ಯಲಹಂಕ: ಕೌಟುಂಬಿಕ ಕಲಹದಿಂದ ನೊಂದ ವ್ಯಕ್ತಿ ರೈಲಿಗೆ ತಲೆಕೊಟ್ಟು ಆತ್ಮಹತ್ಯೆಗೆ ಯತ್ನಿಸಿದ್ದು, ಸುದ್ದಿ ತಿಳಿದ 20 ನಿಮಿಷದಲ್ಲಿ ವ್ಯಕ್ತಿಯನ್ನು ಪೊಲೀಸರು ಪತ್ತೆ ಮಾಡಿ ರಕ್ಷಿಸಿರುವ ಘಟನೆ ಯಲಹಂಕದಲ್ಲಿ ಗುರುವಾರ ರಾತ್ರಿ ನಡೆದಿದೆ.
ಯಲಹಂಕ ತಾಲೂಕು ರಾಜಾನುಕುಂಟೆ ಪೊಲೀಸ್ ಠಾಣಾ ವ್ಯಾಪ್ತಿಯ ಗೋಪಾಲ್ (27) ಎಂಬವರು ಆತ್ಮಹತ್ಯೆಗೆ ಯತ್ನಿಸಿದವರು. ಎಎಸ್ಐ ನಾಗೇಶ್ ಮತ್ತು ಎಸಿಪಿ ಸಂಜೀವ್ ಕುಮಾರ್ ಅವರು ಆತ್ಮಹತ್ಯೆಗೆ ಮುಂದಾಗಿದ್ದ ವ್ಯಕ್ತಿಯ ಜೀವ ರಕ್ಷಣೆ ಮಾಡಿದ್ದಾರೆ. ರಕ್ಷಣೆ ವೇಳೆ ಪೊಲೀಸ್ ಸಿಬ್ಬಂದಿಗೆ ಗಾಯವಾಗಿದೆ.
ಅದ್ದಿಗಾನಹಳ್ಳಿಯ ನಿವಾಸಿ ಗೋಪಾಲ್ ರೈಲಿಗೆ ತಲೆ ಕೊಟ್ಟು ಆತ್ಮಹತ್ಯೆ ಮಾಡಿಕೊಳ್ಳಲು ಹೋಗಿದ್ದರು. ಸಾಯುವ ಮುನ್ನ ತನ್ನ ತಂಗಿಗೆ ಫೋನ್ ಮಾಡಿ ಆತ್ಮಹತ್ಯೆ ಮಾಡುಕೊಳ್ಳುತ್ತಿರುವುದಾಗಿ ಹೇಳಿದ್ದರು. ತಕ್ಷಣವೇ ಅವರು 112 ಪೊಲೀಸರಿಗೆ ಕರೆ ಮಾಡಿ ವಿಷಯ ತಿಳಿಸಿದ್ದಾರೆ. ಗೋಪಾಲ್ ಪತ್ತೆಗೆ ಮುಂದಾದ ರಾಜಾನುಕುಂಟೆ ಪೊಲೀಸರು ಆತನ ಮೊಬೈಲ್ ಲೊಕೇಶನ್ ಪತ್ತೆ ಮಾಡಿ, ಸ್ಥಳಕ್ಕೆ ಹೋಗಿದ್ದಾರೆ. ಪೊಲೀಸರನ್ನು ಕಂಡ ಆತ ರೈಲ್ವೆ ಟ್ರ್ಯಾಕ್ ಮೇಲೆ ಓಡಲು ಪ್ರಾರಂಭಿಸಿದ್ದಾನೆ. ಆತನ ಬೆನ್ನತ್ತಿದ ಪೊಲೀಸರು ಆತ್ಮಹತ್ಯೆ ಯತ್ನವನ್ನು ತಡೆದಿದ್ದಾರೆ.
ಇದನ್ನೂ ಓದಿ:ಸೀರೆ, ಲಿಪ್ಸ್ಟಿಕ್, ಮೇಕಪ್ನಲ್ಲಿ ಯುವಕನ ಶವ ಪತ್ತೆ; ಮಸ್ಸೂರಿ ಐಎಎಸ್ ಅಕಾಡೆಮಿಯಲ್ಲಿ ವಿಚಿತ್ರ ಆತ್ಮಹತ್ಯೆ!