ ಮತ್ತು ಪ್ರಪಂಚದ ಇತರ ಭಾಗಗಳಿಂದ ಬೀಜಗಳನ್ನು ಸಂಗ್ರಹಿಸಿ ತಮ್ಮ ತೋಟದಲ್ಲಿ ಬೆಳೆಸುತ್ತಿದ್ದಾರೆ. ಅವುಗಳು ಹಣ್ಣು ಬಿಟ್ಟ ಬಳಿಕ ತಮ್ಮ ನರ್ಸರಿ ಮೂಲಕ ರೈತರಿಗೆ ಗಿಡಗಳನ್ನು ಮಾರಾಟ ಮಾಡುತ್ತಿದ್ದಾರೆ.

ಇವರ ತೋಟದಲ್ಲಿ ಬ್ರೆಜಿಲ್​ನ ಬಾಕುಪರಿ, ಮಲೇಷ್ಯಾದ ದಾರೆಪುಳಿ, ಥಾಯ್ಲೆಂಡ್​​ನ ಹ್ಯಾಂಡ್ ಪುಲ್ ಫೈನಾಫಲ್, ಜೈಂಟ್ ಮೆಡುಸ ಫೈನಾಫಲ್, ರಾಮ್ ಭಾಯಿ ಹಣ್ಣು, ಜಪಾನ್​ನ ಬ್ಲ್ಯಾಕ್ ಬೆರಿ ಜಾಮ್ ಫ್ರುಟ್, ಬ್ರೆಜಿಲ್​ನ ಕೆಡೆರ್ಬಿ ಚೆರಿ, ಇಂಡೋನೇಷ್ಯಾದ ಪೆಪಿಸಂಗನ್, ಬ್ರೆಜಿಲ್​ನ ಅಕೈ ಬೆರಿ, ಮಲೇಷ್ಯಾದ ರಾಮ್ ಭೂತನ್, ಇಂಡೋನೇಷ್ಯಾದ ಬ್ಲೂ ಜಾವ ಬನಾನ ಮೊದಲಾದ ಗಿಡಗಳನ್ನು ಬೆಳೆಯಲಾಗಿದೆ.

ಪ್ರಪಂಚದಾದ್ಯಂತ ಸುತ್ತಾಡಿ ಹಣ್ಣಿನ ಗಿಡಗಳ ಖರೀದಿ: ಈ ಬಗ್ಗೆ ಮಾತನಾಡಿದ ಅನಿಲ್ ಬಳಂಜ ಅವರು, “ನಾನು ಮುಖ್ಯವಾಗಿ ರಬ್ಬರ್ ಮತ್ತು ಅಡಕೆಯನ್ನು ಬೆಳೆಸುತ್ತೇನೆ. ಆದರೆ, ಉಷ್ಣವಲಯದ ಹಣ್ಣುಗಳನ್ನು ಬೆಳೆಯುವುದು ನನ್ನ ಹವ್ಯಾಸವಾಗಿದೆ. ವಿದೇಶಿಯ ಸಾವಿರಕ್ಕೂ ಅಧಿಕ‌ ಬಗೆಯ ಹಣ್ಣುಗಳನ್ನು ಬೆಳೆದಿದ್ದೇನೆ. ನಮ್ಮ ದೇಶಕ್ಕೆ ಹೊಸತೊಂದನ್ನು ಕೊಡಬೇಕು ಎಂಬ ನಿಟ್ಟಿನಲ್ಲಿ ಹಣ್ಣಿನ ಗಿಡಗಳ ಸಂಗ್ರಹ ಮಾಡಲು ಆರಂಭಿಸಿದೆ. ಪ್ರಪಂಚದಾದ್ಯಂತ ಸುತ್ತಾಡಿ ಹೊಸ ಹೊಸ ಹಣ್ಣಿನ ಗಿಡಗಳನ್ನು ಖರೀದಿಸಿ ಸಾವಿರಕ್ಕೂ ಹೆಚ್ಚು ಹಣ್ಣಿನ ತಳಿಗಳನ್ನು ಇಲ್ಲಿ ಬೆಳೆಸುತ್ತಿದ್ದೇವೆ. ಮಾವಿನಲ್ಲಿ 100ಕ್ಕೂ ಮಿಕ್ಕಿ ಜಾತಿಗಳು, ವಿವಿಧ ಜಾತಿಯ ಹಲಸಿನ ಮರಗಳು, ನೂರಾರು ಹಣ್ಣಿನ ಗಿಡಗಳನ್ನು ಇಲ್ಲಿ ನಾಟಿ ಮಾಡಿದ್ದೇವೆ" ಎಂದರು.

ಅಡಕೆಗೆ ಬೆಲೆ ಕುಸಿತದ ಮತ್ತು ನಿಷೇಧದ ಆತಂಕದ ನಡುವೆ ಅನಿಲ್ ಉಷ್ಣವಲಯದ ಹಣ್ಣುಗಳನ್ನು ಬೆಳೆಯಲು ನಿರ್ಧರಿಸಿದರು. ಹವಾಮಾನ ಪರಿಸ್ಥಿತಿ ಮತ್ತು ಸಸ್ಯದ ಗುಣಮಟ್ಟವನ್ನು ಅಧ್ಯಯನ ಮಾಡಿದ ನಂತರ ಅನಿಲ್ ಈಗ ರೈತರಿಗೆ ಹಣ್ಣುಗಳ ಸಸಿಗಳನ್ನು ಒದಗಿಸುತ್ತಿದ್ದಾರೆ. ಈ ಮೂಲಕ ವಿದೇಶಿ ಹಣ್ಣುಗಳ ಬೆಳೆಯಲು ಪ್ರೇರಣೆ ನೀಡುತ್ತಿದ್ದಾರೆ.

ಇದನ್ನೂ ಓದಿ:ಸರ್ಕಾರಿ ಕೆಲಸ ಸಿಗಲಿಲ್ಲ; ಪುಷ್ಪ ಕೃಷಿಯಿಂದ ಲಕ್ಷಾಂತರ ರೂಪಾಯಿ ಆದಾಯ ಗಳಿಸಿ ಮಾದರಿಯಾದ ಯುವ ರೈತ!

Last Updated : Jan 27, 2024, 8:35 PM IST

ABOUT THE AUTHOR

...view details