ಬೆಳಗಾವಿ:ಪಾರ್ಟಿ ಮಾಡೋಣ ಬಾ ಎಂದು ಕರೆದು ನಶೆಯಲ್ಲಿದ್ದಾಗಲೇ ಕುತ್ತಿಗೆಗೆ ಬಟ್ಟೆ ಬಿಗಿದು ಉಸಿರುಗಟ್ಟಿಸಿ ವ್ಯಕ್ತಿಯೋರ್ವನನ್ನು ಕೊಲೆ ಮಾಡಿ ಆರೋಪಿಗಳು ಪರಾರಿಯಾಗಿರುವ ಘಟನೆ ಯರಗಟ್ಟಿ ತಾಲೂಕಿನ ಬೆನಕಟ್ಟಿ ಗ್ರಾಮದಲ್ಲಿ ನಡೆದಿದೆ. ಕಾಡಪ್ಪ ಶಿಗರಸಂಗಿ(42) ಕೊಲೆಯಾದ ವ್ಯಕ್ತಿ. ನಾಗಪ್ಪ ರೈನಾಪುರ ಕಾಡಪ್ಪನನ್ನು ಕೊಲ್ಲಲು ಸುಪಾರಿ ಕೊಟ್ಟ ಆರೋಪಿ.
ಕೊಲೆಯಾದ ಕಾಡಪ್ಪನ ಪತ್ನಿಯ ಮೇಲೆ ವ್ಯಾಮೋಹ ಇಟ್ಟುಕೊಂಡಿದ್ದ ನಾಗಪ್ಪನು ಕಾಡಪ್ಪನನ್ನು ಕೊಲ್ಲಲು 2.5 ಲಕ್ಷ ರೂ. ಸುಪಾರಿ ಕೊಟ್ಟಿದ್ದ. ಕೊಲೆ ಮಾಡಲು ನಾಗಪ್ಪ ವ್ಯವಸ್ಥಿತ ಪ್ರೀ ಪ್ಲಾನ್ ಮಾಡಿದ್ದ. ನಾಗಪ್ಪ ಪ್ರೀ ಪ್ಲಾನ್ ಮಾಡಿಕೊಂಡು ಓಡಾಡಿದ್ದ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿವೆ.
ಬೆನಕಟ್ಟಿಯ ಪೆಟ್ರೋಲ್ ಪಂಪ್ನಲ್ಲಿ ನಾಗಪ್ಪನ ಚಲನವಲನ ಸೆರೆಯಾಗಿದ್ದು, ತಾನು ಸುಪಾರಿ ಕೊಟ್ಟ ಆರೋಪಿ ಲಕ್ಷ್ಮಣ ಜೊತೆ ನಾಗಪ್ಪ ಕೊನೆಯದಾಗಿ ಕಾಣಿಸಿಕೊಂಡಿದ್ದ. ಮೊದಲು ಲಕ್ಷ್ಮಣ ಬಂಧಿಸಿ ಪೊಲೀಸರು ವಿಚಾರಣೆ ನಡೆಸಿದಾಗ ಕೊಲೆಯ ಸಂಪೂರ್ಣ ಸಂಚು ಬಯಲಾಗಿದೆ. ಸದ್ಯ ಐವರು ಆರೋಪಿಗಳ ಪೈಕಿ ಲಕ್ಷ್ಮಣ, ವಿಠ್ಠಲ್ ಎಂಬ ಇಬ್ಬರು ಆರೋಪಿಗಳನ್ನು ಬಂಧಿಸಿದ್ದು, ತಲೆಮರೆಸಿಕೊಂಡಿರುವ ನಾಗಪ್ಪ, ಶಿವಾನಂದ, ಬಸವರಾಜನ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ.
ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಭೀಮಾಶಂಕರ ಗುಳೇದ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ಮುರಗೋಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ:ವಿದ್ಯಾರ್ಥಿನಿಯ ಮುಖಕ್ಕೆ ಕತ್ತರಿಯಿಂದ ಚುಚ್ಚಿ ಹಲ್ಲೆ; ಆರೋಪಿ ಅರೆಸ್ಟ್