ಬೆಂಗಳೂರು: ಸರಿಯಿದ್ದ ಫ್ರಿಡ್ಜ್ ರಿಪೇರಿಗೆ ಬಂದಿದೆ ಎಂದು ಸುಳ್ಳು ಹೇಳಿ ತಮ್ಮ ಬಳಿ ಸರ್ವೀಸ್ ಮಾಡಿಸಿಕೊಂಡರೆ ಹೆಚ್ಚುವರಿಯಾಗಿ ಗಿಫ್ಟ್ ಕೊಡುವುದಾಗಿ ನಂಬಿಸಿ ವೃದ್ದನಿಂದ 32 ಸಾವಿರ ರೂಪಾಯಿ ಪೀಕಿದ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಈ ಸಂಬಂಧ ರಾಜಾಜಿನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ಕೂಡಾ ದಾಖಲಾಗಿದೆ.
73 ವರ್ಷದ ವೃದ್ದ ಗಂಗರಾಜು ಎಂಬುವರು ವಂಚನೆಗೊಳಗಾದವರಾಗಿದ್ದಾರೆ. ಇವರು ನೀಡಿದ ದೂರಿನ ಮೇರೆಗೆ ಪೊಲೀಸರು ಅಪರಿಚಿತ ವಂಚಕನ ವಿರುದ್ಧ ಎಫ್ಐಆರ್ ದಾಖಲಿಸಿಕೊಂಡು ತನಿಖೆ ಮುಂದುವರೆಸಿದ್ದಾರೆ.
ಘಟನೆಯ ಹಿನ್ನೆಲೆ:ರಾಜಾಜಿನಗರ 5ನೇ ಹಂತದಲ್ಲಿ ಕಳೆದ 35 ವರ್ಷಗಳಿಂದ ಗಂಗರಾಜು ವಾಸವಿದ್ದಾರೆ. ಇವರ ಪುತ್ರ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದು, ಜ.13ರಂದು ಮನೆಯಲ್ಲಿ ಒಬ್ಬರೇ ಇರುವಾಗ ಆರೋಪಿ ಬಂದಿದ್ದಾನೆ. ನಮಸ್ಕಾರ ಸಾರ್ ನಿಮ್ಮ ಮನೆ ಪ್ರಿಡ್ಜ್ ರಿಪೇರಿ ಮಾಡಿದ್ದು ನಾನೇ.. ಹೇಗಿದೆ ಪ್ರಿಡ್ಜ್ ಎಂದು ಹೇಳಿದ್ದಾನೆ. ಈತನೇ ಪ್ರಿಡ್ಜ್ ರಿಪೇರಿ ಮಾಡಿರಬಹುದು ಎಂದು ಭಾವಿಸಿ ಚೆನ್ನಾಗಿದೆ ಉತ್ತರ ನೀಡಿದ್ದರು. ಪ್ರಿಡ್ಜ್ ಪರಿಶೀಲಿಸುವುದಾಗಿ ಆರೋಪಿಯು ಮನೆಗೆ ಪ್ರವೇಶಿಸಿ ಪರಿಶೀಲನೆ ನೆಪದಲ್ಲಿ ಪ್ರಿಡ್ಜ್ ಕೂಲಿಂಗ್ ಹೋಗಿದೆ. ರೆಡಿಯೇಟರ್ ಸುಟ್ಟಿದ್ದು, ಸರ್ವೀಸ್ ಚಾರ್ಜ್ ಸೇರಿ ಒಟ್ಟು 32 ಸಾವಿರವಾಗಲಿದೆ ಎಂದು ಸುಳ್ಳು ಹೇಳಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
32 ಸಾವಿರಕ್ಕೆ ಹೊಸ ಪ್ರಿಡ್ಜ್ ಬರಲಿದೆ ಎಂಬ ವೃದ್ಧ ಪ್ರಶ್ನೆಗೆ ಉತ್ತರಿಸಿದ ಆರೋಪಿಯು ಇದು ಹಳೆ ಪ್ರಿಡ್ಜ್ ಆಗಿದ್ದರೂ ಗುಣಮಟ್ಟದಿಂದ ಕೂಡಿದೆ. ಈ ತರಹ ರೆಫ್ರಿಜರೇಟರ್ ಎಲ್ಲಿಯೂ ಸಿಗುವುದಿಲ್ಲ. ಹೀಗಾಗಿ ರಿಪೇರಿ ಮಾಡಿಸಿಕೊಳ್ಳಿ ಸರ್ ಬೊಗಳೆ ಬಿಟ್ಟಿದ್ದ. ಕಡಿಮೆ ದರದಲ್ಲಿ ಪ್ರಿಡ್ಜ್ ರಿಪೇರಿ ಮಾಡುವಂತೆ ಹೇಳಿದರೂ ಆರೋಪಿ ಒಪ್ಪಿರಲಿಲ್ಲ.