ಬೆಳಗಾವಿ: ನದಿಯಲ್ಲಿ ಮುಳುಗುತ್ತಿದ್ದ ಇಬ್ಬರನ್ನು ರಕ್ಷಿಸಿ ವ್ಯಕ್ತಿಯೋರ್ವ ಮೃತಪಟ್ಟ ಘಟನೆ ರಾಮದುರ್ಗ ತಾಲ್ಲೂಕಿನ ಅವರಾದಿ ಗ್ರಾಮದ ಸಮೀಪದ ಮಲಪ್ರಭಾ ನದಿಯಲ್ಲಿ ಭಾನುವಾರ ನಡೆದಿದೆ. ಶ್ರೀಶೈಲ (47) ಮೃತರು.
ಸೋಮವಾರ ಅವರಾದಿಯಲ್ಲಿ ಪರಿಚಿತರೊಬ್ಬರ ಮದುವೆ ನಿಶ್ಚಯವಾಗಿತ್ತು. ಅದಕ್ಕೂ ಮುನ್ನಾದಿನ ನಡೆದ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಶ್ರೀಶೈಲ ಊಟ ಮಾಡುತ್ತಿದ್ದರು. ಆಗ ಮಲಪ್ರಭಾ ನದಿಯಲ್ಲಿ ಇಬ್ಬರು ಮುಳುಗುತ್ತಿರುವ ವಿಷಯ ಗೊತ್ತಾಗಿದೆ. ತಕ್ಷಣ ಅರ್ಧಕ್ಕೆ ಊಟ ಬಿಟ್ಟು ನದಿಯತ್ತ ದೌಡಾಯಿಸಿ ನೀರಿನಲ್ಲಿ ಮುಳುಗುತ್ತಿದ್ದ ಆ ಇಬ್ಬರನ್ನು ರಕ್ಷಿಸಿದ್ದಾರೆ. ಆದರೆ, ಶ್ರೀಶೈಲ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ. 47 ವರ್ಷ ವಯಸ್ಸಿನ ಶ್ರೀಶೈಲ ತಾಯಿಯೊಂದಿಗೆ ಜೀವನ ನಡೆಸುತ್ತಿದ್ದರು.
ಈ ಬಗ್ಗೆ ಮೃತನ ಸಹೋದರ ನಾಗರಾಜ ಮಾತನಾಡಿ, "ಭಾನುವಾರ ಬಾಲಕನೊಬ್ಬ ನದಿಗೆ ಈಜಲು ಹೋಗಿ ಮುಳುಗುತ್ತಿದ್ದ. ಅವನ ರಕ್ಷಣೆಗೆ ಹೋಗಿದ್ದ ಯುವಕನೂ ನೀರಿನಲ್ಲಿ ಸಿಲುಕಿದ್ದ. ಅವರಿಬ್ಬರನ್ನು ನನ್ನ ತಮ್ಮ ದಡಕ್ಕೆ ತಂದ. ಆದರೆ, ಆತ ಮಾತ್ರ ಮರಳಿ ಬರಲಿಲ್ಲ. ಕೃಷಿ ಕೆಲಸ ಮಾಡಿಕೊಂಡು ತಾಯಿ ಜೊತೆಗೆ ವಾಸವಿದ್ದ. ನದಿಯಲ್ಲಿ ಯಾರಾದ್ರೂ ಸಿಲುಕಿದ್ದಾರೆ ಅಂತಾ ಗೊತ್ತಾದ ತಕ್ಷಣ ನೆರವಿಗೆ ಧಾವಿಸುತ್ತಿದ್ದ. ಊರಲ್ಲಿ ಏನೇ ಸಾಮಾಜಿಕ ಕೆಲಸವಿದ್ದರೂ ಮುಂದೆ ನಿಂತು, ನಿಸ್ವಾರ್ಥ ಸೇವೆ ಸಲ್ಲಿಸುತ್ತಿದ್ದ. ಎಲ್ಲರಿಗೂ ಬೇಕಾದ ವ್ಯಕ್ತಿಯಾಗಿದ್ದ. ಸರ್ಕಾರ ಏನಾದರೂ ಪರಿಹಾರ ಕೊಡಿಸಬೇಕು" ಎಂದು ಕೇಳಿಕೊಂಡರು.
ಇದನ್ನೂ ಓದಿ:ಝೀಲಂ ನದಿಯಲ್ಲಿ ಮಗುಚಿದ ದೋಣಿ: ಮಕ್ಕಳು ಸೇರಿ 6 ಮಂದಿ ಸಾವು, ಐವರ ರಕ್ಷಣೆ - Passenger boat capsizes