ಬೆಂಗಳೂರು:ನನ್ನ ಬೆತ್ತಲೆ ವಿಡಿಯೋ ಮಾಡಲು ಒಂದು ಗ್ಯಾಂಗ್ ಸಿದ್ಧವಾಗಿತ್ತು, ಅದೂ ಸಹ ರಾಜಕೀಯ ಷಡ್ಯಂತ್ರವೇ ಎಂದು ವಕೀಲ ಹಾಗೂ ಬಿಜೆಪಿ ಮುಖಂಡ ದೇವರಾಜೇಗೌಡ ಹೇಳಿದ್ದಾರೆ. ನಗರದ ಪ್ರೆಸ್‌ಕ್ಲಬ್‌ನಲ್ಲಿ ಇಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ನನ್ನನ್ನು ಹನಿಟ್ರ್ಯಾಪ್ ಮಾಡಲು ಯತ್ನಿಸಿ ಒಂದು ಗ್ಯಾಂಗ್ ವಿಫಲವಾಯ್ತು, ನಾನು ಕೂಡ ಸಂತ್ರಸ್ತ. ಅದರ ಕುರಿತು ಆಗ ಹೆಬ್ಬಾಳ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದೆ. ಪ್ರಜ್ವಲ್ ಪ್ರಕರಣದಲ್ಲಿ ಎಸ್‌ಐಟಿ ತನಿಖೆಗೆ ಕೊಟ್ಟ ನಂತರ ಆ ಎಫ್‌ಐಆರ್ ದಾಖಲಾಯಿತು. ಎಫ್‌ಐಆರ್ ಆದ ನಂತರ ಮತ್ತೆ ಲೈಂಗಿಕ ದೌರ್ಜನ್ಯ ಪ್ರಕರಣವಾಯಿತು ಎಂದರು.
ಪ್ರಜ್ವಲ್ ರೇವಣ್ಣನ ಅಶ್ಲೀಲ ವಿಡಿಯೋ ಪೆನ್‌ಡ್ರೈವ್ ಹಂಚಿಕೆ ಮಾಡಿರುವವರ ವಿರುದ್ಧವೂ ಎಫ್‌ಐಆರ್ ಆಗಿತ್ತು. ಆದರೆ, ಆ ಪ್ರಕರಣ ಎಸ್‌ಐಟಿಗೆ ವರ್ಗಾವಣೆ ಮಾಡಿಲ್ಲ. ಹೀಗಾಗಿ ಪ್ರಕರಣದಲ್ಲಿ ನನ್ನನ್ನು ಸಾಕ್ಷಿಯಾಗಿ ಕರೆಯುವ ಅಗತ್ಯವಿಲ್ಲ. ಆದರೂ, ಅಧಿಕಾರಿಗಳು ನನ್ನಿಂದ ಹೇಳಿಕೆ ಪಡೆದರು. ಒಂದು ಲೈಂಗಿಕ ದೌರ್ಜನ್ಯ ಹಾಗೂ ಎರಡನೆಯದಾಗಿ ಪೆನ್‌ಡ್ರೈವ್ ಹಂಚಿಕೆ ಬಗ್ಗೆ ತನಿಖೆ ಆಗಬೇಕು. ಅಶ್ಲೀಲ ವಿಡಿಯೋ ಬಿಡುಗಡೆ ಬಳಿಕ ಹಲವು ರಾಜಕೀಯ ನಾಯಕರ ರಕ್ಷಣೆಯಾಗುತ್ತಿದೆ ಎಂದು ಆರೋಪಿಸಿದರು.
ಈ ಹಿಂದೆ ಸಂಸದ ಪ್ರಜ್ವಲ್ ರೇವಣ್ಣನ ಮಾಜಿ ಕಾರು ಚಾಲಕ ಕಾರ್ತಿಕ್ ಪತ್ನಿ ಮೇಲೆ ಹಲ್ಲೆ ನಡೆದಾಗ ಕೆಲ ತಿಂಗಳುಗಳ ಹಿಂದೆ ಸರ್ಕಾರಕ್ಕೆ ಪತ್ರ ಬರೆದಿದ್ದೆ. ಆದರೆ, ನ್ಯಾಯ ಸಿಗಲಿಲ್ಲ. ಈಗ ಅವರ ಪಕ್ಷದ ನಾಯಕರನ್ನೇ ಮಹಿಳಾ ಆಯೋಗದ ಅಧ್ಯಕ್ಷರನ್ನಾಗಿ ಮಾಡಿದ್ದಾರೆ. ಆದ್ದರಿಂದ ಅವರ ಪತ್ರವನ್ನು ಮುಖ್ಯಮಂತ್ರಿ ಪುರಸ್ಕರಿಸುತ್ತಾರೆ. ಅಶ್ಲೀಲ ವಿಡಿಯೋ ಹಂಚಿಕೆ ಮಾಡಿರುವುದು ಘೋರ ಅಪರಾಧ. ಅವರ ವಿರುದ್ಧ ಶಿಸ್ತುಕ್ರಮ ತೆಗೆದುಕೊಳ್ಳಬೇಕು ಎಂದರು.