ಚಾಮರಾಜನಗರ: ಗುಂಡ್ಲುಪೇಟೆ ತಾಲೂಕಿನ ಸಾವಯವ ರೈತನೊಬ್ಬ ವಿಶೇಷವಾಗಿ, ಅರ್ಥಪೂರ್ಣವಾಗಿ ಮದುವೆ ಆಗುವ ಮೂಲಕ ಜನರ ಗಮನ ಸೆಳೆದಿದ್ದಾರೆ. ಗುಂಡ್ಲುಪೇಟೆ ತಾಲೂಕಿನ ಕೆಲಸೂರುಪುರದ ವಸಂತ ಕುಮಾರ್ (ಅಕ್ಷಯ್) ಭಾನುವಾರದಂದು ಯಾವುದೇ ಶಾಸ್ತ್ರ- ಸಂಪ್ರದಾಯಗಳಿಲ್ಲದೇ, ಸಾವಯವ ಸಂತೆ ಏರ್ಪಡಿಸಿ, ವಿಶೇಷ ವಚನ ಕಲ್ಯಾಣ ಮಹೋತ್ಸವದ ಮೂಲಕ ರಾಧಿಕಾ (ಪಾರ್ವತಿ)ಅವರ ಜೊತೆ ಬಾಳ ಪಯಣ ಆರಂಭಿಸಿದರು.
ಗುಂಡ್ಲುಪೇಟೆ ಜೆಎಸ್‍ಎಸ್ ಅನುಭವ ಮಂಟಪದಲ್ಲಿ ನಡೆದ ಈ ವಿಶೇಷ ಮದುವೆಯಲ್ಲಿ ಸಂತೆಯೇ ಕೇಂದ್ರ ಬಿಂದುವಾಗಿತ್ತು. ಕಲ್ಯಾಣಮಂಟಪದ ಪ್ರವೇಶದ್ವಾರದಲ್ಲಿ ನೈಸರ್ಗಿಕ ಕೃಷಿಕರು ಸಾವಯವ ಮಳಿಗೆ ತೆರೆದಿದ್ದರು. ವಚನ ಕಲ್ಯಾಣ ಮಹೋತ್ಸವಕ್ಕೆ ಬಂದಿದ್ದ ವಧು-ವರನ ಕಡೆಯವರು ಸಾವಯವ ಪದಾರ್ಥಗಳನ್ನು ಖರೀದಿಸಿ ರೈತರನ್ನು ಪ್ರೋತ್ಸಾಹಿಸಿದರು. ಸ್ಥಳದಲ್ಲಿ ಹಾಜರಿದ್ದ ಸಾವಯವ ಕೃಷಿಕರು ಕೃಷಿಯ ಮಹತ್ವದ ಬಗ್ಗೆ ತಿಳಿಸಿಕೊಡುವ ಮೂಲಕ ಕೃಷಿ ಜ್ಞಾನದ ಪ್ರಸಾರವೂ ಆಯಿತು.