ಮಂಗಳೂರು: ಬಾಲಕಿ ಮೇಲೆ ಅತ್ಯಾಚಾರ ಎಸಗಿದ ಅಪರಾಧಿಗೆ 20 ವರ್ಷಗಳ ಕಠಿಣ ಜೈಲು ಶಿಕ್ಷೆ ಮತ್ತು 50 ಸಾವಿರ ರೂಪಾಯಿ ದಂಡ ವಿಧಿಸಿ ಇಲ್ಲಿನ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ, ಎಫ್.ಟಿ.ಎಸ್.ಸಿ-2 ಪೊಕ್ಸೋ ವಿಶೇಷ ನ್ಯಾಯಾಲಯ ಶನಿವಾರ ತೀರ್ಪು ನೀಡಿತು.
ಬೆಳ್ತಂಗಡಿ ತಾಲೂಕು ಸವಣಾಲು ಗ್ರಾಮದ 31 ವರ್ಷದ ವ್ಯಕ್ತಿ ಶಿಕ್ಷೆಗೊಳಗಾದವ. ಅಪರಾಧಿಯು ಬಾಲಕಿಯ ದೂರದ ಸಂಬಂಧಿ. ಈತ ಬಾಲಕಿಯ ತಾಯಿಯ ಮೊಬೈಲ್‌ಗೆ ಕರೆ ಮಾಡಿ ಬಾಲಕಿಯೊಂದಿಗೆ ಮಾತನಾಡುತ್ತಿದ್ದ. ಬಳಿಕ ಫೇಸ್‌ಬುಕ್‌ನಲ್ಲಿ ಸಂಪರ್ಕ ಇಟ್ಟುಕೊಂಡಿದ್ದ. 2022ರ ಆಗಸ್ಟ್ 9ರಂದು ಬೆಳಗ್ಗೆ 10 ಗಂಟೆಗೆ ಬಾಲಕಿಯ ಮನೆಗೆ ಬಂದಿದ್ದಾನೆ. ಮನೆಯಲ್ಲಿ ಯಾರೂ ಇಲ್ಲದೆ ಇದ್ದುದನ್ನು ಗಮನಿಸಿ, ಮದುವೆಯಾಗುವುದಾಗಿ ನಂಬಿಸಿ ಅತ್ಯಾಚಾರ ಎಸಗಿದ್ದ.
ಬಾಲಕಿಯ ಮನೆಯಿಂದ ತೆರಳಿದ ಬಳಿಕ ಫೇಸ್‌ಬುಕ್‌ನಲ್ಲಿ ಅಶ್ಲೀಲ ಸಂದೇಶ ರವಾನಿಸಿದ್ದಾನೆ. ನಂತರ ಮತ್ತೊಂದು ಸಂದೇಶದಲ್ಲಿ, "ನಿನ್ನೆ ನಾನು ದೊಡ್ಡ ತಪ್ಪು ಮಾಡಿಬಿಟ್ಟೆ, ದಯವಿಟ್ಟು ಕ್ಷಮಿಸು. ಇನ್ನು ಮುಂದೆ ಯಾವತ್ತೂ ಹೀಗೆ ಮಾಡಲ್ಲ, ನೀನು ಯಾವಾಗಲೂ ಸಂತೋಷವಾಗಿರು, ನಾನು ಇನ್ನು ಮುಂದೆ ನಿನಗೆ ತೊಂದರೆ ಕೊಡಲ್ಲ, ನನ್ನಷ್ಟಕ್ಕೆ ನಾನಿರುವೆ" ಎಂದು ತಿಳಿಸಿದ್ದ. ನೊಂದ ಬಾಲಕಿ ಆತ್ಮಹತ್ಯೆಗೆ ಯತ್ನಿಸಿದ್ದಳು.