ಚಾಮರಾಜನಗರ:ಕಳೆದ 2 ವಾರಗಳಿಂದ ಸುರಿಯುತ್ತಿರುವ ನಿರಂತರ ಮಳೆಗೆ ಚಾಮರಾಜನಗರ ಜಿಲ್ಲೆಯ ಹಲವು ಕೆರೆಗಳು ಭರ್ತಿಯಾಗುತ್ತಿದ್ದು, ಇನ್ನೂ ಹಲವು ಕೆರೆಗಳು ನೀರಿಲ್ಲದೇ ಖಾಲಿ - ಖಾಲಿಯಾಗಿವೆ. ಉತ್ತಮ ಮಳೆ ಸುರಿದಿರುವ ಹಿನ್ನೆಲೆ ನಾಡಿನಷ್ಟೇ ಅಲ್ಲದೇ ಕಾಡಿನ ಕೆರೆಗಳು ಕೂಡ ತುಂಬಿದ್ದು, ನೀರಿಗಾಗಿ ವನ್ಯಜೀವಿಗಳು ಪರದಾಡುವುದು ತಪ್ಪಿದೆ. ಬಂಡೀಪುರ, ಬಿಆರ್ಟಿ ಭಾಗದ ಅರಣ್ಯ ಪ್ರದೇಶ ಹಸಿರು ಹೊದ್ದಿಕೊಳ್ಳುತ್ತಿದ್ದು ಅರಣ್ಯಕ್ಕೀಗ ಜೀವಕಳೆ ಬಂದಿದೆ.
ಚಾಮರಾಜನಗರ ತಾಲೂಕಿನ ದೊಡ್ಡರಾಯಪೇಟೆ ಕೆರೆ, ಉಮ್ಮತ್ತೂರು ಕೆರೆ, ಹುತ್ತೂರು ಕೆರೆ, ಹನೂರು ತಾಲೂಕಿನ ಗೋಪಿನಾಥಂ ಕೆರೆ, ಕೌಲಿಹಳ್ಳಕೆರೆ ಭರ್ತಿಯಾಗುತ್ತಿದೆ. ಗುಂಡ್ಲುಪೇಟೆ ತಾಲೂಕಿನ ಬೇರಂಬಾಡಿ ಕೆಂಪು ಸಾಗರ ಕೆರೆ, ಹೊನ್ನೇಗೌಡನಹಳ್ಳಿ ವಡ್ಡರಗಟ್ಟೆ ಕೆರೆ ಹಾಗೂ ಹಾಲಹಳ್ಳಿ ಅಣೆಕಟ್ಟೆ ತುಂಬಿ ಕೋಡಿ ಬಿದ್ದಿದೆ. ಜೊತೆಗೆ ಗುಂಡ್ಲುಪೇಟೆ ತಾಲೂಕಿನ ಹಲವು ಕೆರೆಗಳಿಗೆ ಶೇ.50ರಿಂದ 80 ಭಾಗ ನೀರು ಬಂದಿದ್ದು, ತುಂಬುವ ಹಂತಕ್ಕೆ ತಲುಪಿದೆ.
ಬರಗಿ ಕೆರೆ, ಮುಂಟೀಪುರ ಕೆರೆ, ದೇವರಹಳ್ಳಿ ಕೆರೆ, ಗೋಪಾಲಪುರ ಕೆರೆ, ಕನ್ನೇಗಾಲ ಕೆರೆ, ಕೂತನೂರು ಕೆರೆ, ಹಂಗಳ ಹೀರಿಕೆರೆ, ಹಂಗಳ ದೊಡ್ಡಕೆರೆ, ಮಂಗಲ, ಎಲಚೆಟ್ಟಿ, ಜಕ್ಕಹಳ್ಳಿ, ಕಮರಹಳ್ಳಿ ಕೆರೆ, ದೇವಲಾಪುರ ಕೆರೆ, ಕುರುಬರಹುಂಡಿ ಕೆರೆ ಸೇರಿದಂತೆ ಇನ್ನಿತರ ಹಲವು ಕೆರೆಗಳಿಗೆ ಒಳ ಹರಿವಿನ ಪ್ರಮಾಣದಲ್ಲಿ ಏರಿಕೆ ಕಂಡಿದ್ದು, ಶೇ.50ರಷ್ಟು ನೀರು ತುಂಬಿದೆ. ಜೊತೆಗೆ ಕಾಲುವೆಗಳ ಮೂಲಕ ನೀರು ಹೆಚ್ಚಿನ ಪ್ರಮಾಣದಲ್ಲಿ ಕೆರೆಗಳಿಗೆ ಹರಿದು ಬರುತ್ತಿದೆ. ವಡ್ಡಗೆರೆ ಕೆರೆಗೆ ಏತ ನೀರಾವರಿ ಯೋಜನೆ ಹಾಗೂ ಮಳೆಯಿಂದ ನೀರು ಬರುತ್ತಿದ್ದು, ತುಂಬಿ ಕೋಡಿ ಬೀಳುವ ಹಂತ ತಲುಪಿದೆ.