ಕಾಂಕ್ರೀಟ್ ರಸ್ತೆಯ ತಡೆಗೋಡೆ ಕುಸಿತ (ETV Bharat) ಸಕಲೇಶಪುರ:ಬೆಂಗಳೂರು ಮಂಗಳೂರು ರಾಷ್ಟ್ರೀಯ ಹೆದ್ದಾರಿ 75ರಲ್ಲಿ ಕಾಂಕ್ರೀಟ್ ರಸ್ತೆಯ ತಡೆಗೋಡೆ ಸಂಪೂರ್ಣ ಕುಸಿದು ಒಂದು ಬದಿಯ ರಸ್ತೆ ಸಂಚಾರ ಬಂದ್ ಆಗಿದೆ. ಹೀಗಾಗಿ ಏಕಮುಖ ಸಂಚಾರಕ್ಕೆ ಅವಕಾಶ ನೀಡಲಾಗಿದೆ.
ತಾಲೂಕಿನ ಗುಲಗಳಲೆ ಗ್ರಾಮದ ರಾಟೆಮನೆ ಸಮೀಪ 40 ಅಡಿ ಎತ್ತರಕ್ಕೆ ನಿರ್ಮಿಸಿದ್ದ ತಡೆಗೋಡೆ ರಾತ್ರಿ ಸುರಿದ ಭಾರಿ ಮಳೆಗೆ ಕೊಚ್ಚಿಕೊಂಡು ಹೋಗಿದ್ದು ಕಾಂಕ್ರೀಟ್ ರಸ್ತೆ ಬಿರುಕು ಬಿಡುತ್ತಿದೆ. ಇದರಿಂದ ಒಂದು ಪಥದ ರಸ್ತೆ ಬಂದ್ ಆಗಿದ್ದು, ಏಕಮುಖವಾಗಿ ವಾಹನಗಳನ್ನು ಬಿಡಲಾಗುತ್ತಿದೆ.
ಇನ್ನು ಮಾರನಹಳ್ಳಿವರೆಗೆ ನಡೆಯುತ್ತಿರುವ ಚತುಷ್ಪಥ ರಸ್ತೆ ನಿರ್ಮಾಣ ಕಾಮಗಾರಿಯ ಹಲವು ಕಡೆ ದೊಡ್ಡ ಪ್ರಮಾಣದಲ್ಲಿ ಮಣ್ಣು ಕುಸಿಯುತ್ತಿದ್ದು, ಆತಂಕ ಎದುರಾಗಿದೆ. ಸಕಲೇಶಪುರ ಪಟ್ಟಣದ ಮಳಲಿ ಬಳಿಯ ನಿರ್ಮಾಣ ಹಂತದ ರಾಷ್ಟ್ರೀಯ ಹೆದ್ದಾರಿಯ ಇಕ್ಕೆಲಗಳಲ್ಲಿ ದೊಡ್ಡ ಪ್ರಮಾಣದಲ್ಲಿ ಮಣ್ಣು ಕುಸಿದು ಬೀಳುತ್ತಿದೆ. ತಡೆ ಗೋಡೆ ನಿರ್ಮಿಸದೇ ಕಾಂಕ್ರಿಟ್ ರಸ್ತೆ ನಿರ್ಮಾಣ ಮಾಡಿರುವ ಕಾರಣ ಸಕಲೇಶಪುರದಿಂದ ಆಲೆ ಬೇಲೂರಿಗೆ ತೆರಳೋ ಮಾರ್ಗದ ಮೇಲ್ಸೇತುವೆಯೇ ಕುಸಿದು ಬೀಳುವ ಭೀತಿ ಎದುರಾಗಿದೆ.
ನಿರಂತರ ಮಳೆಯಿಂದ ಸೇತುವೆಯ ಸುತ್ತಲೂ ಇದೇ ರೀತಿ ಮಣ್ಣು ಕುಸಿಯುತ್ತಾ ಸಾಗಿದರೆ ಸಂಚಾರವೇ ಬಂದ್ ಆಗುವ ಸಾಧ್ಯತೆ ಇದೆ. ಹಾಸನ ಜಿಲ್ಲೆಯಲ್ಲಿ ಮಳೆಯ ಅಬ್ಬರ ಮುಂದುವರಿದಿದ್ದು, ಭಾನುವಾರದಿಂದ ಸುರಿಯುತ್ತಿರುವ ವರ್ಷಧಾರೆಯಿಂದಾಗಿ ಸಕಲೇಶಪುರ, ಬೇಲೂರು, ಆಲೂರು ಮತ್ತು ಹಾಸನ ತಾಲೂಕಿನ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಿಗೆ ಜಿಲ್ಲಾಡಳಿತದ ಮೂಲಕ ರಜೆ ಘೋಷಣೆ ಮಾಡಲಾಗಿದೆ.
ಅದೇ ರೀತಿ ಸಕಲೇಶಪುರ, ಆಲೂರು, ಬೇಲೂರು ಹಾಗು ಅರಕಲಗೂಡಿನ ಪದವಿ ಪೂರ್ವ ಕಾಲೇಜುಗಳಿಗೆ ರಜೆ ನೀಡಿ, ಹೆಚ್ಚಿನ ಮಳೆಯಾದರೆ ಉಳಿದ ತಾಲೂಕಿನ ಆಯಾ ಕಾಲೇಜುಗಳ ಪ್ರಾಂಶುಪಾಲರು ರಜೆ ಬಗ್ಗೆ ತೀರ್ಮಾನ ಕೈಗೊಳ್ಳುವಂತೆ ಜಿಲ್ಲಾಡಳಿತ ಸೂಚನೆ ನೀಡಲಾಗಿದೆ.
ಇನ್ನು ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನಾದ್ಯಂತ ಭಾರಿ ಪ್ರಮಾಣದ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಹಾಸನದ ಜೀವನದಿಯಾಗಿರುವ ಹೇಮಾವತಿ ನದಿಯಲ್ಲಿ ಒಳಹರಿವಿನ ಪ್ರಮಾಣ ಹೆಚ್ಚಾಗಿದೆ. ಇದೇ ರೀತಿ ಮಳೆ ಮುಂದುವರೆದರೆ ಡ್ಯಾಂ ಭರ್ತಿಯಾಗಲಿದೆ. ಜಿಲ್ಲೆಯಲ್ಲಿ ಇನ್ನೂ ಎರಡು ದಿನ ಹೆಚ್ಚಿನ ಮಳೆಯಾಗುವ ಬಗ್ಗೆ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದ್ದು, ಆರೆಂಜ್ ಅಲರ್ಟ್ ಘೋಷಣೆ ಮಾಡಿದೆ.
ಇದನ್ನೂ ಓದಿ:ಮನೆಯವರು ನೋಡ ನೋಡುತ್ತಿದ್ದಂತೆ ಕುಸಿದ ಗುಡ್ಡ; ಪತಿ ಸಾವು, ಅವಘಡದಿಂದ ಪಾರಾದ ಪತ್ನಿ - Man died after a hill collapsed